ಮುಂಬಯಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕಾರ ಮಾಡಲಾಗಿದೆ. ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರದ ನಡೆಯನ್ನು ಖಂಡಿಸಿ, ಡಿಸೆಂಬರ್ 22ರಂದು ಕರ್ನಾಟಕ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ ಮಹಾರಾಷ್ಟ್ರ ಸರ್ಕಾರದ ಶಿಂಧೆ ನೇತೃತ್ವದ ಬಾಳಾಸಾಹೇಬಂಚಿ ಶಿವಸೇನಾ ಮತ್ತು ಬಿಜೆಪಿ ನಡುವೆಯೇ ಸರಿಯಾಗಿ ಹೊಂದಾಣಿಕೆ ಇಲ್ಲದ ಕಾರಣ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ ತುಸು ವಿಳಂಬವಾಗಿದೆ.
ಮಹಾರಾಷ್ಟ್ರ ವಿಧಾನಸಭೆ ಚಳಿಗಾಲದ ಅಧಿವೇಶನದ ಇಂದಿನ ಕಲಾಪ ಶುರುವಾಗುತ್ತಿದ್ದಂತೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು, ‘ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿ ಕರ್ನಾಟಕದ ಭಾಗದಲ್ಲಿರುವ ಮರಾಠಿ ಭಾಷಿಕರ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹೋರಾಟವನ್ನು ಕಾನೂನು ಬದ್ಧವಾಗಿ ಮುಂದುವರಿಸಲಾಗುವುದು’ ಎಂಬ ನಿರ್ಣಯವನ್ನು ಮಂಡಿಸಿದರು. ಶಿಂಧೆ ಈ ನಿರ್ಣಯ ಮಂಡಿಸುತ್ತಿದ್ದಂತೆ, ಶಿವಸೇನೆ ಉದ್ಧವ್ ಠಾಕ್ರೆ ಬಣ ಸೇರಿ ಎಲ್ಲ ವಿಪಕ್ಷಗಳೂ ಒಮ್ಮತದಿಂದ ಒಪ್ಪಿಕೊಂಡವು. ಬಳಿಕ ಸರ್ವಾನುಮತದಿಂದ ಅಂಗೀಕಾರ ಮಾಡಿದವು.
ಗಡಿ ಭಾಗದಲ್ಲಿರುವ ಮರಾಠಿ ಭಾಷಿಕರ ಬೆನ್ನಿಗೆ ಮಹಾರಾಷ್ಟ್ರ ಸರ್ಕಾರ ಸದಾ ಇರಲಿದೆ. ಮರಾಠಿ ಭಾಷೆ ಮಾತನಾಡುವವರು ಇರುವ ಬೆಳಗಾವಿ, ಕಾರವಾರ, ನಿಪ್ಪಾಣಿ, ಭಾಲ್ಕಿ, ಬೀದರ್ ನಗರಗಳ ಜತೆ, 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಹೋರಾಟವನ್ನು ಸುಪ್ರೀಂಕೋರ್ಟ್ನಲ್ಲಿ ಕಾನೂನು ಬದ್ಧವಾಗಿ ಮುಂದುವರಿಸಲಾಗುವುದು. ಹಾಗೇ, ಈ ಪ್ರದೇಶಗಳನ್ನು ರಾಜ್ಯಕ್ಕೆ ಸೇರ್ಪಡೆಗೊಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುವುದು. ಗಡಿ ವಿವಾದದ ಬಗ್ಗೆ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿದಾಗ ಏನೆಲ್ಲ ಸೂಚನೆ ಕೊಟ್ಟಿದ್ದರೋ, ಅದನ್ನು ಅನುಷ್ಠಾನಕ್ಕೆ ತರುವಂತೆ ಕೇಂದ್ರ ಸರ್ಕಾರ ಮತ್ತೊಮ್ಮೆ ಸೂಚನೆ ನೀಡಬೇಕು. ಹಾಗೇ, ಗಡಿ ಭಾಗದಲ್ಲಿರುವ ಮರಾಠಿಗರ ಸುರಕ್ಷತೆಯನ್ನು ನಾವು ಖಾತ್ರಿ ಪಡಿಸುತ್ತೇವೆ ಎಂಬ ಭರವಸೆಯನ್ನು ನಮಗೆ ಕೇಂದ್ರ ಸರ್ಕಾರ ಕೊಡಬೇಕು’ ಎಂಬ ಅಂಶಗಳನ್ನೊಳಗೊಂಡ ನಿರ್ಣಯವನ್ನು ಮಹಾರಾಷ್ಟ್ರ ಸರ್ಕಾರ ಅಂಗೀಕಾರ ಮಾಡಿದೆ.
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ಮಧ್ಯಸ್ಥಿಕೆ ವಹಿಸಿದ್ದಾರೆ. ಕಳೆದ 15ದಿನಗಳ ಕೆಳಗೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ್ದ ಗೃಹ ಸಚಿವ ಅಮಿತ್ ಶಾ, ‘ಗಡಿ ವಿಚಾರ ಸುಪ್ರೀಂಕೋರ್ಟ್ನಲ್ಲಿದೆ. ತೀರ್ಪು ಬರುವವರೆಗೂ ಕಾಯಬೇಕು. ಅದು ಬಿಟ್ಟು, ಎರಡೂ ರಾಜ್ಯಗಳ ನಾಯಕರು ಪರಸ್ಪರ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು. ಜನಸಾಮಾನ್ಯರ ನಿತ್ಯ ಬದುಕಿಗೆ ತೊಂದರೆಯನ್ನೊಡ್ಡಬಾರದು. ಹಾಗೇ ಎರಡೂ ರಾಜ್ಯಗಳು ತಲಾ ಮೂವರು ಸಚಿವರನ್ನೊಳಗೊಂಡ ಸಮಿತಿಯನ್ನು ರಚಿಸಿಕೊಂಡು, ಶಾಂತಿಯುತವಾಗಿ ಚರ್ಚಿಸಿಕೊಂಡು ಭಿನ್ನಾಭಿಪ್ರಾಯ ಕೊನೆಗಾಣಿಸಿಕೊಳ್ಳಬೇಕು’ ಎಂದು ಹೇಳಿದ್ದರು. ಈ ಸೂಚನೆಗಳನ್ನೆಲ್ಲ ಕರ್ನಾಟಕ ಸರ್ಕಾರ ಅನುಷ್ಠಾನಕ್ಕೆ ತರಬೇಕು ಎಂಬ ಆಗ್ರಹವನ್ನು ಮಹಾರಾಷ್ಟ್ರ ಸರ್ಕಾರ ತನ್ನ ನಿರ್ಣಯದಲ್ಲಿ ಮಾಡಿದೆ.
ಇದನ್ನೂ ಓದಿ: Border Dispute | ಕರ್ನಾಟಕ ಆಕ್ರಮಿತ ಮಹಾರಾಷ್ಟ್ರವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ, ಉದ್ಧವ್ ಹೊಸ ಉಪಟಳ