Site icon Vistara News

ವಿಧಾನಸಭಾ, ಲೋಕಸಭಾ ಚುನಾವಣೆಗೆ ಮಹಾರಾಷ್ಟ್ರ ಬಿಜೆಪಿಯ ಐದು ಅಜೆಂಡಾಗಳು; ಅಭೂತಪೂರ್ವ ಗೆಲುವಿಗಾಗಿ ಪ್ರಯತ್ನ ಶುರು

Maharashtra BJP

#image_title

ಮುಂಬಯಿ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದೆ. 2024ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆದರೆ, ಅದಾದ ಮೇಲೆ ಅದೇ ವರ್ಷ ಅಕ್ಟೋಬರ್​ ಒಳಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಿರುವಾಗ ಮಹಾರಾಷ್ಟ್ರ ಬಿಜೆಪಿ ಘಟಕ (Maharashtra BJP), ಈಗಾಗಲೇ ಚುನಾವಣಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಒಟ್ಟು 288 ವಿಧಾನಸಭಾ ಕ್ಷೇತ್ರಗಳಲ್ಲಿ 200ಕ್ಕೂ ಹೆಚ್ಚು ಸೀಟ್​ಗಳನ್ನು ಗೆಲ್ಲಲು ಮತ್ತು 48 ಲೋಕಸಭಾ ಕ್ಷೇತ್ರಗಳಲ್ಲಿ 45 ಸೀಟ್​ಗಳಲ್ಲಿ ಪಾರುಪತ್ಯ ಸಾಧಿಸಲು ಈಗಿನಿಂದಲೇ ಕಾರ್ಯಕರ್ತರು, ಜನಪ್ರತಿನಿಧಿಗಳಿಗೆ ಟಾಸ್ಕ್​​ಗಳನ್ನು ಕೊಡಲು ಪ್ರಾರಂಭಿಸಲಾಗಿದೆ. ನಾಸಿಕ್​​ನಲ್ಲಿ ಇತ್ತೀಚೆಗೆ ನಡೆದ ಸಮಾವೇಶದಲ್ಲಿ ಹೀಗೊಂದು ನಿರ್ಧಾರ ಕೈಗೊಳ್ಳಲಾಗಿದೆ.

ಮರಾಠಿ ಮತದಾರರಿಗೆ ಗಾಳ
ಮಹಾರಾಷ್ಟ್ರದ ಬಿಜೆಪಿ ನಾಯಕರು/ಕಾರ್ಯಕರ್ತರಿಗೆ ಮೊದಲ ಟಾಸ್ಕ್​ ಎಂದರೆ, ಮುಂಬಯಿ ಮತ್ತು ಅದರ ಮೆಟ್ರೋಪಾಲಿಟಿನ್​ ಪ್ರದೇಶದಲ್ಲಿರುವ ಮರಾಠಿ ಮತದಾರರನ್ನು ಸೆಳೆಯುವುದು. ಈಗ ಮಹಾರಾಷ್ಟ್ರದಲ್ಲಿ ಶಿವಸೇನೆಯಲ್ಲಿ ಎರಡು ಬಣವಾಗಿದೆ. ಶಿಂಧೆ ಬಣ ಬಿಜೆಪಿಯೊಟ್ಟಿಗೆ ಮೈತ್ರಿ ಮಾಡಿಕೊಂಡು ಆಡಳಿತದಲ್ಲಿದ್ದರೆ, ಉದ್ಧವ್ ಠಾಕ್ರೆ ಬಣ ಪ್ರತಿಪಕ್ಷವಾಗಿದೆ. ಮುಂಬಯಿ ಮತ್ತು ಅದರ ಮೆಟ್ರೋಪಾಲಿಟಿನ್​ ನಗರಗಳಲ್ಲಿ ಇರುವ ಮತದಾರರು ಉದ್ಧವ್​ ಠಾಕ್ರೆ ಬಣದತ್ತ ಒಲವು ಹೊಂದಿದ್ದಾರೆ. ಅವರನ್ನು ಬಿಜೆಪಿ ಪಕ್ಷದತ್ತ ಸೆಳೆಯುವುದೇ ಬಹುಮುಖ್ಯವಾದ ಟಾಸ್ಕ್​ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಹಾಗೇ, ಮಹಾರಾಷ್ಟ್ರದ ಪ್ರತಿಪಕ್ಷಗಳಲ್ಲಿರುವ ಎರಡನೇ ಹಂತದ ನಾಯಕರು ಅತ್ಯಂತ ಸಮರ್ಥರಾಗಿದ್ದಾರೆ ಮತ್ತು ಯುವ ನಾಯಕರು ಹಲವರು ಇದ್ದಾರೆ. ಅಂಥವರು ಬಿಜೆಪಿಗೆ ಸೇರ್ಪಡೆಯಾದರೆ, ನಮಗೆ ಚುನಾವಣೆ ದೃಷ್ಟಿಯಿಂದ ತುಂಬ ಅನುಕೂಲವಾಗುತ್ತದೆ. ಪಕ್ಷಕ್ಕಾಗಿ ಸಕ್ರಿಯವಾಗಿ ದುಡಿಯುವವರು ಇನ್ನಷ್ಟು ಮಂದಿ ನಮಗೆ ಸಿಕ್ಕಂತಾಗುತ್ತದೆ. ಹೀಗಾಗಿ ಅಂಥ ಯುವನಾಯಕರನ್ನು ಪಕ್ಷಕ್ಕೆ ಸೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವುದು ಎರಡನೇ ಅಜೆಂಡಾ ಎಂದು ಆ ಬಿಜೆಪಿ ನಾಯಕರು ಹೇಳಿದ್ದಾರೆ.

