ಕೇರಳದ ಸುಮಾರು 32 ಸಾವಿರ ಹಿಂದು-ಕ್ರಿಶ್ಚಿಯನ್ ಹುಡುಗಿಯರನ್ನು ಉದ್ಯೋಗದ ಆಮಿಷವೊಡ್ಡಿ ಸಿರಿಯಾ-ಅಫ್ಘಾನಿಸ್ತಾನದಂಥ ದೇಶಗಳಿಗೆ ಕರೆದುಕೊಂಡು ಹೋಗಿ ಇಸ್ಲಾಮ್ಗೆ ಮತಾಂತರ ಮಾಡಿ, ಐಸಿಸ್ ಭಯೋತ್ಪಾದಕ ಸಂಘಟನೆಗೆ ಸೇರಿಸಿದ ಕತೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ (The Kerala Story) ಹಿಂದಿ ಸಿನಿಮಾ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ವಿವಾದ ಸೃಷ್ಟಿಸಿದೆ. ಇದು ನೈಜ ಘಟನೆಗಳ ಆಧಾರಿತ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದ್ದೇ ಗಲಾಟೆಗೆ ಕಾರಣವಾಗಿದೆ. ಇಂಥ ವಿವಾದಾತ್ಮಕ ಸಿನಿಮಾ ಬಿಡುಗಡೆಯಾಗಬಾರದು ಎಂದು ಕಾಂಗ್ರೆಸ್, ಸಿಪಿಐ (ಎಂ) ಮತ್ತು ಇತರ ಕೆಲವು ಪಕ್ಷಗಳು ಒತ್ತಾಯಿಸುತ್ತಿದ್ದರೆ, ಬಿಜೆಪಿ ಮತ್ತು ವಿವಿಧ ಹಿಂದುಪರ ಸಂಘಟನೆಗಳು ಸಿನಿಮಾ ಬಗ್ಗೆ ಖುಷಿ ವ್ಯಕ್ತಪಡಿಸಿವೆ.
ಇಷ್ಟರ ನಡುವೆ ದಿ ಕೇರಳ ಸ್ಟೋರಿ ಸಿನಿಮಾ ನಿಷೇಧಿಸಬೇಕು ಎಂದು ಒತ್ತಾಯಿಸಿ ಚೆನ್ನೈ ಮೂಲದ ಪತ್ರಕರ್ತ ಬಿ.ಆರ್.ಅರವಿಂದಾಕ್ಷನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ‘ದಿ ಕೇರಳ ಸ್ಟೋರಿ ಸಿನಿಮಾವು ದೇಶದ ಸಾರ್ವಭೌಮತೆ ಮತ್ತು ಏಕತೆಗೆ ಧಕ್ಕೆ ತರುತ್ತದೆ. ಸಾರ್ವಜನಿಕ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೇರಳವು ಉಗ್ರರಿಗೆ ಬೆಂಬಲ ನೀಡುವ ರಾಜ್ಯ ಎಂದು ಬಿಂಬಿಸುವ ಆಶಯವನ್ನು ಇಟ್ಟುಕೊಂಡೇ ಸಿನಿಮಾ ಮಾಡಲಾಗಿದೆ. ದಿ ಕೇರಳ ಸ್ಟೋರಿಯನ್ನು ಬಿಡುಗಡೆ ಮಾಡಲು ಅವಕಾಶ ಕೊಟ್ಟರೆ, ಇದು ಇಡೀ ದೇಶಕ್ಕೆ ಅವಮಾನ ಮಾಡಿದಂತೆ. ಭಾರತ ಭಯೋತ್ಪಾದಕರನ್ನು ಉತ್ಪಾದಿಸುವ ದೇಶ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸಿದಂತೆ ಆಗುತ್ತದೆ’ ಎಂದು ಬಿ.ಆರ್.ಅರವಿಂದಾಕ್ಷನ್ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: The Kerala Story: ಕೇರಳದಿಂದ ಕಾಣೆಯಾದ 32 ಸಾವಿರ ಹುಡುಗಿಯರ ನೈಜ ಕಥೆ: ʻದಿ ಕೇರಳ ಸ್ಟೋರಿʼ ಟ್ರೈಲರ್ ಔಟ್
ಈ ಅರ್ಜಿಯನ್ನು ಪರಿಶೀಲನೆ ಮಾಡಿದ ಮದ್ರಾಸ್ ಹೈಕೋರ್ಟ್ನ ಎ.ಡಿ.ಜಗದೀಶ್ ಚಂದಿರಾ ಮತ್ತು ನ್ಯಾ.ಸಿ.ಶರವಣನ್ ಅವರನ್ನೊಳಗೊಂಡ ಪೀಠ ವಜಾಗೊಳಿಸಿದೆ. ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಗೆ ಸಂಬಂಧಪಟ್ಟಂತೆ ಕೇರಳ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳು ಈಗಾಗಲೇ ಆದೇಶ ಹೊರಡಿಸಿವೆ. ಅದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಹೇಳಿಯಾಗಿದೆ. ಅಷ್ಟಕ್ಕೂ ದಿ ಕೇರಳ ಸ್ಟೋರಿ ಸಿನಿಮಾವನ್ನು ನೋಡದೆಯೇ, ಅದು ಕಾನೂನು-ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಅರ್ಜಿದಾರರು ಹೇಗೆ ಊಹಿಸುತ್ತಾರೆ? ಎಂದು ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ‘ದಿ ಕೇರಳ ಸ್ಟೋರಿ’ ನಿಷೇಧದ ಮಾತೇಕೆ?
‘ನೀವು ಯಾಕೆ ಇಷ್ಟು ತಡವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೀರಿ? ಮೊದಲೇ ಬಂದಿದ್ದರೆ, ನಾವು ನಮ್ಮಲ್ಲೇ ಯಾರಿಗಾದರೂ ಸಿನಿಮಾ ನೋಡುವಂತೆ ಹೇಳುತ್ತಿದ್ದೆವು. ಅವರ ಅಭಿಪ್ರಾಯದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಅಷ್ಟಕ್ಕೂ ಅರ್ಜಿಯನ್ನು ಸಲ್ಲಿಸಿದ ನೀವೂ ಕೂಡ ಸಿನಿಮಾವನ್ನೇ ನೋಡಿಲ್ಲ. ಕೇರಳ ಹೈಕೋರ್ಟ್ ಕೂಡ ಸಿನಿಮಾ ನಿಷೇಧ ಮಾಡುವುದಿಲ್ಲ ಎಂದು ಹೇಳಿದೆ. ಸುಪ್ರೀಂಕೋರ್ಟ್ ಕೂಡ ಇದನ್ನೇ ಹೇಳಿದೆ. ನಾವು ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ’ ಎಂದು ಮದ್ರಾಸ್ ಹೈಕೋರ್ಟ್ ಪೀಠ ಹೇಳಿದೆ. ಅಂದಹಾಗೇ, ದಿ ಕೇರಳ ಸ್ಟೋರಿ ಸಿನಿಮಾ ಮೇ 5ಕ್ಕೆ ಬಿಡುಗಡೆಯಾಗಲಿದೆ.