ತಿರುವನಂತಪುರಂ: ಈಗೊಂದು ವಾರದ ಹಿಂದೆ ಕೇರಳದಲ್ಲಿ ಆಟೋ ಚಾಲಕ ಅನೂಪ್ ಎಂಬುವರು 25 ಕೋಟಿ ರೂಪಾಯಿ ಮೊತ್ತದ ಲಾಟರಿ (kerala lottery results) ಗೆದ್ದಿದ್ದಾರೆ. ಓಣಂ ಬಂಪರ್ ಲಾಟರಿ ಇದಾಗಿದ್ದು, ಅನೂಪ್ ಖರೀದಿಸಿದ್ದ ಲಾಟರಿ ಟಿಕೆಟ್ ನಂಬರ್ 750605ಗೆ ಅಷ್ಟು ದೊಡ್ಡ ಮೊತ್ತದ ಹಣ ಒಲಿದಿತ್ತು. ಅನೂಪ್ ಖರೀದಿಸಿದ ಲಾಟರಿಗೆ 25 ಕೋಟಿ ರೂ. ಹಣ ಬಂದಿದ್ದರೂ ಟ್ಯಾಕ್ಸ್ ಎಲ್ಲ ಕಳೆದು ಅವರಿಗೆ 15.75 ಕೋಟಿ ರೂಪಾಯಿ ಬರುತ್ತದೆ. ಆದರೆ ಈ ಹಣ ಬಂದ ಮೇಲೆ ಅನೂಪ್ ಸಮಸ್ಯೆ ಒಂದೆರಡಲ್ಲ. ಹೀಗಾಗಿ ಖುಷಿಯ ಜತೆಜತೆಗೇ ಬೇಸರವೂ ಅವರಲ್ಲಿ ಮನೆಮಾಡಿದೆ.
ಅನೂಪ್ ಮೂಲತಃ ಶ್ರೀವರಾಹಂ ನಿವಾಸಿ. ಅವರ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಹೀಗಾಗಿ ತಾನು ದುಡಿಯುವ ಸಲುವಾಗಿ ಮಲೇಷಿಯಾಕ್ಕೆ ಹೋಗಬೇಕು ಎಂದು ಯೋಜನೆ ರೂಪಿಸಿದ್ದರು. ಆದರೆ ಅಷ್ಟರಲ್ಲಿ ಈ ಲಾಟರಿ ಎಂಬುದು ಬಹುದೊಡ್ಡ ವಿಕ್ಟರಿ ಕೊಟ್ಟಿತು. 25 ಕೋಟಿ ರೂಪಾಯಿ ಅವರಿಗೆ ಬಂತು. ಹೀಗಾಗಿ ಮಲೇಷಿಯಾಕ್ಕೆ ಹೋಗುವ ಅನಿವಾರ್ಯತೆಯೂ ತಪ್ಪಿದೆ. ‘ಅಬ್ಬಾ, ಇನ್ನೇನೂ ತೊಂದರೆಯಿಲ್ಲ, ಕೈತುಂಬ ಹಣ ಇದೆ’ ಎಂದು ಅವರು ಅಂದುಕೊಳ್ಳುತ್ತಿರುವಾಗಲೇ ಅವರ ಮನೆಯೀಗ ಜನರಿಂದ ತುಂಬಿ ಹೋಗಿದೆ. ಅನೂಪ್ ಬಳಿ ಹಣವಿದೆ ಎಂದು ತಿಳಿದ, ಆತನ ಆಪ್ತರು, ಬಂಧುಗಳೆಲ್ಲ ‘ತಮಗೂ ಆ ಕಷ್ಟವಿದೆ, ಈ ಸಮಸ್ಯೆಯಿದೆ, ಸಹಾಯ ಮಾಡು’ ಎನ್ನುತ್ತ, ಮನೆಗೇ ಬರುತ್ತಿದ್ದಾರಂತೆ. ಮನೆಯೆಂಬುದೀಗ ನೆರವು ಕೇಳುವವರಿಂದಲೇ ತುಂಬಿ ಹೋಗಿದೆಯಂತೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅನೂಪ್ ‘ನನ್ನ ಕೈಯಿಗೆ ಇನ್ನೂ ಹಣ ಸೇರಿಲ್ಲ. ಆದರೆ ಈಗಲೇ ಮನೆಯೆಂಬುದು ಜನರಿಂದ ತುಂಬಿ ತುಳುಕುತ್ತಿದೆ. ನಮ್ಮ ಮನೆಯಲ್ಲಿ ನಾವೇ ಸೆರೆಯಾಗಿದ್ದೇವೆ. ಹೊರಗೆಲ್ಲೂ ಹೋಗಲು ಆಗುತ್ತಿಲ್ಲ. ಮಾಸ್ಕ್ ಧರಿಸಿದರೂ ಗುರುತು ಹಿಡಿಯುತ್ತಿದ್ದಾರೆ. ಎಲ್ಲೇ ಹೋದರೂ ಜನ ಮುತ್ತಿಗೆ ಹಾಕುತ್ತಿದ್ದಾರೆ. ನಾವೀಗ ಬೇರೆ ಮನೆಗೆ ಹೋಗುವ ಬಗ್ಗೆ ಯೋಚಿಸುತ್ತಿದ್ದೇವೆ’ ಎಂದಿದ್ದಾರೆ.
