ನವದೆಹಲಿ: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು (Air India) ದೇಶದ ಪ್ರಮುಖ ಏರ್‌ಲೈನ್ಸ್‌ಗಳಲ್ಲಿ ಒಂದಾಗಿದೆ. ಉತ್ತಮ ಸೌಕರ್ಯಗಳು, ದಕ್ಷ ಸಿಬ್ಬಂದಿ ಸೇರಿ ಹಲವು ದಿಸೆಯಲ್ಲಿ ವಿಮಾನಯಾನ ಸಂಸ್ಥೆಯು ದೇಶದ ಗಮನ ಸೆಳೆದಿದೆ. ವಿದೇಶದಲ್ಲಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿದರೆ ಇದೇ ಏರ್‌ಲೈನ್ಸ್ ವಿಮಾನಗಳು ದೌಡಾಯಿಸುತ್ತವೆ. ಆದರೆ, ಇಂತಹ ವಿಮಾನಯಾನ ಸಂಸ್ಥೆಗೆ ಪೈಲಟ್‌ಗಳ ಕೊರತೆ ಎದುರಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯಲ್ಲಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೈಲಟ್ ಕೊರತೆಯಿಂದಾಗಿ ವಿಮಾನವೊಂದು ಹಾರಾಟ ನಡೆಸದೆ 182 ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.
ಹೌದು, ದೆಹಲಿಯಿಂದ ಕೋಲ್ಕೊತಾಗೆ ಹೊರಡಬೇಕಿದ್ದ ಏರ್ ಇಂಡಿಯಾ AI 762 ವಿಮಾನವು ಬುಧವಾರ ರಾತ್ರಿ (ಜುಲೈ 5) 9 ಗಂಟೆಗೆ ಹಾರಾಟ ಆರಂಭಸಿಬೇಕಿತ್ತು. ಆದರೆ, ಪೈಲಟ್‌ಗಳ ಕೊರತೆಯಿಂದಾಗಿ 2 ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟ ವಿಳಂಬವಾಗಿದೆ. ಇದರಿಂದಾಗಿ 182 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯಬೇಕಾಯಿತು. ಸಾಮಾನ್ಯವಾಗಿ ಹವಾಮಾನ್ಯ ವೈಪರೀತ್ಯ, ತಾಂತ್ರಿಕ ದೋಷಗಳಿಂದ ವಿಮಾನ ಹಾರಾಟ ವಿಳಂಬವಾಗುತ್ತದೆ. ಆದರೆ, ಪೈಲಟ್ ಇಲ್ಲದ ಕಾರಣ ವಿಮಾನ ಹಾರಾಟ ತಡವಾಗಿದ್ದಕ್ಕೆ ನೂರಾರು ಪ್ರಯಾಣಿಕರು ವಿಮಾನಯಾನ ಸಂಸ್ಥೆಗೆ ಹಿಡಿಶಾಪ ಹಾಕಿದ್ದಾರೆ.
Is #airindia running short of water that this had to be witnessed@ delhi airport for the flight AI762 with ETD @21:00hr 5 July, was delayed initially by 2 hr passenger were made to board the plane by 23:00 hrs. 1am people felt suffocating and started to ask for any updates pic.twitter.com/NKSOVRgKCr
— Harsh nahar (@Harsh69340521) July 5, 2023
ವಿಮಾನ ಹಾರಾಟ ವಿಳಂಬವಾದ ಕುರಿತು ಹರ್ಷ್ ನಹಾರ್ ಎಂಬುವರು ಟ್ವಿಟರ್‌ನಲ್ಲಿ ವಿಡಿಯೊ ಸಮೇತ ಪೋಸ್ಟ್ ಮಾಡಿದ್ದಾರೆ. “ರಾತ್ರಿ 9 ಗಂಟೆಗೆ ಹಾರಾಟ ಆರಂಭಿಸಬೇಕಿದ್ದ ಏರ್ ಇಂಡಿಯಾ ವಿಮಾನವು ಎರಡು ಗಂಟೆ ವಿಳಂಬವಾಗಿದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಹಾಗಾಗಿ, ಕೋಪಗೊಂಡು ಎಲ್ಲರೂ ಮಾಹಿತಿ ಕೇಳಲು ಮುಂದಾಗಿದ್ದಾರೆ” ಎಂದು ಹೇಳಿದ್ದಾರೆ. ಏರ್ ಇಂಡಿಯಾ ವಿಮಾನದ ಹಾರಾಟ ವಿಳಂಬವಾದ ಕುರಿತು ಜನ ಸಿಬ್ಬಂದಿಯನ್ನು ಕೇಳಿದ ವಿಡಿಯೊವನ್ನು ಅವರು ಹಂಚಿಕೊಂಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಲಂಡನ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಜೈಪುರದಲ್ಲಿ ಎಮರ್ಜನ್ಸಿ ಲ್ಯಾಂಡಿಂಗ್ ಮಾಡಿದ ಬಳಿಕ ಮತ್ತೆ ವಿಮಾನ ಹಾರಿಸಲು ವಿಮಾನದ ಪೈಲಟ್ ನಿರಾಕರಿಸಿದ ಕಾರಣ ಸುಮಾರು 350 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡಿದ್ದರು.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನದಲ್ಲಿ ಹೊಲಸು ಮಾಡಿದ ಪ್ರಯಾಣಿಕ; ಮಲ-ಮೂತ್ರ ವಿಸರ್ಜಿಸಿ, ಗಲಾಟೆ
ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಎ-112 ವಿಮಾನವು ಲಂಡನ್‌ನಿಂದ ಹಾರಾಟ ಆರಂಭಿಸಿದ್ದ, ದೆಹಲಿ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 4 ಗಂಟೆಗೆ ತಲುಪಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ವಿಮಾನವನ್ನು ಜೈಪುರದಲ್ಲಿ ಎಮರ್ಜನ್ಸಿ ಲ್ಯಾಂಡಿಂಗ್ ಮಾಡಲಾಗಿತ್ತು. ವಿಮಾನ ಲ್ಯಾಂಡ್ ಆದ ಬಳಿಕ ಮತ್ತೆ ಹಾರಾಟ ಆರಂಭಿಸಲು ಪೈಲಟ್ ನಿರಾಕರಿಸಿದ್ದರು. ನನ್ನ ಶಿಫ್ಟ್ ಅವಧಿ ಮುಗಿದಿದೆ, ನಾನು ಮತ್ತೆ ವಿಮಾನ ಹಾರಾಟ ಆರಂಭಿಸುವುದಿಲ್ಲ ಎಂದಿದ್ದರು.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