ಅಂಗನವಾಡಿ ಕಾರ್ಯಕರ್ತೆಯರ ವೇತನ ನೀಡುವಲ್ಲಿ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿದ ಯುವಕನಿಗೆ ಮಧ್ಯಪ್ರದೇಶದ ಅರಣ್ಯ ಇಲಾಖೆ ಸಚಿವ ವಿಜಯ್ ಶಾ ಅವರು ಬಾಯಿಗೆ ಬಂದಂತೆ ಬೈದಿದ್ದಾರೆ. ‘ಪೊಲೀಸರು ನಿನ್ನನ್ನು ಲಾಕಪ್ನಲ್ಲಿ ಕೂಡಿ ಹಾಕಿ, ಸೊಂಟ ಮುರಿಯುತ್ತಾರೆ ನೋಡು’ ಎಂದು ಬೆದರಿಸಿದ್ದಾರೆ.
ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಬಿಜೆಪಿ ವಿಕಾಸ ಯಾತ್ರೆ ಅಂಗವಾಗಿ ಸಾರ್ವಜನಿಕ ಸಭೆ ನಡೆದಿತ್ತು. ಆಗ ಯುವಕನೊಬ್ಬ ಸಚಿವರ ಬಳಿ ಎಲ್ಲರ ಎದುರು ‘ನನ್ನ ಪತ್ನಿಯೂ ಅಂಗನವಾಡಿ ಕಾರ್ಯಕರ್ತೆ. ಅವರಿಗೆ ಸಂಬಳ ನೀಡುವಲ್ಲಿ ತುಂಬ ವಿಳಂಬವಾಗುತ್ತಿದೆ, ಯಾಕೆ?’ ಎಂದು ಪ್ರಶ್ನಿಸಿದ. ಅಷ್ಟಕ್ಕೇ ಸಿಟ್ಟಾದ ಸಚಿವರು ‘ನಾವು ಜನರ ಕಲ್ಯಾಣಕ್ಕಾಗಿಯೇ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿಯೇ ನಮ್ಮ ಜೀವನ ಮೀಸಲಿಟ್ಟಿದ್ದೇವೆ. ನಮ್ಮ ವಿಕಾಸ ಯಾತ್ರೆಯನ್ನು ಹಾಳು ಮಾಡಬೇಕು ಎಂದೇ ಕೆಲವರು ಇನ್ನಿಲ್ಲದ ಅವ್ಯವಸ್ಥೆ ಸೃಷ್ಟಿಸುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅವರನ್ನು ಪೊಲೀಸರು ಜೈಲಿಗೆ ಹಾಕಿ ಸೊಂಟ ಮುರಿಯಲಿದ್ದಾರೆ’ ಎಂದು ಹೇಳಿದರು. ಹಾಗೇ, ಯುವಕನಿಗೆ ನಿನಗೂ ಹಾಗೇ ಮಾಡಿಸುತ್ತೇವೆ ನೋಡು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕ ಸಭೆ ಮಧ್ಯೆಯೇ ಕುರ್ತಾ ಬಿಚ್ಚಿ, ಬಾಟಲಿ ನೀರಿನಿಂದ ಮೈ ತೊಳೆದುಕೊಂಡ ಬಿಜೆಪಿ ಸಚಿವ; ತುರಿಕೆಯೇ ಕಾರಣ!
ಆ ಯುವಕ ಮತ್ತೆ ಮತ್ತೆ ಇದೇ ಪ್ರಶ್ನೆಯನ್ನು ಕೇಳಿದ್ದಕ್ಕೆ ಕಿರಿಕಿರಿಗೊಂಡ ಸಚಿವರು, ‘ಈತ ಕುಡಿದು ಬಂದಿದ್ದಾನೆ. ನಮ್ಮ ವಿಕಾಸ ಯಾತ್ರೆಯಲ್ಲಿ ಗೊಂದಲ ಸೃಷ್ಟಿಸುವ ಸಲುವಾಗಿ ಕಾಂಗ್ರೆಸ್ನವರೇ ಈತನನ್ನು ಕಳಿಸಿದ್ದಾರೆ’ ಎಂದಿದ್ದಾರೆ.