ನವ ದೆಹಲಿ: ದೇಶದ ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಕಾನೂನು ಪಾಲನೆ ಸರಿಯಾಗಿ ಆಗಬೇಕೆಂದರೆ, ಕಾಯ್ದೆಯ ನಿಯಮಗಳ ರಕ್ಷಣೆಯಾಗಬೇಕು ಎಂದರೆ ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಕಡ್ಡಾಯವಾಗಿ ನಿಯಂತ್ರಣ ಹೇರಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜಿ.ಬಿ.ಪರ್ಡಿವಾಲಾ ಹೇಳಿದ್ದಾರೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅರ್ಜಿ ವಿಚಾರಣೆ ಮಾಡುವಾಗ ಕಠಿಣ ಪದ ಪ್ರಯೋಗ ಮಾಡಿ ಆಕೆಯ ಮಾತುಗಳನ್ನು ಖಂಡಿಸಿತ್ತು. ಪ್ರವಾದಿ ಮೊಹಮ್ಮದ್ ವಿರುದ್ಧ ಮಾತನಾಡಿ, ಈ ದೇಶದ ಕಾನೂನು-ಸುವ್ಯವಸ್ಥೆಗೇ ಬೆದರಿಕೆಯೊಡ್ಡಿದ ನೂಪುರ್ ಶರ್ಮಾ ಇಡೀ ದೇಶದ ಕ್ಷಮೆ ಕೇಳಬೇಕು ಎಂದು ನ್ಯಾ. ಸೂರ್ಯಕಾಂತ್ ನೇತೃತ್ವದ ಪೀಠ ಹೇಳಿತ್ತು. ಈ ಪೀಠದಲ್ಲಿದ್ದ ನ್ಯಾಯಮೂರ್ತಿಗಳಲ್ಲಿ ಜಿ.ಬಿ.ಪರ್ಡಿವಾಲಾ ಕೂಡ ಇದ್ದರು.
ನೂಪುರ್ ಶರ್ಮಾ ವಿರುದ್ಧ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಕಠಿಣವಾಗಿ ಮಾತಾಡಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಖಂಡಿಸಿದ್ದಾರೆ. ಅಷ್ಟೇ ಅಲ್ಲ, ನ್ಯಾಯಮೂರ್ತಿಗಳ ವಿರುದ್ಧವೂ ನೇರವಾಗಿ ಆರೋಪ ಮಾಡಿದ್ದಾರೆ. ಅದರ ಬೆನ್ನಲ್ಲೇ ನ್ಯಾ. ಪರ್ಡಿವಾಲಾ ಈ ಹೇಳಿಕೆ ನೀಡಿದ್ದಾರೆ. ಮಾಜಿ ನ್ಯಾಯಮೂರ್ತಿ ಎಚ್. ಆರ್. ಖನ್ನಾ ಸ್ಮರಣಾರ್ಥ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವರ್ಚ್ಯುವಲ್ ಆಗಿ ಮಾತನಾಡಿದ ಅವರು, ʼನ್ಯಾಯಾಧೀಶರು ನೀಡುವ ತೀರ್ಪಿನ ವಿರುದ್ಧವೂ ಸಾಮಾಜಿಕ ಮಾಧ್ಯಮಗಳಲ್ಲಿ ವಾಗ್ದಾಳಿ, ಟೀಕೆ, ಆಕ್ರೋಶ ವ್ಯಕ್ತವಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ಹೀಗೇ ಮುಂದುವರಿದೆ ಭವಿಷ್ಯದಲ್ಲಿ ದೇಶದಲ್ಲಿ ಅಪಾಯಕರ ಸನ್ನಿವೇಶ ಎದುರಾಗಬಹುದು. ನ್ಯಾಯಾಧೀಶರು, ಕಾನೂನು ಏನು ಹೇಳುತ್ತದೆ ಎಂಬುದನ್ನು ಗಮನಿಸದೆ, ಸಾಮಾಜಿಕ ಮಾಧ್ಯಮಗಳಲ್ಲಿ ಏನು ಟೀಕೆ ಬರಬಹುದು, ಏನು ಅಭಿಪ್ರಾಯ ವ್ಯಕ್ತವಾಗಬಹುದು ಎಂದೇ ಯೋಚಿಸಿ, ಅದರ ಆಧಾರದ ಮೇಲೆ ತೀರ್ಪು ಕೊಡುವ ಪರಿಸ್ಥಿತಿಯೂ ಬರಬಹುದು. ಹೀಗಾದರೆ ಕಾಯ್ದೆ-ಕಾನೂನಿನ ನಿಯಮಗಳೆಲ್ಲ ನಿರ್ಲಕ್ಷ್ಯಕ್ಕೆ ಒಳಗಾಗಿ, ನ್ಯಾಯಾಲಯಗಳ ಪಾವಿತ್ರ್ಯತೆಗೇ ಧಕ್ಕೆ ಬರುತ್ತದೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭದ್ರತಾ ವ್ಯವಸ್ಥೆಗೇ ಬೆದರಿಕೆ ಒಡ್ಡಿದ ನೂಪುರ್ ಶರ್ಮಾ ದೇಶದ ಕ್ಷಮೆ ಕೋರಬೇಕು: ಸುಪ್ರೀಂಕೋರ್ಟ್
ಏನೇ ಮಾಡಿದರೂ ಸೋಷಿಯಲ್ ಮೀಡಿಯಾಗಳಲ್ಲಿ ಮಾತನಾಡುತ್ತಾರೆ. ಅರ್ಧ ಸತ್ಯ ತಿಳಿದವರು, ತಪ್ಪಾಗಿ ಮಾಹಿತಿ ಹೊಂದಿರುವವರು, ಕಾನೂನು, ಪುರಾವೆ, ನ್ಯಾಯಾಂಗದ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳದೆ ಇರುವವರು ಸಾಮಾಜಿಕ ಮಾಧ್ಯಮವನ್ನು ಅತಿಕ್ರಮಿಸಿಕೊಂಡಿದ್ದಾರೆ. ಹೀಗಾಗಿ ಯಾವುದೇ ವಿಷಯಗಳು ನ್ಯಾಯಾಲಯಗಳಲ್ಲಿ ವಿಚಾರಣೆ ಆದ ಬಳಿಕ ಮತ್ತೆ ಡಿಜಿಟಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತವೆ. ಅಲ್ಲೂ ಒಂದು ಸ್ವರೂಪದ ವಿಚಾರಣೆ ನಡೆಯುತ್ತದೆ. ಡಿಜಿಟಲ್ ಮಾಧ್ಯಮಗಳು ನ್ಯಾಯಾಂಗದೊಳಗೆ ಹಸ್ತಕ್ಷೇಪ ಮಾಡುತ್ತಿವೆ. ಲಕ್ಷಣ ರೇಖೆಯನ್ನು ದಾಟುತ್ತಿವೆ ಎಂದು ಜಿ.ಬಿ.ಪರ್ಡಿವಾಲಾ ಬೇಸರ ವ್ಯಕ್ತಪಡಿಸಿದರು. ಅಂದರೆ ನ್ಯಾಯಾಲಯದ ತೀರ್ಪುಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ, ವ್ಯಂಗ್ಯ, ಅದನ್ನೇ ಇಟ್ಟುಕೊಂಡು ನ್ಯಾಯಮೂರ್ತಿಗಳನ್ನು ಹೀಗಳೆಯುವುದು ಸ್ವಲ್ಪವೂ ಸರಿಯಲ್ಲ ಎಂಬುದನ್ನು ಅವರು ಹೇಳಿದ್ದಾರೆ.
ಇದನ್ನೂ ಓದಿ: ನೂಪುರ್ ಶರ್ಮಾಗೆ ಸುಪ್ರೀಂ ತಪರಾಕಿ: ನಾಲಿಗೆ ಹರಿಬಿಡುವವರಿಗೆ ಕಪಾಳಮೋಕ್ಷ