ಚಂಡೀಗಢ: ಕಳೆದ ಆರು ದಿನಗಳಿಂದ ಪಂಜಾಬ್ ಪೊಲೀಸರ ಕೈಗೆ ಸಿಗದೆ, ಕಾರು ಚಲಾಯಿಸಿ, ಬೈಕ್ ಹತ್ತಿ, ಕೊನೆಗೆ ಬೇರೊಂದು ವಾಹನದಲ್ಲಿ ಸಂಚರಿಸುವ ಮೂಲಕ ತಪ್ಪಿಸಿಕೊಂಡು ತಿರುಗಾಡುತ್ತಿರುವ ಖಲಿಸ್ತಾನಿ ನಾಯಕ ಅಮೃತ್‌ಪಾಲ್ ಸಿಂಗ್ (Amritpal Singh) ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದೆ. ಪಂಜಾಬ್ ಪೊಲೀಸರ ಸತತ ಚೇಸಿಂಗ್ ಹೊರತಾಗಿಯೂ ಅವರ ಕೈಗೆ ಸಿಗದೆ ಪರಾರಿಯಾಗಿರುವ ಅಮೃತ್‌ಪಾಲ್‌ಗೆ ಆತನ ಗೆಳೆಯನೇ ಛೀಮಾರಿ ಹಾಕಿದ್ದಾನೆ. “ಹೇಡಿಯಂತೆ ಓಡಬೇಡ, ಶೂರನಂತೆ ಪೊಲೀಸರಿಗೆ ಶರಣಾಗು” ಎಂಬುದಾಗಿ ಅಮೃತ್‌ಪಾಲ್ ಆಪ್ತ ಹರ್‌ಜಿತ್ ಸಿಂಗ್ ಆಡಿಯೊ ಮೆಸೇಜ್ ಮೂಲಕ ಆಗ್ರಹಿಸಿದ್ದಾನೆ ಎಂದು ತಿಳಿದುಬಂದಿದೆ.
ವಾರಿಸ್ ಪಂಜಾಬ್ ದೆ ಮುಖ್ಯಸ್ಥನೂ ಆಗಿರುವ ಅಮೃತ್‌ಪಾಲ್ ಸಿಂಗ್ ಪರಾರಿಯಾಗಲು ನೆರವು ನೀಡಿದ್ದಾನೆ ಎನ್ನಲಾದ ಪಪ್ಪಲ್ ಪ್ರೀತ್‌ಗೆ ಹರ್‌ಜಿತ್ ಸಿಂಗ್ ಕಳುಹಿಸಿದ ಆಡಿಯೊ ಲಭ್ಯವಾಗಿದೆ. ಶರಣಾಗು ಎಂಬುದಾಗಿ ಪಪ್ಪಲ್ ಪ್ರೀತ್ ಸಿಂಗ್ ಮೂಲಕ ಅಮೃತ್‌ಪಾಲ್‌ಗೆ ಹರ್‌ಜಿತ್ ಸಿಂಗ್ ಹೇಳಿದ್ದಾನೆ. “ಹೇಡಿಯಂತೆ ಓಡಿ ಹೋಗುವುದು ಬೇಡ. ಸುಮ್ಮನೆ ಪೊಲೀಸರಿಗೆ ಶರಣಾಗು. ನೀನು ಶರಣಾಗುವ ಕುರಿತು ನಾನು ಸ್ಥಳೀಯ ಇನ್ಸ್‌ಪೆಕ್ಟರ್ ಜನರಲ್‌ಗೆ ಮಾಹಿತಿ ನೀಡುತ್ತೇನೆ” ಎಂಬುದಾಗಿ ಹರ್‌ಜಿತ್ ಸಿಂಗ್ ಹೇಳಿದ್ದಾನೆ.
