ಕೇರಳದ ಕೊಯಿಕ್ಕೋಡ್ನಲ್ಲಿ ಕಳೆದ ತಿಂಗಳು ಶಾರೂಖ್ ಸೈಫಿ ಎಂಬಾತ ಕೊಯಿಕ್ಕೋಡ್ ಅಳಪುಳಾ-ಕಣ್ಣೂರ್ ಎಕ್ಸ್ಪ್ರೆಸ್ ರೈಲಲ್ಲಿ (Kerala train arson case) ಬೆಂಕಿ ಹಚ್ಚಿದ್ದ. ಇದರಿಂದಾಗಿ ಮೂವರು ಪ್ರಯಾಣಿಕರು ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ಕೇರಳ ರಾಜ್ಯ ಎಟಿಎಸ್ (ಭಯೋತ್ಪಾದನಾ ವಿರೋಧಿ ದಳ) ಘಟಕದ ಐಜಿ, ಹಿರಿಯ ಐಪಿಎಸ್ ಅಧಿಕಾರಿ ಪಿ.ವಿಜಯನ್ ಅವರನ್ನು ಕೇರಳ ಸರ್ಕಾರ ಅಮಾನತು ಮಾಡಿದೆ. ‘ಆರೋಪಿ ಶಾರೂಖ್ ಸೈಫಿಯ ಬಂಧನ, ಆತನನ್ನು ಮಹಾರಾಷ್ಟ್ರದ ರತ್ನಗಿರಿಯಿಂದ ಕೇರಳದ ಕೊಯಿಕ್ಕೋಡ್ಗೆ ಕರೆದುಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಸೋರಿಕೆ ಮಾಡಿದ ಆರೋಪದಡಿ ಈಗ ಪಿ.ವಿಜಯನ್ ಅಮಾನತುಗೊಂಡಿದ್ದಾರೆ.
ರೈಲಿನಲ್ಲಿ ಸಹ ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ ಆರೋಪಿಯ ಸ್ಥಳಾಂತರದ ಬಗ್ಗೆ ಮಾಹಿತಿ ಸೋರಿಕೆ ಮಾಡಿದ್ದು ತಪ್ಪು. ಇದು ಗಂಭೀರ ಸ್ವರೂಪದ ಭದ್ರತಾ ವೈಫಲ್ಯ ಎಂದು ಕೇರಳ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಜಿತ್ ಕುಮಾರ್ ನೀಡಿದ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
‘ಕೇರಳ ರೈಲಿನಲ್ಲಿ ಬೆಂಕಿ ಇಟ್ಟ ಆರೋಪಿಯನ್ನು ಐಜಿ ಶ್ರೇಣಿಯ ಅಧಿಕಾರಿ ಪಿ.ವಿಜಯನ್ ಮತ್ತು ಎಸ್ಐ ಶ್ರೇಣಿಯ ಅಧಿಕಾರಿ ಮನೋಜ್ ಕುಮಾರ್ ಕೆ ಅವರು ರಸ್ತೆ ಮಾರ್ಗದ ಮೂಲಕ ರತ್ನಗಿರಿಯಿಂದ ಕೊಯಿಕ್ಕೋಡ್ಗೆ ಕರೆದುಕೊಂಡು ಬರುತ್ತಿದ್ದರು. ಆದರೆ ಆ ಬಗ್ಗೆ ಮಾಹಿತಿ ವೈರಲ್ ಆಗಿದೆ. ಕೇರಳ ರೈಲು ಬೆಂಕಿ ಕೇಸ್ನ್ನು ಇಲ್ಲಿನ ಎಟಿಎಸ್ನ ಪೊಲೀಸ್ ಘಟಕ ಅತ್ಯಂತ ಕಾಳಜಿ/ಎಚ್ಚರಿಕೆಯಿಂದ ತನಿಖೆ ನಡೆಸಲು ಮುಂದಾಗಿದೆ. ಹೀಗಾಗಿ ಎಡಿಜಿಪಿ ಕೊಟ್ಟ ವರದಿ ಅತ್ಯಂತ ಮಹತ್ವ ಪಡೆದುಕೊಳ್ಳಲಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕೊಟ್ಟ ವರದಿಯನ್ನು ಆಧರಿಸಿ, ಈ ತನಿಖೆ ಮುಗಿಯುವವರೆಗೂ ಹಿರಿಯ ಐಪಿಎಸ್ ಅಧಿಕಾರಿ ಪಿ.ವಿಜಯನ್ ಅವರನ್ನು ಅಮಾನತಿನಲ್ಲಿ ಇಡಲು ನಿಶ್ಚಯಿಸಲಾಗಿದೆ’ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖವಾಗಿದೆ. ಪೊಲೀಸ್ ಪ್ರಧಾನ ಕಚೇರಿ ಎಡಿಜಿಪಿ ಕೆ.ಪದ್ಮಕುಮಾರ್ ಅವರು ತನಿಖೆಯ ನೇತೃತ್ವ ವಹಿಸಲಿದ್ದಾರೆ.
ಇದನ್ನೂ ಓದಿ: Kerala train fire: ಕೇರಳ ರೈಲು ಬೆಂಕಿ ಪ್ರಕರಣದ ತನಿಖೆ ಹೊಣೆ ಹೊತ್ತ ಎನ್ಐಎ
‘ಶಾರೂಖ್ ಸೈಫಿ ಮೂಲತಃ ನೊಯ್ಡಾದವನಾಗಿದ್ದ. ರೈಲಿನಲ್ಲಿ ಬೆಂಕಿ ಇಟ್ಟ ಬಳಿಕ ಓಡಿ ಹೋಗಿದ್ದ ಇವನನ್ನು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಬಳಿ ಬಂಧಿಸಲಾಗಿತ್ತು. ಅಲ್ಲಿಂದ ಒಂದು ಖಾಸಗಿ ಎಸ್ಯುವಿ ವಾಹನದಲ್ಲಿ ಕೊಯಿಕ್ಕೋಡ್ಗೆ ಕರೆದುಕೊಂಡು ಬರುವುದು ಪೊಲೀಸರ ಪ್ಲ್ಯಾನ್ ಆಗಿತ್ತು. ಯಾವುದೇ ಮಾಧ್ಯಮ ಮತ್ತು ಸಾರ್ವಜನಿಕರಿಗೆ ಈ ವಿಚಾರ ಗೊತ್ತಾಗಬಾರದು ಎಂಬುದು ಉದ್ದೇಶವಾಗಿತ್ತು. ಆದರೆ ಮಾರ್ಗಮಧ್ಯೆ ರಸ್ತೆ ಬದಿಯಲ್ಲಿ ವಾಹನ ಹಾಳಾಗಿ ನಿಂತಿತು. ಆ ವಾಹನದಲ್ಲಿ ಆರೋಪಿಯೊಂದಿಗೆ ಮೂವರು ಪೊಲೀಸರು ಮಾತ್ರ ಇದ್ದರು. ಅದರಲ್ಲಿದ್ದವನು ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಆರೋಪಿ ಎಂದು ಗೊತ್ತಾಗುತ್ತಿದ್ದಂತೆ ಆತನನ್ನು ನೋಡಲು ಜನ ನೆರೆದಿದ್ದರು. ಸುಮಾರು ಒಂದು ತಾಸು ಹೀಗೇ ಆಯಿತು. ವಾಹನದಲ್ಲಿದ್ದ ಐಜಿಯೇ ಇದಕ್ಕೆ ಹೊಣೆ ಎಂದು ಹೇಳಲಾಗಿದೆ.