ನವ ದೆಹಲಿ: ಸುಪ್ರೀಂಕೋರ್ಟ್ನ ಕೊಲಿಜಿಯಂ ಸಭೆ ಸಾಮಾನ್ಯವಾಗಿ ಸುದೀರ್ಘ ಸಮಯದವರೆಗೆ ನಡೆಯುವುದಿಲ್ಲ. ಆದರೆ ಮಂಗಳವಾರ (ಆಗಸ್ಟ್ 2) ಬೆಳಗ್ಗೆ ಸುಮಾರು 75 ನಿಮಿಷಗಳ (ಒಂದೂವರೆ ತಾಸು) ಕಾಲ ನಡೆಯಿತು. ಸುಪ್ರೀಂಕೋರ್ಟ್ಗೆ ಮೂವರು ನ್ಯಾಯಮೂರ್ತಿಗಳ ನೇಮಕಾತಿ ಮತ್ತು ಹೈಕೋರ್ಟ್ ಜಡ್ಜ್ಗಳ ನೇಮಕ/ವರ್ಗಾವಣೆ ಕುರಿತಾದ ಈ ಸಭೆ ನಡೆದಿತ್ತು. 75 ನಿಮಿಷ ಈ ವಿಚಾರಗಳ ಬಗ್ಗೆ ಚರ್ಚೆ ನಡೆದರೂ ಕೊನೆಗೂ ಒಂದು ಒಮ್ಮತಕ್ಕೆ ಬರಲು ಸಾಧ್ಯವಾಗದೆ ಸಭೆ ಮುಕ್ತಾಯವಾಗಿದೆ.
ಸುಪ್ರೀಂಕೋರ್ಟ್ನಲ್ಲಿ ನ್ಯಾಯಮೂರ್ತಿಗಳಾದ ವಿನೀತ್ ಶರಣ್, ಎಲ್.ಎನ್. ರಾವ್ ಮತ್ತು ಎ.ಎಂ. ಖಾನಿಲ್ಕರ್ ನಿವೃತ್ತರಾದ ಬಳಿಕ ಆ ಸ್ಥಾನಗಳಿಗೆ ಇನ್ನೂ ಯಾರನ್ನೂ ನೇಮಕ ಮಾಡಿಲ್ಲ. ಅದರೊಂದಿಗೆ ಕೆಲವು ಹೈಕೋರ್ಟ್ಗಳಲ್ಲಿ ಜಡ್ಜ್ಗಳ ಹುದ್ದೆ ತುಂಬುವುದೂ ಬಾಕಿ ಇದೆ. ಇದೆಲ್ಲದರ ಮಧ್ಯೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ.ರಮಣ ಅಧಿಕಾರ ಅವಧಿ ಆಗಸ್ಟ್ 6ರಂದು ಮುಕ್ತಾಯವಾಗಲಿದ್ದು, ಅವರು ಇನ್ನೂ ತಮ್ಮ ಉತ್ತರಾಧಿಕಾರಿ ಯಾರೆಂದು ಶಿಫಾರಸ್ಸು ಕೂಡ ಮಾಡಿಲ್ಲ. ಸಿಜೆಐ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಯುಯು ಲಲಿತ್, ಡಿವೈ ಚಂದ್ರಚೂಡ್, ಎಸ್.ಕೆ.ಕೌಲ್ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಕೊಲಿಜಿಯಂ ಸಭೆ ಒಂದೂವರೆ ತಾಸು ನಡೆದು, ಈ ಎಲ್ಲ ವಿಚಾರಗಳೂ ಚರ್ಚೆಗೆ ಬಂದರೂ ಕೂಡ ಕೊನೆಯಲ್ಲಿ ಯಾವುದೇ ನಿರ್ಣಯವೂ ಹೊರಬಿದ್ದಿಲ್ಲ.
ಎನ್ವಿ ರಮಣಗೆ ಪತ್ರ ಬರೆದ ಕಾನೂನು ಸಚಿವ
ಸುಪ್ರೀಂಕೋರ್ಟ್ ಸಭೆ ಸುದೀರ್ಘ ಕಾಲ ನಡೆದು, ಒಮ್ಮತ ಮೂಡದೆ ಮುಕ್ತಾಯಗೊಂಡ ಬೆನ್ನಲ್ಲೇ ಕಾನೂನು ಸಚಿವ ಕಿರಣ್ ರಿಜಿಜು ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರಿಗೆ ಪತ್ರ ಬರೆದಿದ್ದಾರೆ. ನಿಮ್ಮ ಉತ್ತರಾಧಿಕಾರಿ (ಮುಂದಿನ ಮುಖ್ಯ ನ್ಯಾಯಮೂರ್ತಿ)ಯ ಹೆಸರನ್ನು ಶಿಫಾರಸ್ಸು ಮಾಡಿ ಎಂದು ಸೂಚಿಸಿದ್ದಾರೆ. ಸಿಜೆಐ ಎನ್ ವಿ ರಮಣ ಅವರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ಮತ್ತು ಹೈಕೋರ್ಟ್ ಜಡ್ಜ್ಗಳ ನೇಮಕಾತಿ/ ವರ್ಗಾವಣೆಯನ್ನು ನಿರ್ಧರಿಸಲು ಸಾಧ್ಯವಾಗದ ಕಾರಣ, ಮುಂದಿನ ಸಿಜೆಐ ನೇತೃತ್ವದಲ್ಲಿ ಈ ಪ್ರಕ್ರಿಯೆಗಳು ನಡೆಯಲಿವೆ ಎನ್ನಲಾಗಿದೆ. ಅಂದಹಾಗೇ, ಈಗಿರುವ ನ್ಯಾಯಮೂರ್ತಿಗಳಲ್ಲಿ ಉದಯ್ ಉಮೇಶ್ ಲಲಿತ್ ಹಿರಿಯರಾಗಿದ್ದು, ಮುಂದಿನ ಸಿಜೆಐ ಅವರೇ ಎಂದೂ ಹೇಳಲಾಗುತ್ತಿದೆ.
ಮುಖ್ಯ ನ್ಯಾಯಮೂರ್ತಿಗಳು ನಿವೃತ್ತರಾಗುವ ಮೊದಲು ಮುಂದಿನ ಸಿಜೆಐ ಯಾರಾಗಬೇಕು ಎಂದು ಅವರ ಹೆಸರನ್ನು ಬರೆದು, ಮುಚ್ಚಿದ ಕವರ್ನಲ್ಲಿಟ್ಟು ಕಾನೂನು ಮತ್ತು ನ್ಯಾಯಾಂಗ ಸಚಿವಾಲಯಕ್ಕೆ ಸಲ್ಲಿಸಬೇಕು. ಇದೀಗ ಕಾನೂನು ಸಚಿವರು ಎನ್.ವಿ.ರಮಣ ಅವರಿಗೆ ಪತ್ರ ಬರೆದಿರುವುದರಿಂದ ಇನ್ನೆರಡು ದಿನಗಳಲ್ಲಿ ಮುಂದಿನ ಸಿಜೆಐ ಹೆಸರು ಅಧಿಕೃತವಾಗಲಿದೆ.
ಇದನ್ನೂ ಓದಿ: ಸಾಲಿಸಿಟರ್ ಜನರಲ್ ಗೈರು: ಮೇಕೆದಾಟು ವಿಚಾರಣೆ ಆಗಸ್ಟ್ 10ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್