Site icon Vistara News

ನ.6ಕ್ಕೆ ಆರ್​ಎಸ್​ಎಸ್​ ಪಥ ಸಂಚಲನಕ್ಕೆ ಅನುಮತಿ ನೀಡಿ; ತಮಿಳುನಾಡು ಪೊಲೀಸ್​​ಗೆ ಮದ್ರಾಸ್​ ಹೈಕೋರ್ಟ್​ ಸೂಚನೆ

RSS Rally

ಚೆನ್ನೈ: ಆರ್​ಎಸ್​ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಕಾರ್ಯಕರ್ತರು ನವೆಂಬರ್​ 6ರಂದು ತಮಿಳುನಾಡಿನ 49 ಸ್ಥಳಗಳಲ್ಲಿ ಪಥ ಸಂಚಲನ ನಡೆಸಲು ರಾಜ್ಯದ ಪೊಲೀಸರು ಅನುಮತಿ ನೀಡಬೇಕು ಎಂದು ಮದ್ರಾಸ್​ ಹೈಕೋರ್ಟ್​ ಸೂಚನೆ ನೀಡಿದೆ. ಅಷ್ಟೇ ಅಲ್ಲ, ಈ ಆದೇಶ ಪಾಲನೆ ಮಾಡದೆ ಇದ್ದರೆ, ಪೊಲೀಸರು, ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮದ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದೆ.

ಆರ್​ಎಸ್​ಎಸ್​​ನವರು ಅಕ್ಟೋಬರ್​ 2ರಂದು ತಮಿಳುನಾಡಿನಲ್ಲಿ ಱಲಿ ನಡೆಸಲು ನಿರ್ಧಾರ ಮಾಡಿದ್ದರು. ಆದರೆ ರಾಜ್ಯ ಸರ್ಕಾರ ಈ ಆರ್​ಎಸ್​ಎಸ್​ ಮೆರವಣಿಗೆಗೆ ಅನುಮತಿ ನೀಡಿರಲಿಲ್ಲ. ಇದರ ವಿರುದ್ಧ ಆರ್​ಎಸ್​ಎಸ್ ಕೋರ್ಟ್​ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಜಿ ಕೆ ಇಳಂತಿರಾಯನ್ ಅವರಿದ್ದ ಏಕಸದಸ್ಯ ಪೀಠ ಕೆಲವು ಷರತ್ತುಗಳನ್ನು ವಿಧಿಸಿ, ಆರ್​ಎಸ್​ಎಸ್​ ಮೆರವಣಿಗೆ ನಡೆಸಲು ಅನುಮತಿ ಕೊಟ್ಟಿತ್ತು. ಆದರೆ ತಮಿಳುನಾಡು ರಾಜ್ಯ ಸರ್ಕಾರ, ಅಕ್ಟೋಬರ್​ 2ರಂದು ಗಾಂಧಿ ಜಯಂತಿ ಇದೆ. ಸಹಜವಾಗಿಯೇ ಹೆಚ್ಚಿನ ಭದ್ರತಾ ಕ್ರಮ ವಹಿಸಬೇಕಾಗುತ್ತದೆ. ಅದರ ಮಧ್ಯೆ ಆರ್​ಎಸ್​ಎಸ್​ ಕಾರ್ಯಕರ್ತರೂ ಱಲಿ ಆಯೋಜಿಸಿದರೆ ತೊಂದರೆಯಾಗುತ್ತದೆ. ಹೀಗಾಗಿ ಅನುಮತಿ ನೀಡುವುದಿಲ್ಲ ಎಂದು ಹೇಳಿತ್ತು. ಅಷ್ಟೇ ಅಲ್ಲ, ಸೆ.22 ಪಿಎಫ್​ಐ ಸಂಘಟನೆ ಮುಖಂಡರು, ಸದಸ್ಯರ ಮನೆ, ಕಚೇರಿ ಮೇಲೆ ಎನ್​ಐಎ-ಇಡಿ ದಾಳಿಯಾದ ಬೆನ್ನಲ್ಲೇ ತಮಿಳುನಾಡಿನಲ್ಲಿ ಹಿಂಸಾಚಾರಯುಕ್ತ ಪ್ರತಿಭಟನೆಗಳು ನಡೆದಿವೆ. ಹೀಗಾಗಿ ಭದ್ರತೆ ದೃಷ್ಟಿಯಿಂದ ಆರ್​ಎಸ್​ಎಸ್​ ಕಾರ್ಯಕ್ರಮಕ್ಕೆ ಅನುಮತಿಸುವುದಿಲ್ಲ ಎಂದು ತಮಿಳುನಾಡು ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.

ಮದ್ರಾಸ್​ ಹೈಕೋರ್ಟ್​ ಹೇಳಿದರೂ ರಾಜ್ಯ ಸರ್ಕಾರ ಅನುಮತಿ ಕೊಟ್ಟಿಲ್ಲ ಎಂದು ಆರ್​ಎಸ್​ಎಸ್​​ನ ತಿರುವಳ್ಳೂರು ಘಟಕದ ಜಂಟಿ ಕಾರ್ಯದರ್ಶಿ ಆರ್​.ಕಾರ್ತೀಕೇಯನ್​ ತಮಿಳುನಾಡು ಸರ್ಕಾರ, ಪೊಲೀಸ್​ ಇಲಾಖೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಆ ಅರ್ಜಿಯನ್ನು ಇನ್ನೂ ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ. ನವೆಂಬರ್​ 6ರಂದು ಆರ್​ಎಸ್​ಎಸ್​ ಱಲಿ ನಡೆಸಲು ರಾಜ್ಯ ಸರ್ಕಾರ ಅನುಮತಿ ಕೊಡದೆ ಇದ್ದರೆ, ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಪ್ರಾರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಹಾಗೇ, ‘ನೀವು ಆರ್​​ಎಸ್​​ಎಸ್​ನವರಿಗೆ ಅನುಮತಿ ಕೊಟ್ಟಿದ್ದನ್ನು ಹೈಕೋರ್ಟ್​ಗೆ ಲಿಖಿತ ರೂಪದಲ್ಲಿ ಅಕ್ಟೋಬರ್​ 31ರೊಳಗೆ ತಿಳಿಸಬೇಕು’ ಎಂದೂ ಹೈಕೋರ್ಟ್ ಪೀಠ ಸೂಚನೆ ನೀಡಿದೆ.

ಇದನ್ನೂ ಓದಿ: ಮಾಂಸಾಹಾರ ಸೇವನೆ ಮಾಡುವವರಿಗೆ ಸಲಹೆಯೊಂದನ್ನು ಕೊಟ್ಟ ಆರ್​ಎಸ್​​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​

Exit mobile version