ನವ ದೆಹಲಿ: 75ನೇ ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿರುವ ಬೆನ್ನಲ್ಲೇ, ದೆಹಲಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸ್, ಭದ್ರತಾ ಪಡೆಗಳ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಇಡೀ ನಗರದಲ್ಲಿ ಹಗಲು-ರಾತ್ರಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಇದೆಲ್ಲದರ ಮಧ್ಯೆ ಪೂರ್ವ ದೆಹಲಿಯಲ್ಲಿ 2 ಸಾವಿರಗಳಷ್ಟು ಜೀವಂತ ಕ್ಯಾಟ್ರಿಜ್ಗಳನ್ನು (ಸಿಡಿಮದ್ದು)ಪೊಲೀಸರು ವಶಪಡಿಸಿಕೊಂಡಿದ್ದಾಗಿ ವರದಿಯಾಗಿದೆ. ಈ ಬಗ್ಗೆ ಹೆಚ್ಚಿನ ವಿವರವನ್ನು ದೆಹಲಿ ಪೊಲೀಸರು ನೀಡಲಿಲ್ಲ.
ಆಗಸ್ಟ್ 7ರಂದು ದೆಹಲಿಯಲ್ಲಿ ಮೊಹ್ಸಿನ್ ಅಹ್ಮದ್ ಎಂಬ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ (NIA)ಬಂಧಿಸಿತ್ತು. ಈತ ಐಸಿಸ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಎಂಬ ಮಾಹಿತಿ ಹೊರಬಿದ್ದಿದೆ. ಇವನಿನ್ನೂ ವಿದ್ಯಾರ್ಥಿಯಾಗಿದ್ದು, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಯೂನಿರ್ವಸಿಟಿಯಲ್ಲಿ ಎರಡನೇ ವರ್ಷದಲ್ಲಿ ಓದುತ್ತಿದ್ದ. ಐಸಿಸ್ ಸಂಘಟನೆಗೆ ಕೆಲಸ ಮಾಡುತ್ತಿದ್ದ ಈತ ಹೆಚ್ಚಾಗಿ ಆನ್ಲೈನ್ ಚಟುವಟಿಕೆ ನಡೆಸುತ್ತಿದ್ದ ಮತ್ತು ವಿದೇಶಗಳಿಂದ ದೇಣಿಗೆ ಸಂಗ್ರಹ ಮಾಡುವ ಕೆಲಸದಲ್ಲಿ ಸಕ್ರಿಯನಾಗಿದ್ದ ಎಂದು ಹೇಳಲಾಗಿದೆ. ಮೊಹಿನ್ ಮೂಲತಃ ಪಟನಾ ಮೂಲದವನಾಗಿದ್ದು, ಎನ್ಐಎ ಅಧಿಕಾರಿಗಳು ದೆಹಲಿಯ ಬಾಟ್ಲಾ ಹೌಸ್ನಲ್ಲಿರುವ ಆತನ ಮನೆಗೇ ಬಂದು, ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದರು.
ಭಾರತ ಈ ಸಲ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿದೆ. ಅದರ ಸಿದ್ಧತೆ ರಾಷ್ಟ್ರಾದ್ಯಂತ ನಡೆಯುತ್ತಿದೆ. ಅದರಲ್ಲೂ ದೆಹಲಿಯ ಕೆಂಪುಕೋಟೆ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ತ್ರಿವರ್ಣ ಧ್ವಜ ಹಾರಿಸಲಿದ್ದು, ಬಳಿಕ ಸ್ವಾತಂತ್ರ್ಯೋತ್ಸವ ಪರೇಡ್ ನಡೆಯಲಿದೆ. ಈ ಮಧ್ಯೆ ಉಗ್ರ ಬೆದರಿಕೆಯೂ ಇದೆ. ಯಾವುದೇ ತೊಂದರೆಯಾಗದಂತೆ ಭದ್ರತಾ ಪಡೆಗಳು ಮುನ್ನೆಚ್ಚರಿಕೆ ವಹಿಸಿವೆ. ಅಲೆಮಾರಿಗಳು, ರಸ್ತೆ ಬದಿಗೆ ವಾಸವಾಗಿರುವವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇವರ ಮೇಲೆ ಕಣ್ಣಿಡಲು ಮುಖ ಗುರುತಿಸುವಿಕೆ ಸಾಫ್ಟ್ವೇರ್ ಬಳಸಲೂ ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ: Terrorist Arrest | ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಉಗ್ರ ಕೃತ್ಯ; ದೆಹಲಿಯಲ್ಲಿ ಐಎಸ್ ಭಯೋತ್ಪಾದಕ ಬಂಧನ