ನವ ದೆಹಲಿ: ಆರ್ಜೆಡಿ ಮುಖ್ಯಸ್ಥರಾದ ಲಾಲೂ ಪ್ರಸಾದ್ ಯಾದವ್ ಮನೆಗೆ ಇಂದು ಸಿಬಿಐನ 12 ಜನರ ತಂಡವೊಂದು ಭೇಟಿ ಕೊಟ್ಟಿದೆ. ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಪಟ್ಟಂತೆ (Land For Job Scam) ಲಾಲು ಪತ್ನಿ, ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ (Rabri Devi)ಯವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಲಾಲು ಮನೆ ಎದುರು ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಲಾಲೂ ಪ್ರಸಾದ್ ಯಾದವ್ ಅವರು ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ, 2004ರಿಂದ 2009ರವರೆಗೆ ರೈಲ್ವೆ ಮಂತ್ರಿಯಾಗಿದ್ದರು. ರಾಬ್ರಿದೇವಿ (Rabri Devi) 2000ರಿಂದ 2005ರವರೆಗೆ ಬಿಹಾರ ಮುಖ್ಯಮಂತ್ರಿಯಾಗಿದ್ದರು. 2004-2009ರ ನಡುವೆ ಬಿಹಾರದಲ್ಲಿ ಉದ್ಯೋಗಕ್ಕಾಗಿ ಭೂಮಿ ಎಂಬ ಹಗರಣ (Land For Job Scam) ನಡೆದಿದೆ ಎಂಬ ಆರೋಪದಡಿ, ಲಾಲೂಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ, ಮಕ್ಕಳಾದ ಮಿಸಾ ಯಾದವ್, ಹೇಮಾ ಯಾದವ್ ಮತ್ತು ಇತರ 14 ಜನರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುತ್ತಿದೆ. ಈಗ ಅದೇ ‘ಉದ್ಯೋಗಕ್ಕಾಗಿ ಭೂಮಿ’ ಹಗರಣಕ್ಕೆ ಸಂಬಂಧಪಟ್ಟಂತೆ ರಾಬ್ರಿ ದೇವಿಯನ್ನು ವಿಚಾರಣೆ ನಡೆಸಲು ಸಿಬಿಐ ಅಧಿಕಾರಿಗಳು ಅವರ ಪಾಟ್ನಾದಲ್ಲಿರುವ ಮನೆಗೆ ತೆರಳಿದ್ದಾರೆ. ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಮನೆಯಲ್ಲೇ ಇದ್ದಾರೆ ಎಂದು ವರದಿಯಾಗಿದೆ.
2004ರಿಂದ 2009ರವರೆಗೆ ಲಾಲೂ ಪ್ರಸಾದ್ ಯಾದವ್ ತಮ್ಮ ಸಚಿವ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡರು. ಬಿಹಾರದಲ್ಲಿ ಜನರ ಬಳಿ, ನೀವು ನಿಮ್ಮ ಭೂಮಿಯನ್ನು ಕೊಟ್ಟರೆ, ಉದ್ಯೋಗ ಕೊಡುತ್ತೇವೆ ಎಂದು ಹೇಳಿ, ಅವರಿಂದ ಕಡಿಮೆ ಬೆಲೆಗೆ ಭೂಮಿಯನ್ನು ಖರೀದಿಸಲಾಗಿದೆ. ಬಳಿಕ ಆ ಭೂಮಿಯನ್ನು ಲಾಲೂ ಪ್ರಸಾದ್ ಯಾದವ್ ತಮ್ಮ ಕುಟುಂಬದವರಿಗೆ ವರ್ಗಾಯಿಸಿದ್ದಾರೆ. ಅಷ್ಟೇ ಅಲ್ಲ, ಭೂಮಿ ಕೊಟ್ಟವರಿಗೆ ಪ್ರತಿಯಾಗಿ ರೈಲ್ವೆ ಇಲಾಖೆಯಲ್ಲಿ ಡಿ ದರ್ಜೆಯ ನೌಕರಿಯನ್ನು ಕೊಟ್ಟಿದ್ದಾರೆ. ಹೀಗಾಗಿ ಹಲವು ಅನರ್ಹರು ಕೂಡ ರೈಲ್ವೆ ಇಲಾಖೆಯಲ್ಲಿ ಕೆಲಸ ಪಡೆಯುವಂತಾಗಿತ್ತು. ಇದರಲ್ಲಿ ಕೋಟ್ಯಂತರ ರೂಪಾಯಿ ಗೋಲ್ ಮಾಲ್ ಆಗಿದೆ ಎಂಬುದು ಆರೋಪ. ಲಾಲೂ ಪ್ರಸಾದ್ ಯಾದವ್ ಇಡೀ ಕುಟುಂಬದ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದ್ದು, ಈ ಕೇಸ್ನಡಿ 2022ರ ಮೇ ತಿಂಗಳಲ್ಲಿ ಆರ್ಜೆಡಿಯ ಹಲವು ನಾಯಕರ ಮನೆಗಳ ಸಿಬಿಐ ರೇಡ್ ಆಗಿತ್ತು. ಚಾರ್ಜ್ಶೀಟ್ ಕೂಡ ಸಲ್ಲಿಕೆಯಾಗಿತ್ತು. ಅದರ ಮುಂದುವರಿದ ಭಾಗವಾಗಿ ಈಗ ಮತ್ತೆ ರಾಬ್ರಿ ದೇವಿ ವಿಚಾರಣೆಗೆ ಸಿಬಿಐ ಅಧಿಕಾರಿಗಳು ಬಂದಿದ್ದಾರೆ.
ಇದನ್ನೂ ಓದಿ: ಲಾಲು ಆಪ್ತ ಸುನೀಲ್ ಸಿಂಗ್ ಸೇರಿ ಆರ್ಜೆಡಿ ನಾಯಕರ ಮನೆ ಮೇಲೆ ಸಿಬಿಐ ದಾಳಿ