ಬೆಂಗಳೂರು: ಹಿಂದೆ ನಾವೇ ಬಿಜೆಪಿ ಸರ್ಕಾರದ ಬಗ್ಗೆ 40% ಭ್ರಷ್ಟಾಚಾರದ ಆರೋಪ ಮಾಡಿದ್ದು, ಈಗ ಯಾವುದೇ ಭ್ರಷ್ಟಾಚಾರದ ಆರೋಪಕ್ಕೆ ತುತ್ತಾಗಬೇಡಿ ಎಂದು ಕೈ ನಾಯಕ ರಾಹುಲ್ ಗಾಂಧಿ, ಕರ್ನಾಟಕದ ಕಾಂಗ್ರೆಸ್ ಮುಖಂಡರಿಗೆ ಕಿವಿಮಾತು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೈಕಮಾಂಡ್ ಸಭೆಯಲ್ಲಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಸಚಿವರು ಹಾಗೂ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ. ಈ ಸಭೆಯಲ್ಲಿ ಯಾರ್ಯಾರು ಏನೇನು ಮಾತನಾಡಿದರು ಎಂಬ ಎಕ್ಸಕ್ಲೂಸಿವ್ ಮಾಹಿತಿ ವಿಸ್ತಾರ ನ್ಯೂಸ್‌ಗೆ ದೊರೆತಿದ್ದು, ಅದು ಇಲ್ಲಿದೆ.
ಭ್ರಷ್ಟಾಚಾರ ಸಹಿಸಲ್ಲ: ರಾಹುಲ್ ಗಾಂಧಿ
ಕರ್ನಾಟಕ ಸರ್ಕಾರ ದೇಶದ ಇತರೆ ರಾಜ್ಯ ಸರ್ಕಾರಗಳಿಗೆ ಮಾದರಿಯಾಗಿದೆ. ಸರ್ಕಾರದಲ್ಲಿ ಭ್ರಷ್ಟಾಚಾರ ಇರದಂತೆ ನೋಡಿಕೊಳ್ಳಿ. ಯಾಕೆಂದರೆ ನಾವು ಬಿಜೆಪಿ ವಿರುದ್ಧ 40% ಕಮಿಷನ್ ಎಂದು ಆರೋಪಿಸಿ ಅಧಿಕಾರಕ್ಕೆ ಬಂದಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಬೇಕು. ಪಕ್ಷ ಸಂಘಟನೆಗೆ ಹೆಚ್ಚು ಸಮಯ ಕೊಡಿ. ಗ್ಯಾರೆಂಟಿಗಳನ್ನು ಜನರಿಗೆ ಮುಟ್ಟಿಸಿ ಬೃಹತ್ ಸಮಾವೇಶಗಳನ್ನು ಮಾಡಿ. ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಯಲಿ.
ಲೋಕಸಭೆ ಮುಖ್ಯ: ಮಲ್ಲಿಕಾರ್ಜುನ ಖರ್ಗೆ
ನಮಗೆ ಲೋಕಸಭಾ ಚುನಾವಣೆ ಮುಖ್ಯ. ರಾಜ್ಯದಲ್ಲಿ 2004ರಿಂದ ಈಚೆಗೆ ಬಿಜೆಪಿ ಜಾಸ್ತಿ ಸ್ಥಾನ ಗೆದ್ದಿದೆ. ಈ ಬಾರಿ ನಾವು ಕನಿಷ್ಠ 20 ಸ್ಥಾನ ಗೆಲ್ಲಬೇಕು. ಸರ್ಕಾರ ಜನಪರ ಕೆಲಸ ಹೆಚ್ಚು ಮಾಡಲಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಹೆಚ್ಚು ಸ್ಥಾನ ಗೆಲ್ಲೋದು ಕಷ್ಟವಲ್ಲ. ಸಣ್ಣಪುಟ್ಟ ವ್ಯತ್ಯಾಸಗಳಿಗೆ ತಲೆಕೆಡಿಸಿಕೊಳ್ಳುವುದು ಬಿಡಿ.
ಸರ್ಕಾರದಲ್ಲಿ ಭ್ರಷ್ಟಾಚಾರವಿಲ್ಲ: ಸಿದ್ದರಾಮಯ್ಯ
ಸರ್ಕಾರದಲ್ಲಿ ಆರ್ಥಿಕ ಸಮಸ್ಯೆ ಹೊರತಾಗಿಯೂ ನಾವು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಜನ ಖುಷಿಯಲ್ಲಿದ್ದಾರೆ, ಬಿಜೆಪಿಯವರು ದುಃಖದಲ್ಲಿದ್ದಾರೆ. ಮಾಧ್ಯಮಗಳು ವಿಪಕ್ಷಗಳ ಜತೆ ಇವೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತಗಳು ಕಾಂಗ್ರೆಸ್‌ಗೆ ಬಂದಿವೆ. ಲೋಕಸಭೆಯಲ್ಲಿ ನಾವು ಆ ಮತಗಳನ್ನು ಬಿಜೆಪಿಗೆ ಹೋಗದಂತೆ ತಡೆಯಬೇಕು. ಬಿಜೆಪಿ ಸೋಲು ಕಾಂಗ್ರೆಸ್‌ನಿಂದಲೇ ಶುರುವಾಗಿದೆ. ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲ. ಬಿಜೆಪಿಯವರು ಹಾಗೆ ಬಿಂಬಿಸುತ್ತಿದ್ದಾರೆ ಅಷ್ಟೇ. ಮುಂದಿನ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲಿಸಿಕೊಂಡು ಬರುತ್ತೇವೆ.
