ನವ ದೆಹಲಿ: ಜ್ಞಾನವಾಪಿ ಮಸೀದಿ ಕೇಸ್‌ನಲ್ಲಿ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ, ಹಿರಿಯ ವಕೀಲ ಅಭಯನಾಥ್ ಯಾದವ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಸೀದಿಯಲ್ಲಿರುವ ಶೃಂಗಾರ ಗೌರಿ ದೇವಿ ಮೂರ್ತಿಯನ್ನು ಪೂಜಿಸಲು ಅವಕಾಶ ಕೊಡಬೇಕು ಎಂದು ಹಿಂದು ಮಹಿಳೆಯರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿದೆ. ಈ ಅರ್ಜಿಗೆ ಪ್ರತಿಯಾಗಿ ಮಸೀದಿಯ ಅಂಜುಮನ್ ಇಂತಜಾಮಿಯಾ ಸಮಿತಿಯವರು, ಪೂಜಾ ಸ್ಥಳ ಕಾಯಿದೆಯನ್ನು ಪರಿಗಣಿಸಿ ಇಲ್ಲಿ ಪೂಜೆಗೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದಾರೆ. ಈ ಸಮಿತಿಯನ್ನು ಕೋರ್ಟ್‌ನಲ್ಲಿ ಅಭಯನಾಥ್ ಯಾದವ್ ಪ್ರತಿನಿಧಿಸಿದ್ದರು.
ಭಾನುವಾರ (ಜುಲೈ 31) ಅಭಯನಾಥ್‌ರಿಗೆ ಹೃದಾಯಾಘಾತವಾಗಿದೆ. ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕರೆದುಕೊಂಡು ಹೋಗುವಷ್ಟರಲ್ಲೇ ಅವರು ಉಸಿರು ನಿಲ್ಲಿಸಿದ್ದರು. ಜ್ಞಾನವಾಪಿ ಕೇಸ್‌ಗೆ ಸಂಬಂಧಪಟ್ಟು ವಾರಾಣಸಿ ಕೋರ್ಟ್‌ನಲ್ಲಿ ಈಗಾಗಲೇ ಚರ್ಚೆಯಾಗಿದೆ. ಹಿಂದುಗಳ ಪರ ವಕೀಲರು ಮಂಡಿಸಿದ್ದ ವಾದಕ್ಕೆ, ಆಗಸ್ಟ್ 4ರಂದು ಮುಸ್ಲಿಂ ಸಮುದಾಯದ ವಕೀಲರು ಪ್ರತಿವಾದ ಮಾಡಬೇಕಿತ್ತು.
ಅಭಯನಾಥ್ ಯಾದವ್ ಮಗಳ ಮದುವೆ ಇತ್ತೀಚೆಗಷ್ಟೇ ಆಗಿದೆ. ಆಕೆ ಬಂದ ಮೇಲಷ್ಟೇ ಇವರ ಅಂತ್ಯಕ್ರಿಯೆ ಆಗಲಿದೆ ಎನ್ನಲಾಗಿದೆ. ಇದೀಗ ಅಭಯನಾಥ್ ಮೃತಪಟ್ಟಿದ್ದರಿಂದ ಕೋರ್ಟ್‌ನಲ್ಲಿ ವಿಚಾರಣೆ ಮುಂದೂಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಕೇಸ್; ಶಿವಲಿಂಗ ಪೂಜೆಗೆ ಅವಕಾಶ ಕೋರಿದ್ದ ಅರ್ಜಿ ವಿಚಾರಣೆ ಒಪ್ಪದ ಸುಪ್ರೀಂಕೋರ್ಟ್