ಭೋಪಾಲ್: ಮಧ್ಯಪ್ರದೇಶದಲ್ಲಿ ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡುವ ಮೂಲಕ ವಿಕೃತಿ ಮೆರೆದಿದ್ದ, ಬಿಜೆಪಿ ಶಾಸಕ ಕೇದಾರ್ ಶುಕ್ಲಾ ಅವರ ಪ್ರತಿನಿಧಿ ಎಂದು ಹೇಳಲಾದ ಪ್ರವೇಶ್ ಶುಕ್ಲಾನನ್ನು ಪೊಲೀಸರು ರಾತ್ರೋರಾತ್ರಿ ಬಂಧಿಸಿದ್ದಾರೆ. ಸಿಗರೇಟ್ ಸೇದುತ್ತ, ಆದಿವಾಸಿ ವ್ಯಕ್ತಿ ಮೇಲೆ ಪ್ರವೇಶ್ ಶುಕ್ಲಾ ಮೂತ್ರ ವಿಸರ್ಜನೆ ಮಾಡಿದ ವಿಡಿಯೊ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದಾದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.
ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆಯನ್ನು ಖಂಡಿಸಿದ್ದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು, ಆರೋಪಿಯ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರು. ಈ ಘಟನೆಯ 10 ದಿನಗಳ ಹಿಂದೆ ಸಿಧಿ ಜಿಲ್ಲೆಯ ಕುಬ್ರಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಂತೂ ಹೆಚ್ಚಿನ ಆಕ್ರೋಶ ವ್ಯಕ್ತವಾಗಿತ್ತು. ಎನ್‌ಎಸ್‌ಎ ಪ್ರಕರಣ ದಾಖಲಾದ ಬಳಿಕ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಶಾಸಕನ ಪ್ರತಿನಿಧಿ ಹೌದು ಎಂದ ಪ್ರವೇಶ್ ಶುಕ್ಲಾ ತಂದೆ
ಆದಿವಾಸಿ ಕಾರ್ಮಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರವೇಶ್ ಶುಕ್ಲಾ ಬಿಜೆಪಿ ಮುಖಂಡ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಹಾಗೆಯೇ, ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ, ಪ್ರವೇಶ್ ಶುಕ್ಲಾ ತಂದೆ ರಮಾಕಾಂತ್ ಶುಕ್ಲಾ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಪ್ರವೇಶ್ ಶುಕ್ಲಾ ಬಿಜೆಪಿ ಶಾಸಕ ಕೇದಾರ್ ಶುಕ್ಲಾ ಅವರ ಪ್ರತಿನಿಧಿ ಎಂದು ತಿಳಿಸಿದ್ದಾರೆ. “ನನ್ನ ಮಗ ಶಾಸಕ ಕೇದಾರ್ ಶುಕ್ಲಾ ಅವರ ಪ್ರತಿನಿಧಿಯಾಗಿದ್ದಾನೆ. ಹಾಗಾಗಿಯೇ, ಆತನ ವಿರುದ್ಧ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಪ್ರಕರಣದಲ್ಲಿ ನ್ಯಾಯ ಗೆಲ್ಲಲಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ಆದಿವಾಸಿ ಮೇಲೆ ಮೂತ್ರ ವಿಸರ್ಜನೆ! ಆರೋಪಿ ಬಿಜೆಪಿಯವ? ತನಿಖೆಗೆ ಆದೇಶಿಸಿದ ಮಧ್ಯ ಪ್ರದೇಶ ಸಿಎಂ
ಆ ವ್ಯಕ್ತಿ ನನ್ನ ಕ್ಷೇತ್ರ ಮತದಾರ. ಅವರ ಬಗ್ಗೆ ಗೊತ್ತಿದೆ. ಆದರೆ, ಆರೋಪಿ ನನ್ನ ಪ್ರತಿನಿಧಿ ಅಥವಾ ಬಿಜೆಪಿ ಕಾರ್ಯಕರ್ತನಲ್ಲ ಎಂದು ಕೇದಾರನಾಥ್ ಶುಕ್ಲಾ ಹೇಳಿದ್ದರು.. ಆದರೆ, ಪ್ರವೇಶ್ ಅವರು ಕೇದಾರನಾಥ್ ಶುಕ್ಲಾ ಅವರ ಪ್ರತಿನಿಧಿ ಎಂದು ಹೇಳಿಕೊಳ್ಳುವ ಪೋಸ್ಟರ್ ಕೂಡ ವೈರಲ್ ಆಗಿದೆ! ಪ್ರಕರಣದ ಕುರಿತು ಆಕ್ರೋಶ ವ್ಯಕ್ತವಾಗುತ್ತಲೇ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ತನಿಖೆಗೆ ಆದೇಶಿಸಿದ್ದರು. “ಸಿಧಿ ಜಿಲ್ಲೆಯ ವೈರಲ್ ವೀಡಿಯೊ ನನ್ನ ಗಮನಕ್ಕೆ ಬಂದಿದೆ. ಅಪರಾಧಿಯನ್ನು ಬಂಧಿಸಲು ಮತ್ತು ಸಾಧ್ಯವಾದಷ್ಟು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಡಳಿತಕ್ಕೆ ಸೂಚನೆ ನೀಡಿದ್ದೇನೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದೇನೆ” ಎಂದು ಮುಖ್ಯಮಂತ್ರಿ ಚೌಹಾಣ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.