Site icon Vistara News

Delhi MCD: ರಣರಂಗವಾದ ದೆಹಲಿ ಮಹಾನಗರ ಪಾಲಿಕೆ; ಬಿಜೆಪಿ ಕೌನ್ಸಿಲರ್​ಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದ ಮೇಯರ್​ ಶೆಲ್ಲಿ

Life Threatening attack By BJP councillors Complaint By Mayor Shelly Oberoi

#image_title

ನವ ದೆಹಲಿ: ದೆಹಲಿ ಮಹಾನಗರ ಪಾಲಿಕೆ (Delhi MCD) ಭವನವ ಒಂದು ರಣರಂಗವಾದಂತೆ ಆಗಿದೆ. ಬಿಜೆಪಿ-ಆಪ್​ ಕೌನ್ಸಿಲರ್​​ಗಳು ತಮ್ಮ ಜವಾಬ್ದಾರಿ ಮರೆತು, ಥೇಟ್​ ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ಡಿಸೆಂಬರ್​ನಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆದು, ಆಪ್​ ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೇನೋ ಬಂತು. ಆದರೆ ಮೇಯರ್​-ಉಪಮೇಯರ್ ಆಯ್ಕೆಗೆ ತಿಂಗಳಿಗೂ ಹೆಚ್ಚಿನ ಕಾಲ ಕಾಯಬೇಕಾಯಿತು. ಗಲಾಟೆ-ಗದ್ದಲದ ನಡುವೆ ಮೇಯರ್​-ಉಪಮೇಯರ್ ಆಯ್ಕೆಯೇನೋ ಆಯಿತು. ಆದರೆ ಈಗ ಸ್ಥಾಯಿ ಸಮಿತಿಯ 6 ಸದಸ್ಯರ ಸ್ಥಾನಕ್ಕೆ ನಡೆಸಬೇಕಾದ ಚುನಾವಣೆ ಪ್ರತಿದಿನ ಮುಂದೂಡಲ್ಪಡುತ್ತಿದೆ. ಬರೀ ಅಷ್ಟೇ ಅಲ್ಲ, ಆಪ್​-ಬಿಜೆಪಿ ಕೌನ್ಸಿಲರ್​ಗಳ ಹೊಡೆದಾಟ ವಿಕೋಪಕ್ಕೆ ಹೋಗಿದೆ. ಸದ್ಯ ಆಪ್​ ಮಹಿಳಾ ಕೌನ್ಸಿಲರ್​ಗಳು ಪೊಲೀಸ್ ಸ್ಟೇಶನ್​ ಮೆಟ್ಟಿಲೇರಿದ್ದರೆ, ಬಿಜೆಪಿ ಕೌನ್ಸಿಲರ್​ಗಳು ಕೋರ್ಟ್​ಗೆ ಹೋಗುವುದಾಗಿ ಹೇಳಿದ್ದಾರೆ.

ಪಾಲಿಕೆ ಮೇಯರ್ ಶೆಲ್ಲಿ ಒಬೆರಾಯ್​ ಅವರು ಬಿಜೆಪಿ ಕೌನ್ಸಿಲರ್​ಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶುಕ್ರವಾರ ಗಲಾಟೆ ನಡೆಯುತ್ತಿದ್ದ ವೇಳೆ, ಕೌನ್ಸಿಲರ್​ಗಳು ನನ್ನ ಮತ್ತು ಆಪ್​​ನ ಇತರ ಸದಸ್ಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ನಾನಂತೂ ನನ್ನ ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿದ್ದೆ ಎಂದು ಹೇಳಿದ್ದಾರೆ. ನನ್ನ ಸಹೋದ್ಯೋಗಿ ಆಶು ಠಾಕೂರ್​ ಮೇಲೆ ಕೂಡ ಬಿಜೆಪಿ ಕೌನ್ಸಿಲರ್​​ವೊಬ್ಬ ಕಠೋರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಮೇಯರ್​ ಆರೋಪಿಸಿದ್ದಾರೆ. ಸದ್ಯ ಮೇಯರ್ ಶೆಲ್ಲಿ ಒಬೆರಾಯ್​, ಇನ್ನಿತರ ಆಪ್​ ನಾಯಕಿಯರಾದ ಸಾರಿಕಾ ಚೌಧರಿ, ಆಶು ಠಾಕೂರ್​ ಅವರು ದೆಹಲಿಯ ಕಮಲಾ ಮಾರ್ಕೆಟ್​ ಪೊಲೀಸ್ ಠಾಣೆಗೆ ಹೋಗಿ, ಬಿಜೆಪಿ ಕೌನ್ಸಿಲರ್​ಗಳು ಹಲ್ಲೆ ನಡೆಸಿದ್ದಾಗಿ ದೂರು ನೀಡಿದ್ದಾರೆ.

ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ನಾವು ರಹಸ್ಯ ಮತದಾನ ಮಾಡುತ್ತಿದ್ದಾಗ, ಆಪ್​ ಕೌನ್ಸಿಲರ್​ಗಳು ಮೊಬೈಲ್​ನಲ್ಲಿ ಫೋಟೋ ತೆಗೆದಿದ್ದಾರೆ ಎಂದು ಬಿಜೆಪಿ ಕೌನ್ಸಿಲರ್​ಗಳು ಗಲಾಟೆ ಶುರು ಮಾಡಿದರು. ಅಲ್ಲಿಂದ ಎರಡೂ ಪಕ್ಷಗಳ ಕೌನ್ಸಿಲರ್​ಗಳ ಮಧ್ಯೆ ಗಲಾಟೆ-ಮಾರಾಮಾರಿ ಶುರುವಾಗಿತ್ತು. ಪರಸ್ಪರ ಗುದ್ದಾಟ-ನೂಕಾಟ ಜೋರಾಗಿಯೇ ನಡೆಯಿತು. ಅಂತಿಮವಾಗಿ ಸ್ಥಾಯಿ ಸಮಿತಿ ಚುನಾವಣೆಯನ್ನು ಫೆ.27ಕ್ಕೆ ನಡೆಸುವುದಾಗಿ ಹೇಳಿ, ಮೇಯರ್​ ಶೆಲ್ಲಿ ಒಬೆರಾಯ್​ ಪಾಲಿಕೆ ಸಭೆಯನ್ನು ಮುಂದೂಡಿದ್ದರು. ಆದರೆ ಈಗ ಬಿಜೆಪಿ ಫೆ.27ರಂದು ಚುನಾವಣೆ ನಡೆಸಲು ಬಿಡುವುದಿಲ್ಲ. ಈ ಬಗ್ಗೆ ನಾವು ಕೋರ್ಟ್​ಗೆ ಹೋಗುತ್ತೇವೆ ಎಂದು ಹೇಳಿದೆ.

ಇದನ್ನೂ ಓದಿ: Delhi MCD: ದೆಹಲಿ ಮಹಾನಗರ ಪಾಲಿಕೆಯಲ್ಲಿ ಮತ್ತೆ ಆಪ್​-ಬಿಜೆಪಿ ಮಾರಾಮಾರಿ; ಗುದ್ದಾಡಿ, ತಳ್ಳಾಡಿಕೊಂಡ ಕೌನ್ಸಿಲರ್​​ಗಳು

ಈಗ ಆಪ್​ ಮಹಿಳಾ ಕೌನ್ಸಿಲರ್​ಗಳು ಬಿಜೆಪಿಗರ ವಿರುದ್ಧ ತಿರುಗಿಬಿದ್ದಿದ್ದಾರೆ. ‘ಆಶು ಠಾಕೂರ್​ ಅವರ ಸ್ಕಾರ್ಫ್​ ಹಿಡಿದು ಎಳೆಯಲಾಗಿದೆ. ಡಯಾಸ್​ ಬಳಿ ನಿಂತಿದ್ದ ಅವರನ್ನು ಪಾಲಿಕೆಯ ನಿರ್ಗಮನ ದ್ವಾರದವರೆಗೆ ಬಿಜೆಪಿ ಕೌನ್ಸಿಲರ್​ಗಳು ಎಳೆದುಕೊಂಡು ಬಂದರು ಎಂದು ಆಪ್​ ಶಾಸಕಿ ಅತಿಶಿ ಆರೋಪಿಸಿದ್ದಾರೆ. ‘ನಾನು ಸ್ಥಾಯಿ ಸಮಿತಿಯ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಂತೆ ಬಿಜೆಪಿ ಕೌನ್ಸಿಲರ್​ಗಳಾದ ರವಿ ನೇಗಿ, ಅರ್ಜುನ್​ ಮಾರ್ವಾಹ್​, ಚಂದನ್​ ಚೌಧರಿ ಮತ್ತು ಇತರರು ಸೇರಿ ನನ್ನ ಮೇಲೆ ಹಲ್ಲೆ ನಡೆಸಿದರು. ಅದರಲ್ಲಿ ಚಂದನ್​ ಚೌಧರಿ ನನ್ನ ಕುರ್ಚಿಯನ್ನು ಎಳೆದು, ನನ್ನನ್ನು ತಳ್ಳಿದರು. ನನ್ನ ಜೀವಕ್ಕೇನೂ ಅಪಾಯವಾಗದೆ ಇರಲಿ ಎಂದು ಅಲ್ಲಿಂದ ಓಡಿದೆ’ ಎಂದು ಮೇಯರ್​ ಶೆಲ್ಲಿ ಒಬೆರಾಯ್​ ಹೇಳಿದ್ದಾರೆ.

Exit mobile version