ನವ ದೆಹಲಿ: ಅತ್ಯಾಚಾರ ಆರೋಪಿಗಳನ್ನು ಗಲ್ಲಿಗೇರಿಸುವ ಕಾನೂನು ಬಂದ ಮೇಲೆ ದೇಶದಲ್ಲಿ ಮತ್ತಷ್ಟು ಸಮಸ್ಯೆಯೇ ಆಗಿದೆ. ಮಹಿಳೆಯರನ್ನು ರೇಪ್ ಮಾಡಿಯಾದ ಮೇಲೆ ಅವರನ್ನು ಕೊಲ್ಲುವ ಪ್ರವೃತ್ತಿ ಹೆಚ್ಚಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದ ವೇಳೆ ಅಶೋಕ್ ಗೆಹ್ಲೋಟ್ (Gehlot Controversy) ಈ ಹೇಳಿಕೆ ನೀಡಿದ್ದಾರೆ.
‘ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಿದ ಮೇಲೆ, ಯಾವುದೇ ಅತ್ಯಾಚಾರವಾದರೂ ಆರೋಪಿಗಳನ್ನು ನೇಣಿಗೆ ಹಾಕಿ ಎಂಬ ಕೂಗು-ಆಗ್ರಹ ಕೇಳಿಬರುತ್ತಿದೆ. ಕಾನೂನು ಕೂಡ ಜಾರಿಯಲ್ಲಿದೆ. ಆದರೆ ಈ ಕಾನೂನಿನಿಂದಾಗಿ ಮಹಿಳೆಯರನ್ನು ಹತ್ಯೆ ಮಾಡುವ ಪ್ರಮಾಣ ಜಾಸ್ತಿಯಾಗಿದೆ. ತಾವು ರೇಪ್ ಮಾಡಿದ ಮಹಿಳೆಯನ್ನು ಜೀವ ಸಹಿತ ಉಳಿಸಿದರೆ, ತಮ್ಮ ವಿರುದ್ಧ ಸಾಕ್ಷಿ ಹೇಳುತ್ತಾಳೆ. ನಾವೂ ಗಲ್ಲಿಗೇರಬೇಕಾಗುತ್ತದೆ ಎಂದು ಹೆದರಿ, ಆರೋಪಿಗಳು ಆಕೆಯ ಜೀವ ತೆಗೆದೇ ಹೋಗುತ್ತಿದ್ದಾರೆ. ಇದೊಂದು ಅಪಾಯಕಾರಿ ಟ್ರೆಂಡ್ ದೇಶಾದ್ಯಂತ ಪ್ರಾರಂಭವಾಗಿದೆ. ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು’ ಎಂದು ಹೇಳಿದ್ದಾರೆ.
ಗೆಹ್ಲೋಟ್ ಮಾತುಗಳಿಗೆ ಟೀಕೆ ವ್ಯಕ್ತವಾಗಿದೆ. ಅರಿವು, ತಿಳಿವಳಿಕೆ ಇದ್ದವರು ಇಂಥ ಮಾತುಗಳನ್ನು ಆಡಬಾರದು ಎಂದು ಜನ ಹೇಳುತ್ತಿದ್ದಾರೆ. ರೇಪಿಸ್ಟ್ಗಳಿಗೆ ಗಲ್ಲು ಶಿಕ್ಷೆ ಬೇಡವೆಂದು ಪರೋಕ್ಷವಾಗಿ ಹೇಳುತ್ತಿದ್ದೀರಾ ಎಂಬ ಪ್ರಶ್ನೆಯನ್ನೂ ಸೋಷಿಯಲ್ ಮೀಡಿಯಾಗಳಲ್ಲಿ ಜನರು ಕೇಳುತ್ತಿದ್ದಾರೆ. ಈ ಹಿಂದೆ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಮಾತನಾಡುತ್ತ ‘ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾಕೆ?’ ಎಂದು ಪ್ರಶ್ನಿಸಿದ್ದರು. ‘ರೇಪಿಸ್ಟ್ಗಳಿಗೆ ನೇಣಿಗೇರಿಸುವಂತಹ ಶಿಕ್ಷೆ ಅಗತ್ಯ ಇರುವುದಿಲ್ಲ. ಪುರುಷರು ತಪ್ಪು ಮಾಡುತ್ತಾರೆ. ಹಾಗಂತ ನೇಣಿಗೆ ಏರಿಸಬಾರದು. ನಾವು ಅಧಿಕಾರಕ್ಕೆ ಬಂದರೆ ಈ ಕಾನೂನನ್ನು ಬದಲಿಸುತ್ತೇವೆ ಎಂದು ಹೇಳಿದ್ದರು.
ನಿರ್ಭಯಾ ನೆನಪು
2012ರಲ್ಲಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ ಮೇಲೆ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯನ್ನು ಆರು ಮಂದಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಆಕೆ ಸಿಂಗಾಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆರು ಮಂದಿ ಆರೋಪಿಗಳನ್ನು ತಿಹಾರ್ ಜೈಲಿಗೆ ಹಾಕಲಾಗಿತ್ತು. ಅದರಲ್ಲಿ ಒಬ್ಬಾತ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ, ಇನ್ನೊಬ್ಬಾತ ಬಾಲಾಪರಾಧಿ ಆಗಿದ್ದರಿಂದ 3 ವರ್ಷ ಜೈಲು ವಿಧಿಸಲಾಗಿತ್ತು. ಉಳಿದ ನಾಲ್ವರನ್ನು 2020ರ ಮಾರ್ಚ್ 20ರಂದು ಗಲ್ಲಿಗೇರಿಸಲಾಗಿದೆ.
ಇದನ್ನೂ ಓದಿ: ಸುಳ್ಳು ಅತ್ಯಾಚಾರ ಕೇಸ್, ಬೆದರಿಕೆ ಆರೋಪ; ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ವಿರುದ್ಧ FIR