ನವ ದೆಹಲಿ: ರಾಜಸ್ಥಾನದ ಸಿಕಾರ್ನ ಪಿಪ್ರಾಲಿ ರಸ್ತೆಯಲ್ಲಿ ಹತ್ಯೆಗೀಡಾದ ನಟೋರಿಯಸ್ ಗ್ಯಾಂಗ್ಸ್ಟರ್ ರಾಜು ಥೇತ್ ಕೇಸ್ನ್ನು ತನಿಖೆ ಕೈಗೆತ್ತಿಕೊಂಡಿರುವ ರಾಜಸ್ಥಾನ ಪೊಲೀಸರು ಸದ್ಯ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹತ್ಯೆಯನ್ನು ತಾವೇ ನಡೆಸಿದ್ದು ಎಂದು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೇಳಿಕೊಂಡಿತ್ತು. ಮರ್ಡರ್ ನಡೆದ 24ಗಂಟೆಯೊಳಗೆ ಪೊಲೀಸರು ಮನೀಶ್ ಜಾಟ್, ವಿಕ್ರಮ್ ಗುರ್ಜಾರ್, ಸತೀಶ್ ಕುಮಾರ್, ಜತಿನ್ ಮೇಘ್ವಾಲ್, ನವೀನ್ ಮೇಘ್ವಾಲ್ ಎಂಬುವರನ್ನು ಅರೆಸ್ಟ್ ಮಾಡಿದ್ದಾರೆ. ಈ ಬೆನ್ನಲ್ಲೇ ಇನ್ನೊಂದು ಮಹತ್ವದ ವಿಷಯ ಬೆಳಕಿಗೆ ಬಂದಿದೆ. ಗ್ಯಾಂಗ್ಸ್ಟರ್ ರಾಜು ಥೇತ್ ಹತ್ಯೆಯಲ್ಲಿ ಲೇಡಿ ಡಾನ್ ಅನುರಾಧಾ ಚೌಧರಿ ಪಾತ್ರವೂ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಯಾರು ಈ ಲೇಡಿ ಡಾನ್?
ಗ್ಯಾಂಗ್ಸ್ಟರ್ಗಳು ಮತ್ತು ಭಯೋತ್ಪಾದಕರ ನಡುವಿನ ಸಂಪರ್ಕದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಸೋಮವಾರ (ಅ.28) ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ, ದೆಹಲಿಗಳ ಸುಮಾರು 50 ಪ್ರದೇಶಗಳಲ್ಲಿರುವ ಗ್ಯಾಂಗ್ಸ್ಟರ್ಗಳ ಮನೆಗಳ ಮೇಲೆ ರೇಡ್ ನಡೆಸಿತ್ತು. ಅದಕ್ಕೂ ಮೊದಲು ಸೆಪ್ಟೆಂಬರ್ 12ರಂದು ಕೂಡ ಇದೇ ಕೇಸ್ಗೆ ಸಂಬಂಧಪಟ್ಟು ಪಂಜಾಬ್, ಹರ್ಯಾಣ, ದೆಹಲಿಗಳಲ್ಲಿ ಎನ್ಐಎ ರೇಡ್ ಆಗಿತ್ತು. ಈ ವೇಳೆ ಕುಖ್ಯಾತ ಗ್ಯಾಂಗ್ಸ್ಟರ್ವೊಬ್ಬನ ಮನೆಯಲ್ಲಿದ್ದ ಲೇಡಿ ಡಾನ್ ಅಲಿಯಾಸ್ ಅನುರಾಧಾ ಚೌಧರಿ ತನಿಖಾ ದಳದ ಸಿಬ್ಬಂದಿ ಕೈಯಿಗೆ ಸಿಕ್ಕಿಬಿದ್ದಿದ್ದಳು.
