ತಿರುವನಂತಪುರಂ: ಅತಿ ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸುತ್ತಿರುವವರು ಪುರುಷರು ಆಗಿರುವಾಗ, ಹುಡುಗಿಯರು/ಮಹಿಳೆಯರನ್ನೇಕೆ ಹೊರಗೆ ಓಡಾಡುವುದರಿಂದ ನಿರ್ಬಂಧಿಸಬೇಕು ಎಂದು ಕೇರಳ ಹೈಕೋರ್ಟ್, ಅಲ್ಲಿನ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಕೇರಳದ ಕೊಯಿಕ್ಕೋಡ್ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಹಾಸ್ಟೆಲ್ನಲ್ಲಿ ರಾತ್ರಿ 9.30ರ ನಂತರ ಹುಡುಗಿಯರು ಯಾರೂ ಹೊರಗೆ ಹೋಗಬಾರದು. ಹೊರಗೆ ಹೋಗಿದ್ದವರೂ ರಾತ್ರಿ 9.30ರೊಳಗೆ ಹಾಸ್ಟೆಲ್ ಸೇರಿರಬೇಕು ಎಂದು ನಿರ್ಬಂಧ ವಿಧಿಸಲಾಗಿದೆ. ಕೇರಳ ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ಈ ಅಧಿಸೂಚನೆ ವಿರುದ್ಧ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು, ‘ಹುಡುಗಿಯರಿಗೆ ಮಾತ್ರ ಏಕೆ ನಿರ್ಬಂಧ? ಇಲ್ಲಿ ಸಮಸ್ಯೆ ಸೃಷ್ಟಿ ಮಾಡುತ್ತಿರುವವರು ಪುರುಷರು. ಹಾಗಾಗಿ ಅವರನ್ನು ಲಾಕ್ ಮಾಡಿ. ರಾತ್ರಿ 8ಗಂಟೆಯೊಳಗೆ ಪುರುಷರನ್ನು ಮನೆಯೊಳಗೆ ಕೂಡಿ ಹಾಕಿ, ಹುಡುಗಿಯರು ಆರಾಮಾಗಿ ಓಡಾಡಿಕೊಂಡಿರಲು ಬಿಟ್ಟುಬಿಡಿ’ ಎಂದು ಹೇಳಿದ್ದಾರೆ. ‘ಈ ಆಧುನಿಕ ಕಾಲದಲ್ಲಿ ಪುರುಷ ಪ್ರಾಧಾನ್ಯತೆಗೆ ಅನುಮೋದನೆ ಇಲ್ಲ. ಮಹಿಳೆಯರಿಗೆ ಸುರಕ್ಷತೆ ನೀಡುವ ಸೋಗಿನಲ್ಲಿಯೂ ಅವರು ಬರುವ ಅಗತ್ಯವಿಲ್ಲ. ಹೇಗೆ ಹುಡುಗರು ತಮ್ಮ ರಕ್ಷಣೆ ತಾವು ಮಾಡಿಕೊಳ್ಳುತ್ತಾರೋ, ಹಾಗೇ, ಹುಡುಗಿಯರೂ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಸಮರ್ಥರಾಗಿದ್ದಾರೆ. ಹಾಗೊಮ್ಮೆ ಅವರ ರಕ್ಷಣೆ ಅಗತ್ಯವಿದ್ದರೆ, ಪೊಲೀಸರು, ಸಾರ್ವಜನಿಕ ಆಡಳಿತಗಳ ಸಹಾಯ ತೆಗೆದುಕೊಳ್ಳಿ, ಹುಡುಗಿಯರನ್ನು ಒಳಗೆ ಕೂಡಿಹಾಕಬೇಡಿ’ ಎಂದು ಶಿಕ್ಷಣ ಇಲಾಖೆಗೆ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಸೂಚನೆ ನೀಡಿದ್ದಾರೆ.
ಈ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಹುಡುಗರ ಹಾಸ್ಟೆಲ್ ಕೂಡ ಇದ್ದು, ಅವರಿಗೆ ಇಂಥ ಸೂಚನೆಯನ್ನೇನೂ ನೀಡಲಾಗಿಲ್ಲ. ಅದನ್ನೂ ಕೂಡ ವಿದ್ಯಾರ್ಥಿನಿಯರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಹೈಕೋರ್ಟ್ ಪ್ರಶ್ನೆಗೆ ಉತ್ತರಿಸಿದ ಕೇರಳ ರಾಜ್ಯ ಸರ್ಕಾರ, ಇಲ್ಲಿನ ವಿದ್ಯಾರ್ಥಿನಿಯರ ಪಾಲಕರ ಮನವಿ ಮೇರೆಗೆ ತಾವು ಈ ನಿಯಮ ತಂದಿದ್ದಾಗಿ ಹೇಳಿಕೊಂಡಿತು. ಆದರೆ ಹೈಕೋರ್ಟ್ ಅದನ್ನೂ ಒಪ್ಪಲಿಲ್ಲ. ‘ಹಾಸ್ಟೆಲ್ ವಿದ್ಯಾರ್ಥಿನಿಯರ ಸುರಕ್ಷತೆಗೆ ಸಕಲ ವ್ಯವಸ್ಥೆ ಮಾಡಬೇಕಾಗಿರುವುದು ನಿಮ್ಮ ಕರ್ತವ್ಯ. ಅದು ಬಿಟ್ಟು ಅವರ ಓಡಾಟವನ್ನೇ ನಿರ್ಬಂಧಿಸಿದರೆ ಹೇಗೆ?’ ಎಂದು ಪ್ರಶ್ನೆ ಮಾಡಿದೆ. ಹಾಗೇ, ರಾತ್ರಿ 9.30ರ ನಂತರ ಹುಡುಗಿಯರು ಹೊರಹೋಗಬಾರದು, ಕ್ಯಾಂಪಸ್ನಲ್ಲೂ ಓಡಾಡಬಾರದು ಎಂದು ನಿರ್ಬಂಧ ಹೇರಿದ್ದು ಯಾಕೆ ಎಂಬುದಕ್ಕೆ ಸೂಕ್ತ ಉತ್ತರ ಕೊಡಬೇಕು ಎಂದು ಹೇಳಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಗುರುವಾರ (ಡಿ.15)ಕ್ಕೆ ಮುಂದೂಡಿದೆ.
ಇದನ್ನೂ ಓದಿ: Kantara Movie | ವರಾಹ ರೂಪಂ ಹಾಡಿಗೆ ಗ್ರೀನ್ ಸಿಗ್ನಲ್ ನೀಡಿದ್ದ ಜಿಲ್ಲಾ ಕೋರ್ಟ್ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆಯಾಜ್ಞೆ