Site icon Vistara News

ಲುಧಿಯಾನಾ ಕೋರ್ಟ್​ ಸ್ಫೋಟದ ಮುಖ್ಯ ಆರೋಪಿ, ಮೋಸ್ಟ್​ ವಾಂಟೆಡ್​ ಉಗ್ರ ಹರ್​​ಪ್ರೀತ್​ ಸಿಂಗ್ ಅರೆಸ್ಟ್​

Ludhiana court blast Accused Harpreet Singh Arrested

ನವ ದೆಹಲಿ: 2021ರ ಡಿಸೆಂಬರ್​​ನಲ್ಲಿ ನಡೆದಿದ್ದ ಲುಧಿಯಾನಾ ಕೋರ್ಟ್​​ ಸ್ಫೋಟದ ಮುಖ್ಯ ಆರೋಪಿ, ಮೋಸ್ಟ್​ ವಾಂಟೆಡ್​ ಉಗ್ರ ಹರ್​​ಪ್ರೀತ್​ ಸಿಂಗ್​​ನನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದೆ. ಆತ ಮಲೇಷ್ಯಾದ ಕೌಲಾ ಲುಂಪುರ್​​ದಿಂದ ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ ಎಂದು ಎನ್​ಐಎ ವಕ್ತಾರ ಶುಕ್ರವಾರ ಬೆಳಗ್ಗೆ ಮಾಹಿತಿ ನೀಡಿದ್ದಾರೆ.

ಲುಧಿಯಾನಾ ಕೋರ್ಟ್ ಕಟ್ಟಡ​ ಸ್ಫೋಟದಲ್ಲಿ ಒಬ್ಬರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದರು. ಈ ಬ್ಲಾಸ್ಟ್​ ಉಗ್ರಕೃತ್ಯವಾಗಿದ್ದು, ಎನ್​ಐಎ ತನಿಖೆ ಕೈಗೆತ್ತಿಕೊಂಡಿತ್ತು. ಲುಧಿಯಾನಾ ಬ್ಲಾಸ್ಟ್​​ನ ಮುಖ್ಯ ರೂವಾರಿ ಹರ್​ಪ್ರೀತ್​ ಸಿಂಗ್​ ಎಂದು ಹೇಳಲಾಗಿದ್ದು, ಈತನ ತಲೆಗೆ 10 ಲಕ್ಷ ರೂಪಾಯಿ ಬಹುಮಾನವನ್ನೂ ಕಟ್ಟಲಾಗಿತ್ತು.

ಲುಧಿಯಾನಾ ಕೋರ್ಟ್​​ ಸ್ಫೋಟದ ಪ್ರಕರಣವನ್ನು ಮೊದಲು 2021ರ ಡಿಸೆಂಬರ್​ 23ರಂದು ಪಂಜಾಬ್​ ಪೊಲೀಸರು ದಾಖಲಿಸಿಕೊಂಡು, ತನಿಖೆ ಪ್ರಾರಂಭ ಮಾಡಿದರು. ಬಳಿಕ 2022ರ ಜನವರಿ 1ರಂದು ಎನ್​ಐಎ ಈ ಕೇಸ್​​ನ್ನು ಮರು ನೋಂದಣಿ ಮಾಡಿಸಿಕೊಂಡು ತನಿಖೆ ಪ್ರಾರಂಭ ಮಾಡಿತ್ತು. ಅಂತಾರಾಷ್ಟ್ರೀಯ ಸಿಖ್​ ಫೆಡರೇಶನ್​​ನ ಸ್ವಯಂ ಘೋಷಿತ ಪಾಕಿಸ್ತಾನದ ಮುಖ್ಯಸ್ಥ ಲಕ್ಬರ್​ ಸಿಂಗ್​ ರೋಡೆ ಈ ಸ್ಫೋಟದ ಮುಖ್ಯ ಸಂಚುಕೋರನಾಗಿದ್ದು, ಹರ್​ಪ್ರೀತ್​ಸಿಂಗ್​ ಆತನೊಂದಿಗೆ ಸೇರಿ ಪಿತೂರಿ ಮಾಡಿದ್ದು ತನಿಖೆ ವೇಳೆ ಸಾಬೀತಾಗಿತ್ತು. ಲಕ್ಬರ್​ಗೆ ಈ ಹರ್​ಪ್ರೀತ್​ ಸಹವರ್ತಿಯಾಗಿದ್ದ ಎಂಬುದೂ ಗೊತ್ತಾಗಿತ್ತು.

ಹರ್​ಪ್ರೀತ್​ ವಿರುದ್ಧ ಕೇವಲ ಲುಧಿಯಾನಾ ಕೋರ್ಟ್ ಬ್ಲಾಸ್ಟ್​ ಕೇಸ್​ ಮಾತ್ರವಲ್ಲದೆ, ಮಾರಕ ಅಸ್ತ್ರಗಳು, ಶಸ್ತ್ರಾಸ್ತ್ರಗಳು, ಮಾದಕ ವಸ್ತುಗಳ ಸಾಗಣೆಯ ಆರೋಪವೂ ಇದೆ. ಎನ್​ಐಎ ಈತ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಲುಕ್​ಔಟ್​ ಸುತ್ತೋಲೆಯನ್ನೂ ಹೊರಡಿಸಿತ್ತು. ಹರ್​ಪ್ರೀತ್​ ಮಲೇಷ್ಯಾಕ್ಕೆ ಹೋಗಿ ನೆಲೆಸಿದ್ದ.

ಇದನ್ನೂ ಓದಿ: Explainer: ಹಿಮಾಚಲದಲ್ಲಿ ಖಲಿಸ್ತಾನ್‌ ಹೆಜ್ಜೆ: ಏನಿದರ ಹಕೀಕತ್?‌

Exit mobile version