ನವ ದೆಹಲಿ: ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಡಿಸೆಂಬರ್ ಮೊದಲ ವಾರದಲ್ಲಿ ಕಿಡ್ನಿ ಕಸಿಗೆ ಒಳಗಾಗಲಿದ್ದು, ತನ್ನಿಮಿತ್ತ ಸಿಂಗಾಪುರಕ್ಕೆ ತೆರಳಿದ್ದಾರೆ. ಲಾಲೂ ಪ್ರಸಾದ್ ಯಾದವ್ರಿಗೆ ಅವರ ಪುತ್ರಿ ರೋಹಿಣಿ ಆಚಾರ್ಯ ಅವರೇ ಕಿಡ್ನಿ ದಾನ ಮಾಡಲಿದ್ದು, ಅದಕ್ಕೆ ಸಂಬಂಧಪಟ್ಟ ಎಲ್ಲ ರೀತಿಯ ತಪಾಸಣೆಗಳು ಮುಕ್ತಾಯಗೊಂಡಿವೆ.
ಲಾಲೂ ಪ್ರಸಾದ್ ಯಾದವ್ಗೆ ಈಗ 74 ವರ್ಷ. ಹಲವು ವರ್ಷಗಳಿಂದಲೂ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಿದ್ದರು. ನವೆಂಬರ್ ಮೊದಲವಾರದಲ್ಲಿ ವಾಪಸ್ ಬಂದಿದ್ದರು. ಅವರೀಗ ಮತ್ತೆ ಸಿಂಗಾಪುರಕ್ಕೆ ತೆರಳಿದ್ದು, ಅವರೊಂದಿಗೆ ಕಿರಿಯ ಪುತ್ರ ತೇಜಸ್ವಿ ಯಾದವ್ ಮತ್ತು ಕುಟುಂಬದ ಇನ್ನಿತರ ಸದಸ್ಯರು ತೆರಳಿದ್ದಾರೆ.
ಇದೀಗ ಸಿಂಗಾಪುರಕ್ಕೆ ತೆರಳಿರುವ ಲಾಲೂ ಪ್ರಸಾದ್ ಯಾದವ್ಗೆ ಇನ್ನಷ್ಟು ಚೆಕಪ್ಗಳು, ವೈದ್ಯಕೀಯ ತಪಾಸಣೆಗಳು ಆಗಬೇಕಿದೆ. ಅದನ್ನೆಲ್ಲ ಮುಗಿಸಿ, ಡಿಸೆಂಬರ್ ಮೊದಲವಾರದಲ್ಲಿ ಅವರು ಕಿಡ್ನಿ ಕಸಿ ಸರ್ಜರಿಗೆ ಒಳಗಾಗಲಿದ್ದಾರೆ. ‘ಈ ಶಸ್ತ್ರಚಿಕಿತ್ಸೆ ಯಶಸ್ವಿ ಆಗುವ ಬಗ್ಗೆ ಖಂಡಿತ ವಿಶ್ವಾಸವಿದೆ.’ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. ಇದೀಗ ಕಿಡ್ನಿ ಕೊಡುತ್ತಿರುವ ರೋಹಿಣಿ ಆಚಾರ್ಯ ಕಳೆದ ತಿಂಗಳು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡು, ‘ತಾನು ತನ್ನ ಒಂದು ಮೂತ್ರಪಿಂಡವನ್ನು ಅಪ್ಪನಿಗೆ ಕೊಡುತ್ತೇನೆ’ ಎಂದಿದ್ದರು.
ಇದನ್ನೂ ಓದಿ: Bhai Bhatijavaad | ಮೋದಿ ʼಪರಿವಾರವಾದʼ ಟೀಕೆ ಬೆನ್ನಲ್ಲೇ ತೇಜ್ ಪ್ರತಾಪ್ ಯಾದವ್ ಸಭೆಯಲ್ಲಿ ಅವರ ಬಾವ ಭಾಗಿ!