ನವ ದೆಹಲಿ: ದೇಶದಲ್ಲಿ ಈಗ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲದಂತಾಗಿದೆ ಎಂದು ಹೇಳಿದ್ದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಅವರಿಗೆ ಕಾನೂನು ಸಚಿವ ಕಿರಣ್ ರಿಜಿಜು ಖಡಕ್ ತಿರುಗೇಟು ಕೊಟ್ಟಿದ್ದಾರೆ. ಇತ್ತೀಚೆಗೆ ಪತ್ರಿಕೆಯೊಂದಕ್ಕೆ ಸಂದರ್ಶನ ಕೊಟ್ಟಿದ್ದ ಬಿ.ಎನ್.ಶ್ರೀಕೃಷ್ಣ, ‘ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ. ನಾನೊಂದು ಸಾರ್ವಜನಿಕ ಪ್ರದೇಶದಲ್ಲಿ ನಿಂತು ನನಗೆ ಪ್ರಧಾನಮಂತ್ರಿ ಮುಖ ಇಷ್ಟವಾಗುತ್ತಿಲ್ಲ ಎಂದು ಹೇಳಿದರೂ ಸಾಕು, ಮರುದಿನವೇ ನನ್ನ ಮೇಲೆ ರೇಡ್ ಆಗುತ್ತದೆ. ನಾನು ಅರೆಸ್ಟ್ ಆಗುತ್ತೇನೆ, ಜೈಲು ಸೇರುತ್ತೇನೆ. ಆದರೆ ಅದಕ್ಕೊಂದು ಸೂಕ್ತ ಕಾರಣವೇ ಇರುವುದಿಲ್ಲ. ಒಟ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತಿದೆ’ ಎಂದಿದ್ದರು.
ಮಾಜಿ ನ್ಯಾಯಮೂರ್ತಿಯ ಮಾತುಗಳಿಗೆ ಕಾನೂನು ಸಚಿವ ಕಿರಣ್ ರಿಜಿಜು,‘ಜನರಿಂದ ಚುನಾಯಿತರಾದ ಪ್ರಧಾನಮಂತ್ರಿ ವಿರುದ್ಧ ನಿರಂತರವಾಗಿ ನಿಂದನೆಯ ಮಾತುಗಳನ್ನಾಡುವವರು ಈಗ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ರೋದಿಸುತ್ತಿದ್ದಾರೆ. ಆದರೆ ಇವರೆಲ್ಲ ಎಂದಿಗೂ ಅಂದಿನ ಕಾಂಗ್ರೆಸ್ ಸರ್ಕಾರ ಹೇರಿದ್ದ ತುರ್ತು ಪರಿಸ್ಥಿತಿ ಬಗ್ಗೆ ಧ್ವನಿ ಎತ್ತುವುದಿಲ್ಲ. ಪ್ರಾದೇಶಿಕ ಪಕ್ಷಗಳ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ‘ಮಾಜಿ ನ್ಯಾಯಮೂರ್ತಿಗಳು ಇಂಥ ಹೇಳಿಕೆ ನೀಡುವ ಮೂಲಕ ತಾವು ಸೇವೆ ಸಲ್ಲಿಸಿದ ಕ್ಷೇತ್ರಕ್ಕೇ ಅವಮಾನ ಮಾಡಿದ್ದಾರೆ’ ಎಂದು ಹೇಳಿದ್ದಾರೆ.