“ಇಂದಲ್ಲ ನಾಳೆ ಖಂಡಿತವಾಗಿಯೂ ನಮ್ಮನ್ನು ಬಂಧಿಸಲಾಗುತ್ತದೆ. ಹೀಗಿದ್ದಾಗ ತಲೆಮರೆಸಿಕೊಂಡು ತಿರುಗಾಡುವುದು ಸರಿಯಲ್ಲ. ನಾವು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಪೊಲೀಸರಿಗೆ ಶರಣಾಗಬಹುದು. ಇದರಿಂದ ನಮಗೇ ಅನುಕೂಲವಾಗುತ್ತದೆ. ಎಲ್ಲರೂ ಬಾಯಿಮುಚ್ಚಿಕೊಂಡಿರಲು ಸಾಧ್ಯವಾಗುತ್ತದೆ. ನಾವು ಮಾಧ್ಯಮಗಳನ್ನು ಸಂಪರ್ಕಿಸೋಣ. ಬಳಿಕ ಶೂರರಂತೆ ಶರಣಾಗೋಣ. ಎಲ್ಲ ಕಡೆ ಕ್ಯಾಮೆರಾಗಳು ಇರುವುದರಿಂದ ನಾವು ಪ್ರತಿದಿನ ತಪ್ಪಿಸಿಕೊಂಡು ತಿರುಗಾಡಲು ಆಗುವುದಿಲ್ಲ” ಎಂಬುದಾಗಿ ಪಂಜಾಬಿಯಲ್ಲಿ ಆಡಿಯೊ ಮೆಸೇಜ್ ಕಳುಹಿಸಿದ್ದಾನೆ.
ನೀನು ಅಣ್ಣನಿಗೆ ಹೇಳು….
“ನೀನು ಅಣ್ಣನಿಗೆ (ಅಮೃತ್‌ಪಾಲ್ ಸಿಂಗ್) ಹೇಳು. ಕೂಡಲೇ ಶರಣಾಗುವ ಮೂಲಕ ಸಿಖ್ಖರನ್ನು ಉಳಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತನಾಗು ಎಂಬ ಸಂದೇಶವನ್ನು ಕಳುಹಿಸು. ಹೇಡಿಯಂತೆ ತಲೆಮರೆಸಿಕೊಂಡು ತಿರುಗಾಡುವುದಕ್ಕಿಂತ ವೀರನಂತೆ ಶರಣಾಗೋಣ ಎಂಬುದಾಗಿ ತಿಳಿಸು” ಎಂದು ಹರ್‌ಜಿತ್ ಸಿಂಗ್ ಕಳುಹಿಸಿದ ಆಡಿಯೊ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಆಡಿಯೊ ಸಂದೇಶವು ಸ್ಥಳೀಯ ಮಾಧ್ಯಮಗಳಿಗೆ ಸಿಕ್ಕಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಅಮೃತ್‌ಪಾಲ್ ಸಿಂಗ್ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಇಂಟರ್‌ನೆಟ್ ಸಂಪರ್ಕ ಕಲ್ಪಿಸಲಾಗಿದ್ದರೂ, ಆಡಿಯೊ ಸಂದೇಶ ರವಾನೆ, ವಾಯ್ಸ್ ಕಾಲ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮೃತ್‌ಪಾಲ್ ಸಿಂಗ್ ಮಾರ್ಚ್ 18ರಂದು ಪರಾರಿಯಾಗಿದ್ದು, ಆತನು ಪರಾರಿಯಾಗಲು ಸಹಾಯ ಮಾಡಿದವರು ಸೇರಿ ಇದುವರೆಗೆ 154 ಜನರನ್ನು ಬಂಧಿಸಲಾಗಿದೆ. ಆದರೆ, ಸತತ ಕಾರ್ಯಾಚರಣೆಯ ಹೊರತಾಗಿಯೂ ಇದುವರೆಗೆ ಖಲಿಸ್ತಾನಿ ನಾಯಕನನ್ನು ಬಂಧಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: Amritpal Singh: ತ್ರಿಚಕ್ರ ವಾಹನದಲ್ಲಿ ಬೈಕ್ನೊಂದಿಗೆ ಕುಳಿತ ಅಮೃತ್‌ಪಾಲ್ ಸಿಂಗ್; ಇನ್ನೊಂದು ಫೋಟೋ ವೈರಲ್