ವಿಶ್ವದಾದ್ಯಂತ ಮೇ 1ರಂದು ಕಾರ್ಮಿಕರ ದಿನವನ್ನು (Labour Day 2024) ಆಚರಿಸಲಾಗುತ್ತಿದೆ. ದುಡಿಯುವ ಜನರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಶೋಷಣೆಯಿಂದ ಅವರನ್ನು ರಕ್ಷಿಸಲು ಪಣ ತೊಡುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಭಾರತದಲ್ಲೂ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ (Labour and Employment) ನೀಡಿರುವ ಮಾಹಿತಿ ಪ್ರಕಾರ ದೇಶದ ಕಾರ್ಮಿಕರಿಗೆ ಇರುವ ಯೋಜನೆಗಳು ಹೀಗಿವೆ.
ಇದನ್ನೂ ಓದಿ: Labour Day 2024: ಮೇ 1ರ ಕಾರ್ಮಿಕ ದಿನಾಚರಣೆಯ ಹಿನ್ನೆಲೆ ಏನು? ಏನಿದರ ಸಂದೇಶ?
ಪಿಎಂಜೆಜೆಬಿವೈ ಯೋಜನೆ (PMJJBY)
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಜೀವನ ಮತ್ತು ಅಂಗವೈಕಲ್ಯದಿಂದ ಕುಟುಂಬಕ್ಕೆ ರಕ್ಷಣೆಯನ್ನು ಒದಗಿಸಲು ರೂಪಿಸಲಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಗೆ 18 ರಿಂದ 50 ವರ್ಷಗಳ ಒಳಗಿನ ಜನರು ಪಡೆಯಬಹುದು. ಇದಕ್ಕಾಗಿ ಬ್ಯಾಂಕ್/ ಪೋಸ್ಟ್ ಆಫೀಸ್ ಖಾತೆಯನ್ನು ಹೊಂದಿರಬೇಕು. ಖಾತೆಯಿಂದ ಹಣ ಸ್ವಯಂ ಡೆಬಿಟ್ ಆಗಲು ಅಥವಾ ಸಕ್ರಿಯಗೊಳಿಸಲು ಖಾತೆ ಹೊಂದಿರುವವರು ತಮ್ಮ ಒಪ್ಪಿಗೆಯನ್ನು ನೀಡಬೇಕು. ವಿಮಾದಾರನ ಮರಣವಾದರೆ ಆತನ ಕುಟುಂಬಕ್ಕೆ ಈ ಯೋಜನೆಯಡಿಯಲ್ಲಿ 2 ಲಕ್ಷ ರೂ. ವರೆಗೆ ವಿಮೆ ಪಾವತಿಸಲಾಗುವುದು. ಇದರ ವಾರ್ಷಿಕ ಪ್ರೀಮಿಯಂ 436 ರೂ. ಇದು ವಿಮಾದಾರರ ಖಾತೆಯಿಂದ ನೇರವಾಗಿ ಕಡಿತಗೊಳ್ಳುವುದು.
ಪಿ ಎಂ ಎಸ್ ಬಿ ವೈ ಯೋಜನೆ (PMSBY)
ಜೀವನ ಮತ್ತು ಅಂಗವೈಕಲ್ಯದಿಂದ ರಕ್ಷಣೆಯನ್ನು ಒದಗಿಸಲು ರೂಪಿಸಿರುವ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ (PMSBY) ಸಹ 18 ರಿಂದ 70 ವರ್ಷಗಳ ವಯೋಮಾನದ ಜನರಿಗೆ ನೀಡಲಾಗುತ್ತದೆ. ಬ್ಯಾಂಕ್, ಪೋಸ್ಟ್ ಆಫೀಸ್ ಖಾತೆಯನ್ನು ಹೊಂದಿರುವವರು ಸ್ವಯಂ ಡೆಬಿಟ್‌ಗೆ ಸೇರಲು ಅಥವಾ ಸಕ್ರಿಯಗೊಳಿಸಲು ಒಪ್ಪಿಗೆಯನ್ನು ನೀಡಬೇಕು. ಈ ಯೋಜನೆಯಡಿಯಲ್ಲಿ ಅಪಾಯದ ಕವರೇಜ್ ವಿಮಾದಾರನ ಮರಣ ಅಥವಾ ಸಂಪೂರ್ಣ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ 2 ಲಕ್ಷ ರೂ. ಮತ್ತು ಭಾಗಶಃ ಶಾಶ್ವತ ಅಂಗವೈಕಲ್ಯಕ್ಕೆ 1 ಲಕ್ಷ ರೂ. ನೀಡಲಾಗುತ್ತದೆ. ಅಪಘಾತದ ಕಾರಣ ಪ್ರೀಮಿಯಂ ಮೊತ್ತ ವರ್ಷಕ್ಕೆ 20 ರೂ. ಇದಕ್ಕಾಗಿ ಖಾತೆದಾರರ ಬ್ಯಾಂಕ್, ಪೋಸ್ಟ್ ಆಫೀಸ್ ಖಾತೆಯಿಂದ ‘ಆಟೋ-ಡೆಬಿಟ್’ ಮೂಲಕ ಕಡಿತಗೊಳಿಸಬೇಕು.
