Site icon Vistara News

ನನ್ನೆದುರು ಒಂದು ಮುಖ, ಮಾಧ್ಯಮದವರ ಎದುರು ಇನ್ನೊಂದು ಮುಖ: ಶಶಿ ತರೂರ್​ ವಿರುದ್ಧ ಮಿಸ್ತ್ರಿ ಕೆಂಡಾಮಂಡಲ

Shashi Taroor

ನವ ದೆಹಲಿ: ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಶಶಿ ತರೂರು ಪಾಳೆಯ ಆರೋಪ ಮಾಡಿತ್ತು. ಮಲ್ಲಿಕಾರ್ಜುನ ಖರ್ಗೆ ಗೆಲ್ಲುತ್ತಿದ್ದಂತೆ ಇತ್ತ ಶಶಿ ತರೂರ್​ ಬಣದವರು ಚುನಾವಣೆಯ ಪಾರದರ್ಶಕತೆ ಬಗ್ಗೆಯೇ ಪ್ರಶ್ನೆ ಮಾಡಿದ್ದರು. ಅಷ್ಟೇ ಅಲ್ಲ, ಕಾಂಗ್ರೆಸ್​ ಚುನಾವಣೆಯಲ್ಲಿ ಗಂಭೀರ ಸ್ವರೂಪದ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್​ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂಧನ್​ ಮಿಸ್ತ್ರಿಯವರಿಗೆ ದೂರು ನೀಡಿದ್ದರು. ಇನ್ನು ಶಶಿ ತರೂರ್​ ಟೀಂನಲ್ಲಿದ್ದವರೆಲ್ಲ ಸೇರಿ ದೂರು ನೀಡಿದ ಪತ್ರ ಸೋರಿಕೆಯಾಗುತ್ತಿದ್ದಂತೆ, ಶಶಿ ತರೂರ್​ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ‘ಇದನ್ನೆಲ್ಲ ಇಲ್ಲಿಗೇ ಮುಗಿಸಿ, ಮುಂದೆ ಹೆಜ್ಜೆ ಹಾಕೋಣ’ ಎಂದು ಹೇಳಿದ್ದರು. ಆದರೂ ಕಾಂಗ್ರೆಸ್​ ಪಕ್ಷ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ಶಶಿ ತರೂರ್​ ತಂಡ ಮಾಡಿದ ಆರೋಪಕ್ಕೆ ಕಟು ಪ್ರತಿಕ್ರಿಯೆ ನೀಡಿದ್ದು, ಇನ್ಯಾರೂ ಅಲ್ಲ, ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂಧನ ಮಿಸ್ತ್ರಿ. ‘ನೀವೆಲ್ಲ ನನ್ನೆದುರು ಒಂದು ಹೇಳುತ್ತೀರಿ, ಮಾಧ್ಯಮದ ಎದುರು ಹೋಗಿ ಮತ್ತೊಂದು ತರಹ ಮಾತನಾಡುತ್ತೀರಿ. ಚುನಾವಣೆ ಪ್ರಕ್ರಿಯೆಗಳ ಬಗ್ಗೆ ನಾವು ನೀಡಿದ ಉತ್ತರದಿಂದ ತೃಪ್ತಿಯಾಗಿದೆ ಎಂದು ನನ್ನೆದುರೇ ಹೇಳಿ ಹೋದ ಶಶಿ ತರೂರ್​ ಮತ್ತು ಅವರ ಟೀಮ್​​ನವರು, ಮಾಧ್ಯಮಗಳ ಮುಂದೆ ಹೋಗಿ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದಿದ್ದಾರೆ. ನಮ್ಮ ವಿರುದ್ಧವೇ ಆರೋಪ ಮಾಡಿದ್ದಾರೆ’ ಎಂದು ಮಿಸ್ತ್ರಿ ಆಕ್ರೋಶ ವ್ಯಕ್ತಪಡಿಸಿ, ಶಶಿ ತರೂರ್​ ಟೀಮ್​​ಗೆ ಪತ್ರ ಬರೆದಿದ್ದಾರೆ.

‘ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ಪರಿಶೀಲನೆ ಆಗಬೇಕು ಎಂಬ ನಿಮ್ಮ ಮನವಿಯನ್ನು ನಾವು ಪರಿಗಣಿಸಿದೆವು. ಅದರ ಹೊರತಾಗಿಯೂ ಮಾಧ್ಯಮದ ಎದುರು ಹೋಗಿ ಇದೇ ವಿಷಯ ಮಾತನಾಡಿದ್ದೀರಿ. ಕಾಂಗ್ರೆಸ್​ ಕೇಂದ್ರ ಚುನಾವಣಾ ಪ್ರಾಧಿಕಾರ ನಮ್ಮ ವಿರುದ್ಧ ಪಿತೂರಿ ಮಾಡಿತು ಎಂದಿದ್ದೀರಿ’ ಎಂದೂ ಮಧುಸೂಧನ ಮಿಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Kharge Congress President | ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಗೆಲುವು

Exit mobile version