ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ಪತನದ ಅಂಚಿನಲ್ಲಿದ್ದು ಮೂರ್ನಾಲ್ಕು ದಿನಗಳೇ ಕಳೆದು ಹೋದರೂ ಪ್ರಕ್ರಿಯೆಗಳು ವೇಗ ಪಡೆದುಕೊಳ್ಳುತ್ತಿಲ್ಲ. ಅತ್ತ ಬಂಡಾಯ ಶಾಸಕರ ಬಣದಲ್ಲಿ ಸಾಲುಸಾಲು ಮೀಟಿಂಗ್‌ಗಳು, ಇತ್ತ ಉದ್ಧವ್ ಠಾಕ್ರೆ ಬಣದಲ್ಲೂ ಪದೇಪದೆ ಸಭೆಗಳು ನಡೆಯುತ್ತಲೇ ಇವೆ. ಈ ಮಧ್ಯೆ ಇಂದು ಮಧ್ಯಾಹ್ನ 1ಗಂಟೆಗೆ ಶಿವಸೇನೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆ ಮುಂಬೈನ ಶಿವಸೇನೆ ಭವನದಲ್ಲಿ ನಡೆಯಲಿದ್ದು, ಸಿಎಂ ಉದ್ಧವ್ ಠಾಕ್ರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳಲಿದ್ದಾರೆ.
ಈ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ, ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ, ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ, ಮಾಜಿ ಸಚಿವರಾದ ಲೀಲಾಧರ್ ಧಾಕೆ, ದಿವಾಕರ್ ರಾವುಟೆ, ರಾಮದಾಸ್ ಕದಮ್, ಸಂಸದರಾದ ಸಂಜಯ್ ರಾವತ್, ಗಜಾನನ ಕೀರ್ತಿಕರ್, ಮಾಜಿ ಸಂಸದರಾದ ಅನಂತ್ ಗೀತೆ, ಆನಂದ್ ಅಬ್ದುಲ್, ಚಂದ್ರಕಾಂತ್ ಖೈರೆ ಇತರರು ಉಪಸ್ಥಿತರಿರುವರು. ಈ ಸಭೆ ನಡೆಯುವಾಗಲೂ ಶಿವಸೇನೆ ಭವನದ ಹೊರಗೆ ಪಕ್ಷದ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸೇರುವ ಸಾಧ್ಯತೆ ಇದ್ದು, ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿದೆ.
ಜೂ.24ರಂದು ಉದ್ಧವ್ ಠಾಕ್ರೆಯವರ ಖಾಸಗಿ ನಿವಾಸ ಮಾತೋಶ್ರೀಯಲ್ಲಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಇತರ ಮುಖಂಡರೊಂದಿಗೆ ಠಾಕ್ರೆ ಸಭೆ ನಡೆಸುತ್ತಿದ್ದಾಗಲೂ ಶಿವಸೇನೆಯ ಅನೇಕ ಕಾರ್ಯಕರ್ತರು ನಿವಾಸದ ಹೊರಗೆ ನೆರೆದಿದ್ದರು. ಡ್ರಮ್ ಬಡಿದು, ವಾದ್ಯ ಊದುವ ಮೂಲಕ ಉದ್ಧವ್ ಠಾಕ್ರೆಗೆ ಬೆಂಬಲ ಸೂಚಿಸಿದ್ದರು. ಶಿವಸೇನಾ ಜಿಂದಾಬಾದ್ ಎಂದು ದೊಡ್ಡದಾಗಿ ಘೋಷಣೆಯನ್ನೂ ಕೂಗಿದ್ದರು. ಹಾಗೇ, ಇಂದು ಕೂಡ ಶಿವಸೇನೆ ಭವನದ ಹೊರಗೆ ಇಂಥದ್ದೇ ಸನ್ನಿವೇಶ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಕಾರ್ಪೊರೇಟರ್‌ಗಳಿಂದಲೂ ಏಕನಾಥ್ ಶಿಂಧೆಗೆ ಬೆಂಬಲ, ಶಿವಸೇನೆ ಮೇಲೆ ಹಿಡಿತ ಕಳೆದುಕೊಳ್ಳುತ್ತಿರುವ ಉದ್ಧವ್