Site icon Vistara News

ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ‘ದರ್ವಾಜೆ ಪೆ ದಸ್ತಕ್’;‌ ಏನಿದು ಬಾಗಿಲು ಬಡಿಯುವ ಯೋಜನೆ?

Kota Coaching Centre Room

20 year old NEET aspirant dies by suicide in Kota, 28th this year

ಜೈಪುರ: ರಾಜಸ್ಥಾನದ ಕೋಟಾ ನಗರದ ಖ್ಯಾತಿ ಬದಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET), ಜಂಟಿ ಪ್ರವೇಶ ಪರೀಕ್ಷೆ (JEE) ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರ‍್ಯಾಂಕ್‌ ಪಡೆದು, ವೈದ್ಯಕೀಯ, ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಪ್ರವೇಶ ಗಿಟ್ಟಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂಬುದರ ಬದಲು, ವಿದ್ಯಾರ್ಥಿಗಳ ಆತ್ಮಹತ್ಯೆಯ ನಗರವಾಗಿ ಬದಲಾಗಿದೆ. ನಗರದಲ್ಲಿರುವ ಕೋಚಿಂಗ್‌ ಸೆಂಟರ್‌ಗಳಲ್ಲಿ ಸಾಲು ಸಾಲು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಹಾಗಾಗಿ, ಕೋಟಾ ನಗರ ಪೊಲೀಸರು ವಿದ್ಯಾರ್ಥಿಗಳ ಆತ್ಮಹತ್ಯೆ (Kota Students Suicide) ತಡೆಗೆ “ದರ್ವಾಜೆ ಪೆ ದಸ್ತಕ್”‌ (Darwaze Pe Dastak) ಎಂಬ ಅಭಿಯಾನ ಆರಂಭಿಸಿದ್ದಾರೆ.

ಏನಿದು ಅಭಿಯಾನ?

ದರ್ವಾಜೆ ಪೆ ದಸ್ತಕ್‌ ಎಂದರೆ ಬಾಗಿಲು ಬಡಿಯುವುದು. ಕೋಟಾ ನಗರದ ಕೋಚಿಂಗ್‌ ಸೆಂಟರ್‌ಗಳಲ್ಲಿರುವ ಹಾಸ್ಟೆಲ್‌ಗಳು, ಪೇಯಿಂಗ್‌ ಗೆಸ್ಟ್‌ಗಳಲ್ಲಿರುವ (ಪಿಜಿ) ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಈ ಅಭಿಯಾನ ಜಾರಿಗೆ ತರಲಾಗಿದೆ. ಅಂದರೆ, ಹಾಸ್ಟೆಲ್‌ ವಾರ್ಡನ್‌ಗಳು, ಮೆಸ್‌ಗಳ ಮಾಲೀಕರು, ಊಟ, ತಿಂಡಿ ಪೂರೈಕೆದಾರರು ವಿದ್ಯಾರ್ಥಿಗಳ ಕೋಣೆಗಳಿಗೆ ತೆರಳಿದಾಗ ಅವರ ಮೇಲೆ ನಿಗಾ ಇಡುವುದು, ಸೂಕ್ಷ್ಮವಾಗಿ ಗಮನಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆಯೇ? ಅವರು ಸರಿಯಾಗಿ ಊಟ-ತಿಂಡಿ ಮಾಡುತ್ತಿದ್ದಾರೆಯೇ? ಊಟ ಮಾಡುವ ಕೋಣೆಗೆ ಸರಿಯಾಗಿ ಬರುತ್ತಿದ್ದಾರೆಯೇ? ಅವರ ಮೂಡ್‌ ಹೇಗಿದೆ? ಸರಿಯಾಗಿ ಅಭ್ಯಾಸ ಮಾಡುತ್ತಿದ್ದಾರೆಯೇ ಎಂಬುದು ಸೇರಿ ಹಲವು ವಿಷಯಗಳ ಮೇಲೆ ಹಾಸ್ಟೆಲ್‌ ವಾರ್ಡನ್‌ಗಳು, ಮೆಸ್‌ಗಳ ಮಾಲೀಕರು, ಸಿಬ್ಬಂದಿ ಹಾಗೂ ಊಟ-ತಿಂಡಿ ಪೂರೈಕೆದಾರರು ನಿಗಾ ಇಡಬೇಕು ಎಂಬುದಾಗಿ ಪೊಲೀಸರು ಸೂಚಿಸಿದ್ದಾರೆ.

ಇದನ್ನೂ ಓದಿ: Kota Coaching: ಆತ್ಮಹತ್ಯೆ ಆತಂಕ; ಕೋಟಾದಲ್ಲಿ 2 ತಿಂಗಳು ಪರೀಕ್ಷೆ ನಿಷೇಧಿಸಿದ ರಾಜಸ್ಥಾನ ಸರ್ಕಾರ

ಕೋಟಾ ನಗರದಲ್ಲಿ ಪ್ರಸಕ್ತ ವರ್ಷದಲ್ಲಿಯೇ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀಟ್‌, ಜೆಇಇ ಸೇರಿ ಹಲವು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದದಿರುವುದು, ತೇರ್ಗಡೆ ಹೊಂದದಿರುವ ಭಯ ಸೇರಿ ಹಲವು ಭೀತಿಯಿಂದ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಹಾಸ್ಟೆಲ್‌, ಪಿಜಿಗಳ ಸುತ್ತ ಬಲೆ ಅಳವಡಿಕೆ, ಫ್ಯಾನ್‌ಗಳಿಗೆ ಸ್ಪ್ರಿಂಗ್‌ ಅಳವಡಿಕೆ, ಕೌನ್ಸೆಲಿಂಗ್‌ ಸೇರಿ ಹಲವು ದಿಸೆಯಲ್ಲಿ ಆತ್ಮಹತ್ಯೆ ತಡೆಗೆ ಕ್ರಮ ತೆಗೆದುಕೊಳ್ಳಲಾಗಿದೆ.

Exit mobile version