ಸಂಘಟನೆ ಚುರುಕಾಗಬೇಕು: ಡಿ.ಕೆ ಶಿವಕುಮಾರ್
ಸಮೀಕ್ಷೆ ಮಾಡಿಸಿದ್ದೇನೆ; ಸರ್ಕಾರದ ಬಗ್ಗೆ ಜನರು ಒಳ್ಳೆಯ ಮಾತನ್ನಾಡುತ್ತಿದ್ದಾರೆ. ಚುನಾವಣೆಯಲ್ಲಿ ಕನಿಷ್ಠ 18 ಸ್ಥಾನ ಗೆಲ್ಲುವುದಕ್ಕೆ ಸಮಸ್ಯೆ ಇಲ್ಲ. ಆದರೆ ಜಿಲ್ಲೆಗಳಲ್ಲಿ ಇನ್ನಷ್ಟು ಸಂಘಟನೆ ಚುರುಕಾಗಬೇಕು. ನಾವು ಈ ರೀತಿ ಇದ್ದರೆ ಆಗುವುದಿಲ್ಲ. ಗ್ಯಾರಂಟಿಗಳ ಜತೆಗೆ ಕೆಲಸವನ್ನೂ ಮಾಡಬೇಕು. ಪ್ರತಿಯೊಬ್ಬ ಸಚಿವರು ಸಹ ಜವಾಬ್ದಾರಿ ವಹಿಸಿಕೊಳ್ಳಬೇಕು. ದೇಶದಲ್ಲಿ ಕಾಂಗ್ರೆಸ್ ಸರ್ಕಾರ ತರುವುದು ನಮ್ಮ ಗುರಿಯಾಗಬೇಕು. ವಿಧಾನ ಸಭಾ ಚುನಾವಣೆ ನಡೆಸಿದಂತೆ ನಡೆಯಬೇಕು.
ಬಿಜೆಪಿಗೆ ಮೋದಿ ಮಾತ್ರ: ಜಗದೀಶ್ ಶೆಟ್ಟರ್
ಬಿಜೆಪಿಗೆ ಮೋದಿ ಬಿಟ್ಟರೆ ಬೇರೆ ವಿಚಾರಗಳು ಇಲ್ಲ. ಮೋದಿ ಬಂದು ಗೆಲ್ಲಿಸುತ್ತಾರೆ ಎಂದು ವಿಧಾನ ಸಭಾ ಚುನಾವಣೆ ಮಾಡಿದರು. ಲೋಕಸಭಾ ಚುನಾವಣೆಯಲ್ಲೂ ಅದೇ ಮಾಡುತ್ತಾರೆ. ಈ ಬಾರಿ ನಮ್ಮ ಸರ್ಕಾರ ಚುರುಕಾಗಿ ಗ್ಯಾರಂಟಿ ಜಾರಿ ಮಾಡಿದೆ. ರಾಜ್ಯದಲ್ಲಿ ಒಳ್ಳೆಯ ವಾತಾವರಣ ಇದೆ.
ಕಮಿಷನ್ ಸರ್ಕಾರ ಆಗಬಾರದು: ಬಿ.ಕೆ ಹರಿಪ್ರಸಾದ್
ನಾವು ಸಂಘಟನೆ ಚುರುಕುಗೊಳಿಸಬೇಕು. ವಿಧಾನ ಸಭೆ ಗೆದ್ದ ತಕ್ಷಣ ಲೋಕಸಭಾ ಚುನಾವಣೆ ಗೆದ್ದೆವು ಅನ್ನುವ ಭ್ರಮೆ ಬೇಡ. ಸಚಿವರು ಜಿಲ್ಲೆಯಲ್ಲಿ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ನಮ್ಮ ಅಭ್ಯರ್ಥಿ ಅನ್ನುವುದು ಬಿಟ್ಟು ಕಾಂಗ್ರೆಸ್ ಅಭ್ಯರ್ಥಿ ಎಂದು ಕೆಲಸ ಮಾಡಿದರೆ ಗೆಲುವು ಸಾಧ್ಯ. ಸರ್ಕಾರದಲ್ಲಿ ಭ್ರಷ್ಟಾಚಾರ ಆಗುತ್ತಿದೆ ಅನ್ನುವ ಆರೋಪಕ್ಕೆ ಉತ್ತರ ಕೊಡಬೇಕು. ನಮ್ಮದು ಕಮಿಷನ್ ಸರ್ಕಾರ ಆಗಬಾರದು. ಗ್ಯಾರಂಟಿಗಳ ಜತೆಗೆ ಒಳ್ಳೆಯ ಆಡಳಿತ ಕೊಡಬೇಕು.
ಇದನ್ನೂ ಓದಿ: Lok Sabha Election 2024 : ಸಿದ್ದರಾಮಯ್ಯ Right ಎಂದ ರಾಹುಲ್; 5 ಗ್ಯಾರಂಟಿಯಂತೆ ಲೋಕಸಭೆ ಸಮರಕ್ಕೆ ಕೈ ಪ್ಲ್ಯಾನ್!