ಛತ್ತೀಸ್ಗಢ: ಒಂದು ಸಲ ಹಚ್ಚಿದರೆ ಸುಮಾರು 100 ತಾಸು ನಿರಂತರವಾಗಿ ಉರಿಯುವ ಮಣ್ಣಿನ ದೀಪ ಭರ್ಜರಿ ಮಾರಾಟವಾಗುತ್ತಿದೆ. ಛತ್ತೀಸ್ಗಢದಲ್ಲಿ ತಯಾರಾಗುವ ಈ ದೀಪಕ್ಕೆ ಜಾದುಯಿ (ಮಾಂತ್ರಿಕ) ದೀಪ’ ಎಂದೇ ಹೆಸರಿಡಲಾಗಿದೆ. ಹೀಗೆ 100 ತಾಸುಗಳ ಕಾಲ ಎಣ್ಣೆಯನ್ನು ಮರುಪೂರಣ ಮಾಡುವ ಅಗತ್ಯವಿಲ್ಲದೆ ನಿರಂತರವಾಗಿ ಉರಿಯುವ ದೀಪ ಖರೀದಿಸಲೆಂದೇ ದೇಶದ ಹಲವೆಡೆಯಿಂದ ಜನರು ಇಲ್ಲಿಗೆ ಬರುತ್ತಿದ್ದಾರೆ. ಆದರೂ ಗ್ರಾಹಕರ ಸಂಖ್ಯೆ ಸೀಮಿತವಾಗಿಯೇ ಇದೆ.
ಅಂದಹಾಗೇ ಈ ಮಾಂತ್ರಿಕ ದೀಪವನ್ನು ತಯಾರಿಸುತ್ತಿರುವವರು ಅಶೋಕ್ ಚಕ್ರಧಾರಿ (53). ಛತ್ತೀಸ್ಗಢದ ಕೊಂಡಗಾಂವ್ನ ಕುಮ್ಹಾರಪಾರಾ ನಿವಾಸಿ. ಅವರು ಅಲ್ಲಿನ ‘ಜಿಟ್ಕು-ಮಿಟ್ಕಿ ಟೆರಾಕೋಟಾ ಕಲಾಕೇಂದ್ರ’ದಲ್ಲಿ, ಹದವಾದ ಮಣ್ಣನ್ನು ಚಕ್ರಕ್ಕೆ ಹಾಕಿ ತಿರುಗಿಸಿ ಲೆಕ್ಕವಿಲ್ಲದಷ್ಟು ದೀಪ ಮಾಡುತ್ತ ಇರುತ್ತಾರೆ. ಹಾಗಂತ ಇವರೊಬ್ಬರೇ ಕೆಲಸ ಮಾಡುವುದಿಲ್ಲ. ಇವರ ತಂಡದಲ್ಲಿ 12-15 ಕೆಲಸಗಾರರು ಇದ್ದಾರೆ.
ಚಕ್ರಧಾರಿ ಮೊದಲು 24 ತಾಸು ನಿರಂತರವಾಗಿ, ಮರುಪೂರಣ ಅಗತ್ಯವಿಲ್ಲದೆ ಉರಿಯುವ ದೀಪವನ್ನು ವಿನ್ಯಾಸಗೊಳಿಸುತ್ತಿದ್ದರು. ಅದಾದ ಬಳಿಕ ಹೀಗೆ 100 ತಾಸುಗಳ ಕಾಲ ಉರಿಯುವ ದೀವಿಗೆ ಮಾಡುತ್ತಿದ್ದಾರೆ. ಅದರಲ್ಲೂ ಆನೆಗಳ ಮೇಲೆ ದೀವಿಗೆ ಇರುವಂತೆ, ಆನೆ ತನ್ನ ಸೊಂಡಿಲಿನಲ್ಲಿ ದೀವಿಗೆಯನ್ನು ಎತ್ತಿಹಿಡಿದಂತೆ ವಿನ್ಯಾಸಗೊಳಿಸಿದ ದೀಪಗಳನ್ನೂ ಇವರು ತಯಾರಿಸುತ್ತಿದ್ದಾರೆ. ದೀವಿಗೆಗೆ ಬುಡದಲ್ಲಿ ಟ್ಯೂಬ್ ಇದ್ದು, ಗುಮ್ಮಟಾಕಾರದ ಮುಚ್ಚಳವೂ ಇದೆ. ದೀಪವನ್ನು ನದಿ ಮರಳು ಮತ್ತು ಮಣ್ಣಿನ ಮಿಶ್ರಣದಿಂದ ತಯಾರಿಸಲಾಗುತ್ತದೆ. ಒಂದು ಬಾರಿ ಎಣ್ಣೆ ಹಾಕಿದರೆ ನಾಲ್ಕು ದಿನ ಏನೋ ತೊಂದರೆಯಿಲ್ಲ. ಅಂದಹಾಗೇ, ಚಕ್ರಧಾರಿ ಸೋಷಿಯಲ್ ಮೀಡಿಯಾಗಳಲ್ಲೂ ಸಖತ್ ಫೇಮಸ್ ಆಗಿದ್ದು, ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ.
