Site icon Vistara News

Mahadayi Issue | ಗೋವಾ ವಿಧಾನಸಭೆಯಲ್ಲಿ ಮಹದಾಯಿ ಗಲಾಟೆ; ಪ್ರತಿಪಕ್ಷಗಳ ಶಾಸಕರನ್ನು ಹೊರಹಾಕಿದ ಮಾರ್ಷಲ್​​ಗಳು

Mahadayi water issue In Goa Assembly

ಗೋವಾ ವಿಧಾನಸಭೆ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ಮಹದಾಯಿ (Mahadayi) ವಿವಾದವೇ ಭುಗಿಲೆದ್ದಿತು. ಇಂದು ರಾಜ್ಯಪಾಲ ಪಿ.ಎಸ್​.ಶ್ರೀಧರನ್​ ಪಿಳ್ಳೈ ಭಾಷಣ ಮಾಡಲು ಎದ್ದುನಿಲ್ಲುತ್ತಿದ್ದಂತೆ, ಗೋವಾ ಪ್ರತಿಪಕ್ಷಗಳ ಮುಖಂಡರು ಗದ್ದಲ ಎಬ್ಬಿಸಿದರು. ಮೊದಲು ಮಹದಾಯಿ ನದಿ ನೀರು ತಿರುವು ಯೋಜನೆ ಬಗ್ಗೆ ಹೇಳಿಕೆ ನೀಡಿ, ಬಳಿಕ ಭಾಷಣ ಮಾಡಿ ಎಂದು ಪಟ್ಟು ಹಿಡಿದರು. ಆ ಪ್ರತಿಪಕ್ಷ ನಾಯಕರು ಸದನದಲ್ಲಿ ಅದೆಷ್ಟರ ಮಟ್ಟಿಗೆ ಅವ್ಯವಸ್ಥೆ-ಗಲಭೆ ಸೃಷ್ಟಿಸಿದರು ಎಂದರೆ ಕೊನೆಗೆ ಮಾರ್ಷೆಲ್​​ಗಳು ಬಂದು, ಅವರನ್ನೆಲ್ಲ ಅಲ್ಲಿಂದ ಹೊರಹಾಕಿದ್ದಾರೆ.

ಕರ್ನಾಟಕ ಮತ್ತು ಗೋವಾ ಮಧ್ಯದ ಮಹದಾಯಿ ವಿವಾದಕ್ಕೆ ಸುದೀರ್ಘ ಇತಿಹಾಸವಿದೆ. ಮಹದಾಯಿ (ಮಾಂಡೋವಿ) ನದಿಯ ಉಪನದಿಗಳಾದ ಕಳಸಾ ಮತ್ತು ಬಂಡೂರಿ ನದಿಗಳಿಗೆ ಅಣೆಕಟ್ಟು ಕಟ್ಟಿ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳಿಗೆ ನೀರು ಒದಗಿಸಲು ಕರ್ನಾಟಕದಲ್ಲಿ ಈ ಹಿಂದೆ ಎಸ್​.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಯೋಜನೆ ರೂಪಿಸಲಾಗಿತ್ತು. ಆದರೆ ಗೋವಾ ಇದನ್ನು ಆಗಿನಿಂದಲೂ ಅಂದರೆ ಮನೋಹರ್​ ಪರಿಕ್ಕರ್​ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ವಿರೋಧಿಸುತ್ತಿದೆ. ಕರ್ನಾಟಕ ಕಳಸಾ-ಬಂಡೂರಿ ಅಣೆಕಟ್ಟು ನಿರ್ಮಾಣ ಮಾಡಿದರೆ, ಗೋವಾದ ಅಪಾರ ಪ್ರಮಾಣದ ಅರಣ್ಯ ನಾಶವಾಗುತ್ತದೆ. ಅಷ್ಟೇ ಅಲ್ಲ, ಜಲಚರಗಳಿಗೆ ತೊಂದರೆಯಾಗುತ್ತದೆ ಎಂದು ಆ ಸರ್ಕಾರದ ವಾದ. ಇದೇ ಮಹದಾಯಿ ವಿವಾದಕ್ಕೆ ಸಂಬಂಧಪಟ್ಟು ಕರ್ನಾಟಕ-ಗೋವಾ ಸರ್ಕಾರದ ಮಧ್ಯೆ ಯಾವುದೇ ಸಂಧಾನವಾಗಲೀ, ಕಾನೂನು ಪ್ರಕ್ರಿಯೆಗಳಾಗಲೀ ಕೆಲಸ ಮಾಡುತ್ತಿಲ್ಲ.

