ಕೋಲ್ಕತ್ತ: ಬಾಲಿವುಡ್‌ನ ಹೆಸರಾಂತ ಗಾಯಕ ಕೃಷ್ಣಕುಮಾರ್ ಕುನ್ನಾಥ್ ಹೃದಯಾಘಾತದಿಂದ ನಿಧನರಾಗಿದ್ದಾರೆ (krishnakumar kunnath Death) ಎಂದು ಹೇಳಲಾಗಿದ್ದರೂ ಅವರ ಮುಖ, ತಲೆಯ ಬಳಿ ಗಾಯಗಳಾಗಿದ್ದು ಕಂಡು ಬಂದ ಹಿನ್ನೆಲೆಯಲ್ಲಿ ಕೋಲ್ಕತ್ತದ ನ್ಯೂ ಮಾರ್ಕೆಟ್ ಪೊಲೀಸ್ ಸ್ಟೇಶನ್‌ನಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಕೆಕೆ ಎಂದೇ ಪ್ರಸಿದ್ಧರಾಗಿದ್ದ ಕೃಷ್ಣಕುಮಾರ್ ಮಂಗಳವಾರ ರಾತ್ರಿ ಕೋಲ್ಕತ್ತದಲ್ಲಿ ಕಾನ್ಸರ್ಟ್ (ಗಾನ ಗೋಷ್ಠಿ)ನಲ್ಲಿ ಪಾಲ್ಗೊಂಡಿದ್ದರು. ಗಾಯನದಿಂದ ಜನರನ್ನು ರಂಜಿಸಿದ ಕೆಕೆ ವಾಪಸ್ ಹೋಟೆಲ್‌ಗೆ ಹೋಗುತ್ತಿದ್ದಂತೆ ಕುಸಿದುಬಿದ್ದಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕುಳಿಯಲಿಲ್ಲ.
ಈ ಬಗ್ಗೆ ಮಾಹಿತಿ ಹಂಚಿಕೊಂಡ ಕೋಲ್ಕತ್ ಪೊಲೀಸ್ ಅಧಿಕಾರಿಯೊಬ್ಬರು, ಕೃಷ್ಣಕುಮಾರ್ ಕುನ್ನಾಥ್ ಸಾವಿಗೆ ಸಂಬಂಧಪಟ್ಟಂತೆ ಕೇಸ್ ದಾಖಲಿಸಿಕೊಂಡಿದ್ದೇವೆ. ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಅವರನ್ನು ಆಸ್ಪತ್ರೆಗೆ ಸೇರಿಸುವುದಕ್ಕೂ ಮೊದಲು ಏನೆಲ್ಲ ಆಯಿತು ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಅಷ್ಟೇ ಅಲ್ಲ, ಸ್ಥಳದಲ್ಲಿದ್ದ ಇಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಲ್ ಯಾದ್ ಆಯೇಂಗೇ ಯೇ ಫಲ್ ಎಂದು ಹಾಡಿ ಬಾಳ ಪಯಣ ಮುಗಿಸಿದ ಗಾಯಕ ಕೆಕೆ
ಕೃಷ್ಣಕುಮಾರ್ ಕುನ್ನಾಥ್ ಎರಡು ದಿನಗಳ ಕೋಲ್ಕತ್ತ ಪ್ರವಾಸದಲ್ಲಿದ್ದರು. ಇನ್ನೆರಡು ಕಾಲೇಜು ಸಮಾರಂಭಗಳಲ್ಲೂ ಅವರು ಹಾಡುವುದಿತ್ತು. ಮಂಗಳವಾರ ರಾತ್ರಿ ನಜ್ರುಲ್ ಮಂಚಾ ಅಡಿಟೋರಿಯಂನಲ್ಲಿ ಕೆಕೆ ಹಾಡಿದ್ದಾರೆ. ಕಾರ್ಯಕ್ರಮ ಮುಗಿದ ಅವರು ತಂಗಿದ್ದ ಹೋಟೆಲ್‌ನಲ್ಲಿ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಕೆಲವರಿಗೆ ಫೋಟೋಕ್ಕೆ ಪೋಸ್ ಕೊಟ್ಟ ಕೆಕೆ, ಮತ್ತೊಂದಷ್ಟು ಜನರಿಗೆ ಫೋಟೋ ಕೊಡಲು ನಿರಾಕರಿಸಿ, ಸುಮ್ಮನೆ ಹೋದರು. ತಮ್ಮ ಕೋಣೆ ಬಳಿ ಹೋಗುತ್ತಿದ್ದಂತೆ ಎಡವಿ ಕುಸಿದುಬಿದ್ದಿದ್ದಾರೆ. ಅವರು ತುಂಬ ಬಳಲಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾಗಿ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕೃಷ್ಣಕುಮಾರ್‌ರನ್ನು ರಾತ್ರಿ 10 ಗಂಟೆ ಹೊತ್ತಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಅವರ ಮೈಮೇಲೆ ಎರಡು ಗಾಯಗಳು ಕಂಡುಬಂದಿವೆ. ಒಂದು ತಲೆಯ ಎಡಭಾಗದಲ್ಲಿ ಮತ್ತು ಅವರ ತುಟಿಯ ಬಳಿ. ಹೃದಯ ಸ್ತಂಭನವಾಗಿದೆ ಎಂದು ವೈದ್ಯರು ಹೇಳಿದ್ದರೂ, ಪೋಸ್ಟ್‌ಮಾರ್ಟಮ್ ಬಳಿಕ ಸ್ಪಷ್ಟ ಮಾಹಿತಿ ಹೊರಬೀಳಲಿದೆ. ಘಟನೆ ನಡೆದ ಕೆಲವೇ ಹೊತ್ತಲ್ಲಿ ಅವರ ಪತ್ನಿಯೂ ಅಲ್ಲಿಗೆ ಆಗಮಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಹಾಡು ಮುಗಿಸಿದ ಗಾಯಕ ʼಕೆಕೆʼ, ಕೋಲ್ಕೊತಾ ಕನ್ಸರ್ಟ್ ಬಳಿಕ ಕುಸಿದು ಬಿದ್ದು ಸಾವು