ಲಖನೌ: ಇಲ್ಲಿನ ಹಜರತ್ಗಂಜ್ನಲ್ಲಿ ಮಂಗಳವಾರ ರಾತ್ರಿ ವಸತಿ ಕಟ್ಟಡವೊಂದು ಕುಸಿದುಬಿದ್ದು (Lucknow Building Collapse), ಸಮಾಜವಾದಿ ಪಕ್ಷ (Samajwadi Party)ದ ವಕ್ತಾರ ಅಬ್ಬಾಸ್ ಹೈದರ್ ಅವರ ತಾಯಿ ಬೇಗಂ ಹೈದರ್ ಸೇರಿ ಒಟ್ಟು ಮೂವರು ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಗುರುತು ಇನ್ನೂ ಗೊತ್ತಾಗಿಲ್ಲ. ಇವರೆಲ್ಲ ರಾತ್ರಿ ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿದ್ದರು. ಬೇಗಂ ಹೈದರ್ ಮತ್ತು ಉಳಿದಿಬ್ಬರನ್ನು ಇಂದು ಬೆಳಗ್ಗೆ ಅವಶೇಷಗಳಡಿಯಿಂದ ಹೊರತೆಗೆದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಮೂವರೂ ಮೃತಪಟ್ಟಿದ್ದಾರೆ. ಇದುವರೆಗೆ 15 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆಯಿದ್ದು, ಹುಡುಕಾಟ ನಡೆದಿದೆ.
12 ಫ್ಲಾಟ್ಗಳಿರುವ ನಾಲ್ಕು ಅಂತಸ್ತಿನ ಕಟ್ಟಡ ಇದಾಗಿತ್ತು, ಕುಸಿದು ಬೀಳಲು ಕಾರಣ ನಿಖರವಾಗಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಉತ್ತರ ಪ್ರದೇಶ ಡಿಜಿಪಿ ಡಿ.ಎಸ್.ಚೌಹಾಣ್ ತಿಳಿಸಿದ್ದಾರೆ. ಹಾಗೇ, ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ ಅವರು, ‘ಬಿದ್ದ ಕಟ್ಟಡದ ಅಡಿಯಲ್ಲಿ ಸಿಲುಕಿದ್ದವರನ್ನು ನಾವು ವೈಜ್ಞಾನಿಕ ಮಾದರಿಯಲ್ಲಿ ರಕ್ಷಣೆ ಮಾಡಿದ್ದೇವೆ. ಒಳಗಿದ್ದವರಿಗಾಗಿ ಆಮ್ಲಜನಕ ಪೂರೈಕೆಯನ್ನೂ ಮಾಡಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡ ಪರಿಣಾಮ ಬದುಕುಳಿಯಲಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Delhi Earthquake: ನೇಪಾಳದ ಗಡಿಯಲ್ಲಿ ಭೂಕಂಪ, ದಿಲ್ಲಿಯಲ್ಲಿ ನಡುಗಿದ ಭೂಮಿ
ಮತ್ತೊಬ್ಬ ಎಸ್ಪಿ ಮುಖಂಡನ ಪುತ್ರ ಅರೆಸ್ಟ್
ಇನ್ನು ಲಖನೌದ ಹಜರತ್ಗಂಜ್ನಲ್ಲಿದ್ದ ಈ ನಾಲ್ಕು ಅಂತಸ್ತಿನ ಕಟ್ಟಡ ಕುಸಿದ ಪ್ರಕರಣದಡಿ ಸಮಾಜವಾದಿ ಪಕ್ಷದ ಮುಖಂಡ, ಮಾಜಿ ಸಚಿವ ಶಾಹೀದ್ ಮನ್ಸೂರ್ ಅವರ ಪುತ್ರ ನವಾಜಿಶ್ ಶಾಹಿದ್ನನ್ನು ಮೀರತ್ ಪೊಲೀಸರು ಬಂಧಿಸಿದ್ದಾರೆ. ಈ ಕಟ್ಟಡ ಇದ್ದ ಜಾಗ ನವಾಜಿಶ್ ಶಾಹಿದ್ಗೆ ಸೇರಿದ್ದಾಗಿದ್ದು, ಆತನೇ ಮುಂದಾಗಿ ಈ ಅಪಾರ್ಟ್ಮೆಂಟ್ ಕಟ್ಟಿಸಿದ್ದ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ನವಾಜಿಶ್ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.