ಸೋಷಿಯಲ್ ಮೀಡಿಯಾಗಳಲ್ಲಿ ದಿನನಿತ್ಯ ಅನೇಕಾನೇಕ ಜೋಕುಗಳು, ತಮಾಷೆ ವಿಷಯಗಳು, ವಿಚಿತ್ರ, ವಿಲಕ್ಷಣ ಎನ್ನಿಸುವ ಪೋಸ್ಟ್ಗಳು ಕಾಣಿಸುತ್ತಿರುತ್ತವೆ. ಅದರಲ್ಲೊಂದು ನೋಡಿ ಈ ಜಾಹೀರಾತು..!-ವ್ಯಕ್ತಿಯೊಬ್ಬ ‘ತನ್ನ ಮರಣ ಪ್ರಮಾಣ ಪತ್ರ ಕಳೆದುಹೋಗಿದೆ, ಹುಡುಕಿ ಕೊಡಿ’ ಎಂದು ಸುದ್ದಿಪತ್ರಿಕೆಯೊಂದರಲ್ಲಿ ಆ್ಯಡ್ (ಜಾಹೀರಾತು) ಕೊಟ್ಟಿದ್ದಾನೆ. ಅದರ ಫೋಟೋ ವೈರಲ್ ಆಗಿದ್ದು, ಬದುಕಿದ್ದ ವ್ಯಕ್ತಿಯ ಮರಣ ಪ್ರಮಾಣ ಪತ್ರವಾ? ಅದು ಕಳೆದು ಹೋಗಿದ್ದಕ್ಕೆ ಜಾಹೀರಾತು ಬೇರೆಯಾ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತಿನ ಫೋಟೋವನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಎಂಬುವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ಇಂಥದ್ದೆಲ್ಲ ನಮ್ಮ ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
‘ಒಬ್ಬ ವ್ಯಕ್ತಿ ಮೃತಪಟ್ಟಾಗ ಮಾತ್ರ ಆತನ ಮರಣ ಪ್ರಮಾಣ ಪತ್ರ ಸಿದ್ಧಗೊಳಿಸಲು ಸಾಧ್ಯ. ಆದರೆ ಈ ವ್ಯಕ್ತಿ ಅದ್ಯಾವ ಕಾರಣಕ್ಕೆ ಮುಂಚಿತವಾಗಿಯೇ ಡೆತ್ ಸರ್ಟಿಫಿಕೇಟ್ ತಯಾರಿಸಿ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ, ಅದೀಗ ಕಳೆದು ಹೋಗಿದೆಯಂತೆ. ಅಂದಹಾಗೇ ಜಾಹೀರಾತು ಕೊಟ್ಟವರು ಅಸ್ಸಾಂನ ರಂಜಿತ್ ಕುಮಾರ್ ಚಕ್ರವರ್ತಿ ಎಂಬುವರು. ಸೆಪ್ಟೆಂಬರ್ 7ರಂದು ಬೆಳಗ್ಗೆ 10 ಗಂಟೆ ಹೊತ್ತಿಗೆ ಅಸ್ಸಾಂನ ಲುಂಡಿಂಗ್ ಬಜಾರ್ನಲ್ಲಿ ನನ್ನ ಮರಣ ಪ್ರಮಾಣ ಪತ್ರ ಕಳೆದುಕೊಂಡಿದ್ದೇನೆ ಎಂದು ಸಾರಾಂಶ ಬರೆದಿರುವ ಅವರು, ತಮ್ಮ ವಿಳಾಸ ಕೊಟ್ಟಿದ್ದಾರೆ. ಆ ಸರ್ಟಿಫಿಕೇಟ್ನ ಸೀರಿಯಲ್ ನಂಬರ್ ಮತ್ತು ನೋಂದಣಿ ಸಂಖ್ಯೆಯನ್ನೂ ಕೊಟ್ಟಿದ್ದಾರೆ.
ಫೋಟೋ ನೋಡಿದ ಟ್ವಿಟರ್ ಬಳಕೆದಾರರು ಫನ್ನಿ ಕಮೆಂಟ್ಗಳನ್ನು ಬರೆಯುತ್ತಿದ್ದಾರೆ. ‘ಡೆತ್ ಸರ್ಟಿಫಿಕೇಟ್ ಸಿಕ್ಕರೆ ಅದನ್ನು ನರಕಕ್ಕೆ ಕಳಿಸಬೇಕೋ? ಸ್ವರ್ಗಕ್ಕೋ? ‘ಯಾರಿಗಾದರೂ ಸಿಕ್ಕರೆ ಬೇಗನೇ ಕೊಟ್ಟುಬಿಡಿ, ಇಲ್ಲ ಅಂದರೆ ಪಿಶಾಚಿ ಕೋಪ ಮಾಡಿಕೊಳ್ಳುತ್ತದೆ’, ವ್ಯಕ್ತಿಯೊಬ್ಬ ತನ್ನ ಡೆತ್ ಸರ್ಟಿಫಿಕೇಟ್ ಕಳೆದುಕೊಂಡಿದ್ದು ಇದೇ ಮೊದಲು ಎನ್ನಿಸುತ್ತದೆ’ ಎಂಬಿತ್ಯಾದಿ ಕಮೆಂಟ್ಗಳನ್ನು ಬರೆದಿದ್ದಾರೆ.
ಇದನ್ನೂ ಓದಿ: Viral news | ಹಾದಿ ಮಧ್ಯೆ ಹೆರಿಗೆ, ಉಪಯೋಗವಾಗಿದ್ದು ಫೋನ್ ಚಾರ್ಜರ್!