ಎಬಿಪಿಎಂಜೆಎವೈ (ABPMJAY)
ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯಡಿ (ABPMJAY) ವಾರ್ಷಿಕ ಆರೋಗ್ಯ ರಕ್ಷಣೆಗಾಗಿ 27 ರೂ. ಪಾವತಿಸಬೇಕು. ಇದರ ವಿಶೇಷತೆ ಎಂದರೆ 1949 ರ ಚಿಕಿತ್ಸಾ ವಿಧಾನಗಳಿಗೆ ಅನುಗುಣವಾಗಿ ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆಗೆ ಅರ್ಹ ಕುಟುಂಬಕ್ಕೆ 5 ಲಕ್ಷ ರೂ. ವರೆಗೆ ವಿಮೆ ನೀಡಲಾಗುತ್ತದೆ.
ಶ್ರಮ ಯೋಗಿ ಮಾನ್-ಧನ್ (PM-SYM)
ವೃದ್ಧಾಪ್ಯ ರಕ್ಷಣೆಯನ್ನು ಒದಗಿಸುವ ಸಲುವಾಗಿ ಭಾರತ ಸರ್ಕಾರವು 2019 ರಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM) ಪಿಂಚಣಿ ಯೋಜನೆಯನ್ನು ಪ್ರಾರಂಭಿಸಿತು. ಇದು 60 ವರ್ಷ ವಯಸ್ಸನ್ನು ತಲುಪಿದ ಅನಂತರ 3000 ರೂ. ಮಾಸಿಕ ಪಿಂಚಣಿ ನೀಡುತ್ತದೆ. 18-40 ವರ್ಷ ವಯಸ್ಸಿನ ಕಾರ್ಮಿಕರ ಮಾಸಿಕ ಆದಾಯ ರೂ. 15,000 ಅಥವಾ ಅದಕ್ಕಿಂತ ಕಡಿಮೆ ಮತ್ತು ಇಪಿಎಫ್‌ಒ/ಇಎಸ್‌ಐಸಿ/ಎನ್‌ಪಿಎಸ್ (ಸರ್ಕಾರಿ ನಿಧಿ) ಸದಸ್ಯರಲ್ಲದವರು PM-SYM ಯೋಜನೆಗೆ ಸೇರಬಹುದು. ಈ ಯೋಜನೆಯಡಿಯಲ್ಲಿ ಫಲಾನುಭವಿಯು ಶೇ. 50 ಮಾಸಿಕ ಕೊಡುಗೆಯನ್ನು ಪಾವತಿಸಬೇಕು ಮತ್ತು ಸಮಾನ ಹೊಂದಾಣಿಕೆಯ ಕೊಡುಗೆಯನ್ನು ಕೇಂದ್ರ ಸರ್ಕಾರವು ಪಾವತಿಸುತ್ತದೆ. ಯೋಜನೆಯ ಅಡಿಯಲ್ಲಿ ಸರ್ಕಾರದ ಕೊಡುಗೆಗಾಗಿ ಹಣವನ್ನು ಎಲ್ಐಸಿ ನಿಧಿ ವ್ಯವಸ್ಥಾಪಕರಿಗೆ ಒದಗಿಸಲಾಗುತ್ತದೆ.
ಇವುಗಳು ಮಾತ್ರವಲ್ಲದೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ ಮೂಲಕ ಸಾರ್ವಜನಿಕ ವಿತರಣಾ ವ್ಯವಸ್ಥೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಗರೀಬ್ ಕಲ್ಯಾಣ್ ರೋಜ್ ಗಾರ್ ಅಭಿಯಾನ, ಮಹಾತ್ಮ ಗಾಂಧಿ ಬಂಕರ್ ಬಿಮಾ ಯೋಜನೆ, ದೀನ್ ದಯಾಳ್ ಅಂತ್ಯೋದಯ ಯೋಜನೆ, ಪಿಎಂಎಸ್‌ವನಿಧಿ, ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ ಇತ್ಯಾದಿಗಳು ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಅವರ ಅರ್ಹತೆಯ ಮಾನದಂಡಗಳಿಗೆ ಅನುಗುಣವಾಗಿ ಲಭ್ಯವಿದೆ.
ಸಾಮಾಜಿಕ ಭದ್ರತಾ ಯೋಜನೆಗಳು, ಕಲ್ಯಾಣ ಯೋಜನೆಗಳ ಬಗ್ಗೆ 16- 59 ವರ್ಷ ವಯಸ್ಸಿನ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ (NDUW) ಅನ್ನು ರಚಿಸುವ ಉದ್ದೇಶದಿಂದ ಇ-ಶ್ರಾಮ್ ಪೋರ್ಟಲ್ ಅನ್ನು 2021ರ ಆಗಸ್ಟ್, ನಲ್ಲಿ ಪ್ರಾರಂಭಿಸಲಾಗಿದೆ.