ದೆಹಲಿಯ ಗ್ಯಾಂಗ್ಸ್ಟರ್ ಸಂದೀಪ್ನ, ಸೋನಿಪತ್ನ ಜಥೇರಿ ಗ್ರಾಮದಲ್ಲಿರುವ ಮನೆಯ ಮೇಲೆ ಸೆ.12ರಂದು ಎನ್ಐಎ ರೇಡ್ ಮಾಡಿದಾಗ, ಆತನ ಮನೆಯಲ್ಲಿ ಅನುರಾಧಾ ಸಿಕ್ಕಿಬಿದ್ದಿದ್ದಳು. ನಾನು ದೆಹಲಿಯ ದ್ವಾರಕಾದಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದೇನೆ. ಆದರೆ ಈ ಮನೆಗೆ ಆಗಾಗ ಬರುತ್ತೇನೆ ಎಂದು ತನಿಖಾಧಿಕಾರಿಗಳ ಬಳಿ ಹೇಳಿಕೊಂಡಿದ್ದಳು. ಆಕೆಯನ್ನು ಎನ್ಐಎ ವಿಚಾರಣೆಗೆ ಒಳಪಡಿಸಿತ್ತು.
ಈ ಅನುರಾಧಾ ಚೌಧರಿ ಗ್ಯಾಂಗ್ಸ್ಟರ್ ಆನಂದಪಾಲ್ ಸಿಂಗ್ ಎಂಬಾತನ ಸಹಚಾರಿಣಿಯಾಗಿದ್ದಳು. ಆನಂದ್ಪಾಲ್ ಸಿಂಗ್ 2107ರಲ್ಲಿ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿದ್ದಾನೆ. ಆತ ಸಾಯುತ್ತಿದ್ದಂತೆ ಲೇಡಿ ಡಾನ್ ಹೋಗಿ ದೆಹಲಿ ಗ್ಯಾಂಗ್ಸ್ಟರ್ ಸಂದೀಪ್ ಅಲಿಯಾಸ್ ಕಾಲಾ ಜಠೇಡಿ ಜತೆ ಕೈ ಜೋಡಿಸಿದ್ದಳು. ಅವನನ್ನೇ ಮದುವೆಯಾಗಿದ್ದಳು. ಸಂದೀಪ್ ಜೈಲಿನಲ್ಲಿಯೇ ಇದ್ದಾನೆ. ಇತ್ತೀಚೆಗೆ ನಡೆದ ಪಂಜಾಬ್ ಗಾಯಕ ಸಿಧು ಮೂಸೇವಾಲಾ ಹತ್ಯೆಯಲ್ಲಿ ಇವನ ಕೈವಾಡವೂ ಇರುವ ಶಂಕೆ ವ್ಯಕ್ತವಾಗಿದೆ.
ಅನುರಾಧಾ ಚೌಧರಿ ಹಲವು ಹೈಪ್ರೊಫೈಲ್ ಸುಲಿಗೆ, ಭೂ ಕಬಳಿಕೆ, ಅಂತರ್ ರಾಜ್ಯ ಮದ್ಯ, ಶಸ್ತ್ರಾಸ್ತ್ರ ಸ್ಮಗ್ಲಿಂಗ್ ಕೇಸ್ನಲ್ಲಿ ಆರೋಪಿಯಾಗಿದ್ದಾಳೆ. ಅಷ್ಟೇ ಅಲ್ಲ, ಹಲವು ಕೊಲೆ ಕೇಸ್ಗಳಲ್ಲೂ ಈಕೆ ಮಾಸ್ಟರ್ಮೈಂಡ್ ಎಂದು ಹೇಳಲಾಗಿದೆ. 2021ರಲ್ಲಿ ಕೆಲ ಕಾಲ ಜೈಲಿನಲ್ಲಿಯೂ ಇದ್ದು ಬಂದಿದ್ದಾಳೆ. ಸದ್ಯ ದೇಶದ ಹೊರಗಿನ ಉಗ್ರರ ನಿಯಂತ್ರಣದಲ್ಲಷ್ಟೇ ಅಲ್ಲ, ದೇಶದೊಳಗಿನ ಡೆಡ್ಲಿ ಗ್ಯಾಂಗ್ಸ್ಟರ್ಗಳ ವಿರುದ್ಧವೂ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಎನ್ಐಎ ತನಿಖೆ ಚುರುಕುಗೊಂಡಿದೆ.
ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆಯ ರೂವಾರಿ, ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಕ್ಯಾಲಿಫೋರ್ನಿಯಾದಲ್ಲಿ ಬಂಧನ