ಇಷ್ಟೆಲ್ಲದರ ಮಧ್ಯೆ ಇತ್ತೀಚೆಗೆ ಕರ್ನಾಟಕ ಸರ್ಕಾರದ ಮಹದಾಯಿ ಯೋಜನೆಯ ಸಮಗ್ರ ಯೋಜನಾ ವರದಿ (ಡಿಪಿಆರ್‌)ಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಇದಕ್ಕೆ ಗೋವಾ ಸರ್ಕಾರದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮತ್ತೆ ಅದರ ಬೆನ್ನಲ್ಲೇ, ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಕಂಬಗಳ ಬಳಕೆ ಬೇಡ. ಬದಲಿಗೆ ಭೂಮಿಯೊಳಗೆ ವಿದ್ಯುತ್‌ ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಯೋಜನೆಗೆ ಬಳಕೆಯಾಗುವ ಅರಣ್ಯ ಪ್ರದೇಶ ನಾಶ ಮಾಡುವುದು ಬೇಡ. ಯಾವುದೇ ಮರಗಳನ್ನು ಕಡಿಯಲು ಅರಣ್ಯ ಸಚಿವಾಲಯದ ಅನುಮತಿ ಇಲ್ಲ. ಈಗಾಗಲೇ ಕಡ್ಡಾಯ ಅರಣ್ಯೀಕರಣಕ್ಕೆ ಗುರುತಿಸಿರುವ 60 ಹೆಕ್ಟೇರ್ ಅರಣ್ಯ ಭೂಮಿಯ ಬಗ್ಗೆ ಮಾಹಿತಿ ನೀಡಿ ಎಂದು ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆ ಕರ್ನಾಟಕ ಸರ್ಕಾರದಿಂದ ಸ್ಪಷ್ಟನೆ ಕೇಳಿತ್ತು. ಒಟ್ಟಾರೆ ಕಳಸಾ-ಬಂಡೂರಿಗೆ ನೂರೆಂಟು ವಿಘ್ನ ಎದುರಾಗಿದೆ.

ಇಷ್ಟಾದರೂ ಇವತ್ತು ಗೋವಾ ವಿಧಾನಸಭೆಯಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್​, ಗೋವಾ ಫಾರ್ವರ್ಡ್​ ಪಾರ್ಟಿ (GFP) ಮತ್ತು ಆಮ್​ ಆದ್ಮಿ ಪಕ್ಷದ ಸದಸ್ಯರು ಕಳಸಾ-ಬಂಡೂರಿ ವಿಚಾರವನ್ನೇ ಎತ್ತಾಡಿದರು. ಕಪ್ಪು ಬಟ್ಟೆ ಧರಿಸಿ ಬಂದಿದ್ದ ಅವರು, ಪೋಸ್ಟರ್​​ಗಳನ್ನು ಹಿಡಿದು ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರು. ರಾಜ್ಯಪಾಲರು ತಮ್ಮ ಭಾಷಣ ಪ್ರಾರಂಭಕ್ಕೂ ಮುನ್ನ, ಮಹದಾಯಿ ವಿಷಯದ ಬಗ್ಗೆ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು. ಅಷ್ಟೇ ಅಲ್ಲ, ಕರ್ನಾಟಕ ಸರ್ಕಾರಕ್ಕೆ ಈಗಾಗಲೇ ಅನುಮತಿ ಸಿಕ್ಕಿದೆ. ಇದು ಗೋವಾ ರಾಜ್ಯಕ್ಕೆ ಆದ ಸೋಲು. ಮಹದಾಯಿ ನೀರನ್ನು ಸಂರಕ್ಷಿಸಲು ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ವಿಫಲರಾಗಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದೂ ಆಗ್ರಹ ಮಾಡಿದ್ದಾರೆ. ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ.

ಗೋವಾ ವಿಧಾನಸಭೆ ಸ್ಪೀಕರ್​ ರಮೇಶ್​ ತವಡ್ಕರ್ ಅವರು ಪ್ರತಿಪಕ್ಷಗಳ ಶಾಸಕರನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಆಗ ಅನಿವಾರ್ಯವಾಗಿ ಮಾರ್ಷಲ್​​ಗಳನ್ನು ಕರೆಸಿ, ಎಲ್ಲರನ್ನೂ ಹೊರಗೆ ಕಳಿಸಲಾಯಿತು.

ಇದನ್ನೂ ಓದಿ: Kalasa Banduri | ಕಳಸಾ ಬಂಡೂರಿ ಯೋಜನೆಯ ಡಿಪಿಆರ್‌ಗೆ ಕೇಂದ್ರ ಜಲ ಆಯೋಗದ ಅನುಮತಿ: ಸಚಿವ ಪ್ರಲ್ಹಾದ್‌ ಜೋಷಿ ಮಾಹಿತಿ

Exit mobile version