ಮಾಂತ್ರಿಕ ದೀಪ 3 ಕೆಜಿ ತೂಗುತ್ತದೆ. ಒಂದು ದೀವಿಗೆಯ ಬೆಲೆ 2000 ರೂಪಾಯಿ. ‘ಈ ದೀಪವನ್ನು ತಯಾರಿಸುವುದು ಸುಲಭವಲ್ಲ. ನಾಲ್ಕು ಪ್ರತ್ಯೇಕ ತುಂಡುಗಳನ್ನು ತಯಾರಿಸಿಕೊಂಡು ಅದನ್ನು ಒಂದು ದೀಪವನ್ನಾಗಿ ಮಾಡಬೇಕು. ಕೆಲಸ ಜಾಸ್ತಿ ಇರುತ್ತದೆ. ಆದರೆ ಈ ದೀಪ ನನಗೆ ಹೆಚ್ಚಿನ ಹೆಸರು, ಆದಾಯ ತಂದುಕೊಟ್ಟಿದ್ದರಿಂದ ಬೆಲೆ ಜಾಸ್ತಿ ಇಟ್ಟಿಲ್ಲ’ ಎಂದು ಚಕ್ರಧಾರಿ ತಿಳಿಸಿದ್ದಾರೆ.
ಮಾಂತ್ರಿಕ ದೀಪದ ಬಗ್ಗೆ ಗೊತ್ತಿರುವವರು, ಯಾರಬಳಿಯಾದರೂ ಕೇಳಿದವರು ಅದನ್ನು ಖರೀದಿಸಲು ಚಕ್ರಧಾರಿ ಬಳಿಗೆ ಬರುತ್ತಾರೆ. ಹಾಗಿದ್ದಾಗ್ಯೂ ಇವರು ಇರುವ ಸ್ಥಳ ಹಳ್ಳಿ ಪ್ರದೇಶ ಆಗಿದ್ದರಿಂದ ದೀಪಕ್ಕೆ ಸೂಕ್ತ ಮಾರುಕಟ್ಟೆ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ಬೇರೆ ರಾಜ್ಯದ ಹಲವರು ಆರ್ಡರ್ ಕೊಟ್ಟು ಮಾಡಿಸಿಕೊಂಡು ಹೋಗುತ್ತಾರೆ. ಇತ್ತೀಚೆಗೆ ಸ್ಥಳೀಯ ಯುವಕರೇ ಸೇರಿ ಲೋಕಲ್ ಬಜಾರ್ ಎಂಬ ಬ್ಯುಸಿನೆಸ್ ಪ್ರಾರಂಭಿಸಿದ್ದು, ಅದರಡಿಯಲ್ಲಿ ಚಕ್ರಧಾರಿ ದೀಪಗಳನ್ನೂ ಆನ್ಲೈನ್ನಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: Deepavali 2022 | ಬಹುಸಂಸ್ಕೃತಿಯ ಬೆಳಕಲ್ಲಿ ಬಹು ದೊಡ್ಡ ಹಬ್ಬ ದೀಪಾವಳಿ