ಪುಣೆ: ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ, ಸಂಸದ ಸಂಜಯ್ ರಾವತ್ (Sanjay Raut) ಅವರಿಗೆ ಇಂದು ಜೀವ ಬೆದರಿಕೆ ಸಂದೇಶ ಬಂದಿದೆ. ತಾನು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗುಂಪಿನವರು ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಸಂಜಯ್ ರಾವತ್ ಮೊಬೈಲ್ಗೆ ಸಂದೇಶ ಕಳಿಸಿದ್ದಾನೆ. ಅದಾದ ಬಳಿಕ ಕರೆಯನ್ನೂ ಮಾಡಿದ್ದಾನೆ. ‘ನೀನು ದೆಹಲಿಗೆ ಕಾಲಿಟ್ಟು, ನನ್ನ ಮುಖಾಮುಖಿಯಾದರೆ ಎಕೆ 47ನಿಂದ ನಿನ್ನನ್ನು ಕೊಲ್ಲುತ್ತೇನೆ. ಪಂಜಾಬ್ ಗಾಯಕ ಸಿಧು ಮೂಸೇವಾಲಾಗೆ ಆದ ಗತಿಯೇ ನಿನಗೂ ಆಗುತ್ತದೆ’ ಎಂದು ಅವನು ಸಂದೇಶ ಕಳಿಸಿದ್ದಾನೆ ಮತ್ತು ಕರೆ ಮಾಡಿದಾಗಲೂ ಅವನು ಅದನ್ನೇ ಹೇಳಿದ್ದಾನೆ. ಈ ಸಂಬಂಧ ಈಗ ಪುಣೆಯಲ್ಲಿ ಒಬ್ಬನನ್ನು ಮುಂಬಯಿ ಪೊಲೀಸರು ಬಂಧಿಸಿದ್ದು, ಆತನ ವಿಚಾರಣೆ ನಡೆಸುತ್ತಿದ್ದಾರೆ.
ತಮಗೆ ಬಂದ ಜೀವ ಬೆದರಿಕೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂಜಯ್ ರಾವತ್ ‘ನನಗೆ ಮಾ.31ರ ರಾತ್ರಿ ಬಂದ ಬೆದರಿಕೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ ಅವರು ಕ್ರಮ ಕೈಗೊಳ್ಳುತ್ತಾರೆ ಎಂಬ ಯಾವುದೇ ಭರವಸೆಯೂ ನನಗೆ ಇಲ್ಲ. ಕೆಲವೇ ದಿನಗಳ ಹಿಂದೆ ಇಂಥ ಬೆದರಿಕೆ ಬಂದಾಗ ನಾನು ನಮ್ಮ ರಾಜ್ಯ ಸರ್ಕಾರಕ್ಕೆ, ಗೃಹ ಸಚಿವರಿಗೆ ಮಾಹಿತಿ ನೀಡಿದ್ದೆ. ಆಗೆಲ್ಲ ಅವರು ಆಡಿಕೊಂಡು ನಕ್ಕಿದ್ದಾರೆ. ಇದೆಲ್ಲ ಸುಮ್ಮನೆ ಸ್ಟಂಟ್ ಎಂದು ಗೃಹ ಸಚಿವರು ವ್ಯಂಗ್ಯ ಮಾಡಿದ್ದಾರೆ.. ಬಿಜೆಪಿ ನೇತೃತ್ವದ ಸರ್ಕಾರಗಳು ಗಲಭೆ, ಭಯೋತ್ಪಾದನೆ, ಗೂಂಡಾಗಿರಿಗಳನ್ನು ಪ್ರಾಯೋಜಿಸುವುದರಲ್ಲಿ ತೊಡಗಿಕೊಂಡಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆಯ ರೂವಾರಿ, ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಕ್ಯಾಲಿಫೋರ್ನಿಯಾದಲ್ಲಿ ಬಂಧನ
30 ವರ್ಷದ ಲಾರೆನ್ಸ್ ಬಿಷ್ಣೋಯಿ ಬಹುದೊಡ್ಡ ಗ್ಯಾಂಗ್ಸ್ಟರ್. ಪಂಜಾಬ್ ಅಷ್ಟೇ ಅಲ್ಲ, ಇಡೀ ಉತ್ತರ ಭಾರತದಲ್ಲಿಯೇ ನಟೋರಿಯಸ್ ಎನ್ನಿಸಿಕೊಂಡವ. ಇವನದು ಅತ್ಯಂತ ದೊಡ್ಡ ಗ್ಯಾಂಗ್. ಇವನ ಗ್ಯಾಂಗ್ನ ಶೂಟರ್ಗಳು ದೇಶಾದ್ಯಂತ 700ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಕ್ರಿಯರಾಗಿದ್ದಾರೆ ಎಂದೇ ಹೇಳಲಾಗಿದೆ. 20ಕ್ಕೂ ಹೆಚ್ಚು ಕೇಸ್ಗಳನ್ನು ಮೈಮೇಲೆ ಎಳೆದುಕೊಂಡು, ಸದ್ಯ ತಿಹಾರ್ ಜೈಲು ಸೇರಿರುವ ಲಾರೆನ್ಸ್ ಬಿಷ್ಣೋಯಿ, ಅಲ್ಲಿದ್ದುಕೊಂಡೇ ಕೆಲವು ಗಲಭೆ, ಹತ್ಯೆಗಳಿಗೆ ಮಾಸ್ಟರ್ ಮೈಂಡ್ ಆಗಿದ್ದಾನೆ. ಕಳೆದ ವರ್ಷ ಹತ್ಯೆಗೀಡಾದ ಪಂಜಾಬ್ ಗಾಯಕ ಸಿಧು ಮೂಸೆವಾಲಾ ಕೇಸ್ನಲ್ಲಿ ಕೂಡ ಇವನ ಕೈವಾಡವಿದೆ.
ಬಿಷ್ಣೋಯಿ ಸಮುದಾಯದಲ್ಲಿ ಪೂಜನೀಯ ಸ್ಥಾನ ಪಡೆದ ಕೃಷ್ಣಮೃಗವನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಬೇಟೆಯಾಡಿರುವ ಕಾರಣಕ್ಕೆ ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್ ಬೆನ್ನುಬಿದ್ದಿದ್ದಾನೆ. ಸಲ್ಮಾನ್ನನ್ನು ಯಾವಾಗ ಕೊಲ್ಲುತ್ತೇನೋ ಆಗಲೇ ನಾನು ನಿಜವಾದ ಗ್ಯಾಂಗ್ಸ್ಟರ್ ಅನ್ನಿಸಿಕೊಳ್ಳುತ್ತೇನೆ ಎಂದು ಇತ್ತೀಚೆಗೆ ಆತ ಜೈಲಿನಲ್ಲಿ ಇದ್ದುಕೊಂಡೇ, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದ. ಇತ್ತೀಚೆಗೆ ಮತ್ತೆ ನಟ ಸಲ್ಮಾನ್ಖಾನ್ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ಜೀವ ಬೆದರಿಕೆ ಕರೆ ಬಂದಿದೆ.