ಇನ್ನೊಂದು ಸಮಸ್ಯೆ
ಇದರೊಂದಿಗೆ ಅನೂಪ್ಗೆ ಇನ್ನೊಂದು ಸಮಸ್ಯೆಯೂ ಅನೂಪ್ಗೆ ಕಾಡುತ್ತಿದೆ. ಈ ಬಗ್ಗೆಯೂ ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಹೇಳಿಕೊಂಡಿದ್ದರು. ‘ನನಗೆ ಬಂದ ಕೋಟ್ಯಂತರ ರೂಪಾಯಿ ಮೊತ್ತವನ್ನು ಹೇಗೆ ಬಳಸಿಕೊಳ್ಳಬೇಕು, ಏನು ಮಾಡಬೇಕು, ಎಂಬುದೇ ಅರ್ಥವಾಗುತ್ತಿಲ್ಲ. ತೆರಿಗೆ ಪಾವತಿ ಕುರಿತು ಲವಲೇಶ ಗೊತ್ತಿಲ್ಲ ’ ಎಂದು ಅಳಲು ತೋಡಿಕೊಂಡಿದ್ದರು. ಅವರ ಈ ಸಮಸ್ಯೆಗೆ ಕೇರಳ ರಾಜ್ಯ ಲಾಟರಿ ಇಲಾಖೆ ಪರಿಹಾರ ನೀಡಿದೆ. ಅವರಿಗಾಗಿ ಒಂದು ದಿನದ ಹಣಕಾಸು ನಿರ್ವಹಣೆ ತರಬೇತಿ ಆಯೋಜಿಸಿದೆ. ಗುಲಾಟಿ ಹಣಕಾಸು ಮತ್ತು ತೆರಿಗೆ ಸಂಸ್ಥೆ (GIFT)ಯ ಸಹಭಾಗಿತ್ವದಲ್ಲಿ ಅನೂಪ್ ಅವರಿಗೆ ಟ್ರೇನಿಂಗ್ ಕೊಡಲಾಗುವುದು ಎಂದು ಲಾಟರಿ ಇಲಾಖೆ ಹೇಳಿದೆ.
ಹಾಗೇ, ಇನ್ನು ಮುಂದೆ ಲಾಟರಿ ಗೆದ್ದವರಿಗಾಗಿಯೇ ವಿಶೇಷವಾಗಿ ಈ ತರಬೇತಿ ಆಯೋಜಿಸಲಾಗುವುದು ಎಂದೂ ತಿಳಿಸಿದೆ. ದೀರ್ಘಾವಧಿ ಹೂಡಿಕೆ, ಸುರಕ್ಷಿತ ಹೂಡಿಕೆ, ತೆರಿಗೆ ಪಾವತಿ ಸೇರಿ ಹಲವು ವಿಷಯಗಳ ಬಗ್ಗೆ ತರಬೇತಿ ನಡೆಯಲಿದೆ. ಕೇರಳದಲ್ಲಿ ಹಣಕಾಸು ನಿರ್ವಹಣೆ ತರಬೇತಿ ಬಗ್ಗೆ ಕಳೆದ ಬಜೆಟ್ನಲ್ಲಿ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಘೋಷಣೆ ಮಾಡಿದ್ದರು. ಅದನ್ನೀಗ ಅನೂಪ್ ಮೂಲಕ ಜಾರಿ ಮಾಡಲಾಗುತ್ತಿದೆ.
ಕೇರಳ ರಾಜ್ಯ ಸರ್ಕಾರ ಓಣಂ ಬಂಪರ್ ಲಾಟರಿಯ ಮೊದಲ ಬಹುಮಾನದ ಮೊತ್ತವನ್ನು ಈ ಬಾರಿ ಬರೋಬ್ಬರಿ ೨೫ ಕೋಟಿ ರೂ.ಗೆ ಏರಿಸಿದೆ. ಕಳೆದ ವರ್ಷ ಬಂಪರ್ ಬಹುಮಾನ ೧೨ ಕೋಟಿ ರೂಪಾಯಿ ಆಗಿತ್ತು. ಈ ಬಂಪರ್ ಲಾಟರಿಯ ಮೂಲಕ ೪೦ ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.
ಇದನ್ನೂ ಓದಿ: ಕೇರಳದಲ್ಲಿ ಓಣಂ ಲಾಟರಿಯ ಮೊದಲ ಬಹುಮಾನ ಮೊತ್ತ 25 ಕೋಟಿ ರೂ.ಗೆ ಏರಿಕೆ