ಚೆನ್ನೈ: ಮುಸ್ಲಿಂ ಮಹಿಳೆಯರು ವಿಚ್ಛೇದನ ಪಡೆಯುವುದಕ್ಕೆ ಕೌಟುಂಬಿಕ ನ್ಯಾಯಾಲಯಗಳಿಗೇ (Family Courts) ತೆರಳಬೇಕು. ಷರಿಯತ್ ಕೌನ್ಸಿಲ್‌ಗಳಂತಹ ಖಾಸಗಿ ಸಂಸ್ಥೆಗಳಿಂದ ವಿಚ್ಛೇದನ ಪತ್ರ(ಖುಲಾ ಪತ್ರ) ಪಡೆದರೆ ಅದನ್ನು ಕೂನೂನು ಒಪ್ಪಿಕೊಳ್ಳುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ (Madras High court) ತೀರ್ಪು ನೀಡಿದೆ.
ಮುಸ್ಲಿಂ ವ್ಯಕ್ತಿಯೊಬ್ಬರ ಪತ್ನಿ 2017ರಲ್ಲಿ ಷರಿಯತ್‌ನಲ್ಲಿ ವಿಚ್ಛೇದನ ಪಡೆದುಕೊಂಡಿದ್ದು, ಅದನ್ನು ರದ್ದುಗೊಳಿಸಬೇಕು ಎಂದು ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ಮಾಡಿರುವ ನ್ಯಾಯಮೂರ್ತಿ ಸಿ. ಶಿವರಾಮನ್ ಅವನ್ನೊಳಗೊಂಡ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. ಖುಲಾ ಪ್ರಮಾಣ ಪತ್ರಗಳು ಕಾನೂನಿನಲ್ಲಿ ಅಮಾನ್ಯ. ಹಾಗಾಗಿ ಈ ದಂಪತಿ ವಿವಾದಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಕುಟುಂಬ ನ್ಯಾಯಾಲಯ ಅಥವಾ ತಮಿಳುನಾಡು ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ತಮಿಳುನಾಡು ಸೊಸೈಟಿಗಳ ನೋಂದಣಿ ಕಾಯಿದೆ, 1975ರ ಅಡಿಯಲ್ಲಿ ಷರಿಯತ್ ಕೌನ್ಸಿಲ್‌ಗಳು ವಿಚ್ಛೇದನ ಪ್ರಮಾಣ ಪತ್ರ ನೀಡುವ ಅಧಿಕಾರ ಹೊಂದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ. ಅರ್ಜಿದಾರರ ಪತ್ನಿ ವಿಚಾರಣೆಗೆ ಗೈರು ಹಾಜರಾಗಿದ್ದ ಹಿನ್ನೆಲೆ ನ್ಯಾಯಾಲಯ ಅರ್ಜಿದಾರರು ಹಾಗೂ ಷರಿಯತ್ ಕೌನ್ಸಿಲ್‌ನ ವಾದವನ್ನು ಮಾತ್ರವೇ ಕೇಳಿಸಿಕೊಂಡಿದೆ.