ಲಿವ್ ಇನ್ ರಿಲೇಶನ್ಶಿಪ್ (Live In Relationship) ಎಂಬ ಪಾಶ್ಚಾತ್ಯ ಪದ್ಧತಿಯೊಂದು ಭಾರತದಲ್ಲಿ ಈಗೀಗ ಜಾಸ್ತಿಯಾಗುತ್ತಿದೆ. ಮದುವೆಯಿಲ್ಲ, ತಾಳಿಯೆಂಬ ಸೂತ್ರದ ಬಂಧವಿಲ್ಲದೆ ಗಂಡು-ಹೆಣ್ಣು ಒಟ್ಟಿಗೆ ಇರುತ್ತಾರೆ. ‘ಪ್ರೀತಿ-ಪ್ರೇಮ-ಪ್ರಣಯ-ಜಗಳ’ಕ್ಕೆಲ್ಲ ಇಲ್ಲಿ ತಡೆಯಿರುವುದಿಲ್ಲ. ಮಕ್ಕಳೂ ಆಗಬಹುದು..! ಇಂಥ ಲಿವ್ ಇನ್ ರಿಲೇಶನ್ಶಿಪ್ಗಳ ಬಗ್ಗೆ ಕೇರಳ ಹೈಕೋರ್ಟ್ (Kerala High Court) ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ವಿಚ್ಛೇದನ ಕೊಡುವಂತೆ ಕೇಳಿದ್ದ ಲಿವ್ ಇನ್ ಸಂಗಾತಿಗಳಿಗೆ ‘ಸಾಧ್ಯವೇ ಇಲ್ಲ’ ಎಂದು ಹೇಳಿದೆ.
‘ಲಿವ್ ಇನ್ ರಿಲೇಶನ್ಶಿಪ್ಗಳನ್ನು ಕಾನೂನಿನ ಒಕ್ಕೂಟ ಎಂದಿಗೂ ಮಾನ್ಯ ಮಾಡುವುದಿಲ್ಲ. ಈ ಸಂಬಂಧವೂ ಮದುವೆಯಂತೆ ಎಂದು ಪರಿಭಾವಿಸುವುದಿಲ್ಲ. ಇಬ್ಬರು ಪರಸ್ಪರ ಇಷ್ಟಪಟ್ಟು, ಒಪ್ಪಂದದ ಆಧಾರದ ಮೇಲೆ ಜತೆಗೆ ಇರುತ್ತಾರೆ ಹೊರತು, ಅವರು ಯಾವುದೇ ವೈಯಕ್ತಿಕ ಕಾನೂನು ಮತ್ತು ವಿಶೇಷ ವಿವಾಹ ಕಾಯ್ದೆಯ ನಿಯಮಗಳಿಗೆ ಒಳಪಟ್ಟಿರುವುದಿಲ್ಲ. ಹೀಗಾಗಿ ಅಂಥ ಜೋಡಿಗಳು ತಮ್ಮ ಸಂಬಂಧಕ್ಕೆ ಮದುವೆ ಎಂದು ಹೆಸರಿಡಲು ಸಾಧ್ಯವಿಲ್ಲ. ವಿವಾಹವೇ ಅಲ್ಲ ಎಂದಾದ ಮೇಲೆ ವಿಚ್ಛೇದನಕ್ಕೂ ಅರ್ಜಿ ಹಾಕಲು ಆಗುವುದಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಕೇರಳದಲ್ಲಿ, ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಇದ್ದ ಜೋಡಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಎರಡು ಬೇರೆ ಧರ್ಮಕ್ಕೆ (ಒಬ್ಬರು ಹಿಂದು, ಮತ್ತೊಬ್ಬರು ಕ್ರಿಶ್ಚಿಯನ್) ಸೇರಿದ ಇವರು ವಿಚ್ಛೇದನ ಬೇಕು ಎಂದು ಕೌಟುಂಬಿಕ ನ್ಯಾಯಾಲಯವೊಂದಕ್ಕೆ ಅರ್ಜಿ ಸಲ್ಲಿಸಿದ್ದರು. ಇವರಿಬ್ಬರೂ 2006ರಿಂದಲೂ ಒಟ್ಟಿಗೇ ವಾಸವಾಗಿದ್ದರು. ಒಂದು ಮಗು ಕೂಡ ಇದೆ. ಆದರೆ ಈಗ ಬಿರುಕು ಮೂಡಿತ್ತು. ಹೀಗಾಗಿ ವಿಶೇಷ ವಿವಾಹ ಕಾಯ್ದೆಯಡಿ ತಮಗೆ ಡಿವೋರ್ಸ್ ಕೊಡಿ ಎಂದು ಮನವಿ ಮಾಡಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯ ಮಾನ್ಯ ಮಾಡಿರಲಿಲ್ಲ. ವಿಚ್ಛೇದನ ಕೊಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಫ್ಯಾಮಿಲಿ ಕೋರ್ಟ್ನ ಈ ತೀರ್ಪಿನ ವಿರುದ್ಧ ಕೇರಳದ ಜೋಡಿ ಹೈಕೋರ್ಟ್ ಮೆಟ್ಟಿಲೇರಿತ್ತು. ಡಿವೋರ್ಸ್ಗಾಗಿ ಮೇಲ್ಮನವಿ ಸಲ್ಲಿಸಿತ್ತು.
ಇದನ್ನೂ ಓದಿ: Mumbai Murder Case: ತನ್ನ ಲಿವ್ ಇನ್ ಸಂಗಾತಿಯನ್ನು ತುಣುಕುಗಳಾಗಿ ಕತ್ತರಿಸಿ, ಕುಕ್ಕರ್‌ನಲ್ಲಿ ಕುದಿಸಿದ ಮುಂಬೈ ವ್ಯಕ್ತಿ
ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕೇರಳ ಹೈಕೋರ್ಟ್ನ ನ್ಯಾ. ಎ ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾ. ಸೋಫಿ ಥಾಮಸ್ ಅವರನ್ನೊಳಗೊಂಡ ವಿಭಾಗೀಯ ಪೀಠವೂ ಕೌಟುಂಬಿಕ ನ್ಯಾಯಾಲಯದ ಅಭಿಪ್ರಾಯವನ್ನೇ ಎತ್ತಿ ಹಿಡಿದಿದೆ. ಇಲ್ಲಿ ಕಾನೂನು ಪ್ರಕಾರ ಡಿವೋರ್ಸ್ ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ. ಲಿವ್ ಇನ್ ರಿಲೇಶನ್ಶಿಪ್ ಬಗ್ಗೆ ವೈಯಕ್ತಿಕ ಕಾನೂನು ಅಥವಾ ವಿಶೇಷ ವಿವಾಹ ಕಾಯ್ದೆಯಡಿ ಉಲ್ಲೇಖವಿಲ್ಲ. ಈ ಲಿವ್ ಇನ್ ರಿಲೇಶನ್ಶಿಪ್ ಎಂಬುದು ಕಾನೂನು ಮಾನ್ಯತೆಯನ್ನೂ ಪಡೆದಿಲ್ಲ’ ಎಂದು ಹೈಕೋರ್ಟ್ ಪೀಠ ಸ್ಪಷ್ಟಪಡಿಸಿದೆ. ‘ಕಾನೂನು ಬದ್ಧವಾಗಿ ಮದುವೆಯಾದವರು ಪ್ರತ್ಯೇಕವಾಗಲೆಂದು ವಿಚ್ಛೇದನ ಎಂಬ ವ್ಯವಸ್ಥೆ ರೂಪಿಸಲಾಗಿದೆ’ ಎಂಬುದನ್ನು ಒತ್ತಿಹೇಳಿದೆ. ಹಾಗೇ, ಮದುವೆಯೆಂಬುದು ಸಾಮಾಜಿಕ ಮತ್ತು ನೈತಿಕ ಸಿದ್ಧಾಂತಗಳನ್ನು ಒಳಗೊಂಡಿದೆ ಎಂದೂ ತಿಳಿಸಿದೆ.