ಗ್ವಾಲಿಯರ್: ಗುಂಡಿ ಬಿದ್ದ ರಸ್ತೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವುದು, ರಸ್ತೆ ಗುಂಡಿಯನ್ನು ಮುಚ್ಚಿಸಲು ಆಗ್ರಹಿಸಿ ವಿವಿಧ ಮಾದರಿ ಪ್ರತಿಭಟನೆ ನಡೆಸುವುದು ಸಾಮಾನ್ಯ. ರಸ್ತೆ ಅದೆಷ್ಟೇ ಹಾಳಾದರೂ ರಾಜಕಾರಣಿಗಳು ಮಾತನಾಡುವುದಿಲ್ಲ. ಎಷ್ಟೆಷ್ಟೋ ವರ್ಷಗಳೇ ಕಳೆದರೂ ರಸ್ತೆಗಳು ಸರಿ ಹೋಗುವುದಿಲ್ಲ. ಗುಂಡಿಗಳು ಮುಚ್ಚುವುದಿಲ್ಲ. ಹಾಗಿದ್ದಾಗ್ಯೂ ಆಯಾ ಕ್ಷೇತ್ರಗಳ ಶಾಸಕರು, ಸಂಸದರಂತೂ ತಮಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಇರುತ್ತಾರೆ. ಅಂಥದ್ದರಲ್ಲಿ ಇಲ್ಲೊಬ್ಬರು ಸಚಿವರು ವಿಭಿನ್ನ ನಡೆ ಇಟ್ಟಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಅಲ್ಲಿನ ಇಂಧನ ಸಚಿವರಾಗಿರುವ ಪ್ರದ್ಯುಮ್ನ ಸಿಂಗ್ ತೋಮಾರ್ ಅವರು ‘ನನ್ನ ಕ್ಷೇತ್ರದಲ್ಲಿ ಹಾಳಾದ ರಸ್ತೆಗಳೆಲ್ಲ ದುರಸ್ತಿ ಆಗುವವರೆಗೂ ನಾನು ಚಪ್ಪಲಿಯನ್ನಾಗಲಿ, ಶೂ ಆಗಲೀ ಧರಿಸುವುದಿಲ್ಲ, ಗುಂಡಿಬಿದ್ದ, ಹಾಳಾದ ಬರಿಗಾಲಲ್ಲೇ ನಡೆಯುತ್ತೇನೆ’ ಎಂದು ಹೇಳಿದ್ದಾರೆ.
ಪ್ರದ್ಯುಮ್ನ ಸಿಂಗ್ ತೋಮಾರ್ ಅವರು ಗುರುವಾಗ ತಮ್ಮ ಲೋಕಸಭಾ ಕ್ಷೇತ್ರ ಗ್ವಾಲಿಯರ್ಗೆ ಆಕಸ್ಮಿಕವಾಗಿ ಭೇಟಿ ಕೊಟ್ಟಿದ್ದರು. ಅಲ್ಲಿ ಹಲವು ಕಡೆಗಳಲ್ಲಿ ರಸ್ತೆಗಳೆಲ್ಲ ಹಾಳಾಗಿವೆ. ಗುಂಡಿಗಳು ಬಿದ್ದು, ನಡೆದಾಡಲು ಸಾಧ್ಯವಿಲ್ಲದಂಥ ರಸ್ತೆಗಳೂ ಇವೆ. ಸಚಿವ ಪ್ರದ್ಯುಮ್ನ ಸಿಂಗ್ ತೋಮಾರ್ ಅವರು ಗುರುವಾರ ಇಲ್ಲಿಗೆ ಭೇಟಿ ಕೊಟ್ಟಾಗ ಅಲ್ಲಿನ ಜನ ತಮ್ಮ ನೋವು, ತಮಗೆ ಆಗುತ್ತಿರುವ ತೊಂದರೆಗಳನ್ನೆಲ್ಲ ಸಚಿವರ ಬಳಿ ಹೇಳಿಕೊಂಡಿದ್ದಾರೆ. ರಸ್ತೆಗಳು ಗುಂಡಿಯಾಗಿ ಅನೇಕ ದಿನಗಳೇ ಕಳೆದು ಹೋದವು. ನಾವು ಇಲ್ಲಿಗೆ ಬಂದ ರಾಜಕಾರಣಿಗಳು, ಅಧಿಕಾರಿಗಳ ಬಳಿಯೆಲ್ಲ ಮನವಿ ಮಾಡಿದ್ದೇವೆ. ವಾಹನ ಓಡಿಸುವುದು ಕಷ್ಟವಾಗುತ್ತಿದೆ. ನಡೆದಾಡಲೂ ಆಗುತ್ತಿಲ್ಲ. ಮಳೆ ಬಂದರೆ ಸಾಕು ಸಂಚಾರ ಇನ್ನಷ್ಟು ದುಸ್ತರವಾಗುತ್ತದೆ ಎಂದೆಲ್ಲ ಹೇಳಿಕೊಂಡಿದ್ದಾರೆ.
ಜನರ ಸಂಕಷ್ಟ ಕೇಳುತ್ತಿದ್ದಂತೆ ಸಚಿವರು ತಾವು ಧರಿಸಿದ ಚಪ್ಪಲಿ ಬಿಚ್ಚಿದ್ದಾರೆ. ಬಳಿಕ ಮಾಧ್ಯಮಗಳ ಜತೆ ಮಾತನಾಡಿ ‘ನಾನು ಈ ರಸ್ತೆಗಳೆಲ್ಲ ಸರಿಯಾಗುವವರೆಗೂ ನಾನು ಚಪ್ಪಲಿಯನ್ನಾಗಲೀ, ಶೂ ಆಗಲೀ ಧರಿಸುವುದಿಲ್ಲ. ಆಗಲೇ ನನಗೂ ಜನರ ನೋವು ಅರ್ಥವಾಗುತ್ತದೆ. ಇಲ್ಲಿ ರಸ್ತೆ ದುರಸ್ತಿ ಕಾಮಗಾರಿ ನಡೆಯುವ ಬಗ್ಗೆ ಪ್ರತಿದಿನ ಮಾಹಿತಿ ಪಡೆಯುತ್ತೇನೆ. ಗಮನ ಹರಿಸುತ್ತೇನೆ. ಆದರೆ ಬರಿಗಾಲಿನಲ್ಲಿಯೇ ರಸ್ತೆಯ ಮೇಲೆ ನಡೆಯುತ್ತೇನೆ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ‘ಈ ರಸ್ತೆಗಳ ರಿಪೇರಿ ಕಾರ್ಯವನ್ನು ಶೀಘ್ರವೇ ಪ್ರಾರಂಭಿಸಲು ನಾನು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಾಗೊಮ್ಮೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಚಪ್ಪಲಿ ತೆಗೆದ ಮಧ್ಯಪ್ರದೇಶ ಸಚಿವ
ಇದನ್ನೂ ಓದಿ: Bus Accident | ಮಧ್ಯಪ್ರದೇಶದಲ್ಲಿ ಬಸ್ ಪಲ್ಟಿ; 14 ಪ್ರಯಾಣಿಕರು ಸಾವು, 40 ಮಂದಿಗೆ ಗಾಯ