ಇದನ್ನೂ ಓದಿ: Maha politics: ಅಸ್ವಾಭಾವಿಕ ಮೈತ್ರಿ ಸರಕಾರಕ್ಕೆ ಉಳಿಗಾಲವಿಲ್ಲ, ಕರ್ನಾಟಕದ ಬಳಿಕ ಈಗ ಮಹಾರಾಷ್ಟ್ರ ಮಾದರಿ!

‘ಇನ್ನೊಂದು ಬಹುಮುಖ್ಯ ಅಂಶವೆಂದರೆ ಮಹಾರಾಷ್ಟ್ರದಲ್ಲಿ ಶೇ.10ರಷ್ಟು ಇರುವ ದಲಿತವರ್ಗದವರನ್ನು ಬಿಜೆಪಿಯತ್ತ ಸೆಳೆಯುವುದು. ಈ ವರ್ಗದ ಜನರು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ ಮತ್ತು ಎನ್​ಸಿಪಿ ಪಕ್ಷಗಳನ್ನೇ ನೆಚ್ಚಿಕೊಂಡು ಇದ್ದಾರೆ. ಪ್ರತಿ ಚುನಾವಣೆಯಲ್ಲೂ ಅವರು ಜಾತ್ಯತೀತ ಎಂಬ ಪರಿಕಲ್ಪನೆಯಡಿ ಕಾಂಗ್ರೆಸ್​ ಮತ್ತು ಎನ್​ಸಿಪಿಗಳಿಗೇ ಮತ ಹಾಕುತ್ತಾರೆ. ಆದರೆ ಈ ಸಲ ಅವರಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು, ಉಪಕ್ರಮಗಳ ಬಗ್ಗೆ ಸರಿಯಾಗಿ ತಿಳಿವಳಿಕೆ ಮೂಡಿಸಬೇಕು ಮತ್ತು ಅವರು ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಮತಹಾಕುವಂತೆ ಮಾಡಬೇಕು ಎಂದೂ ಪಕ್ಷದ ಸಭೆಯಲ್ಲಿ ನಿರ್ಧಾರವಾಗಿದೆ ಎಂದು ಹೇಳಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯತೆ
ಅದಾದ ಮೇಲೆ ನಾಲ್ಕನೇ ಅಜೆಂಡಾವಾಗಿ, ಕಳೆದ ಚುನಾವಣೆಗಳಲ್ಲಿ ಬಿಜೆಪಿ ಯಾವೆಲ್ಲ ಕ್ಷೇತ್ರಗಳಲ್ಲಿ ಸೋತಿದೆಯೋ ಆ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಯತ್ನಶೀಲರಾಗುವುದು. ಸೋಷಿಯಲ್ ಮೀಡಿಯಾಗಳಲ್ಲಿ ಇನ್ನಷ್ಟು ಮತ್ತಷ್ಟು ಸಕ್ರಿಯರಾಗಿ, ಜನರನ್ನು ತಲುಪುವುದು. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಪಕ್ಷಗಳ ನಕಾರಾತ್ಮಕ ಅಂಶಗಳನ್ನು ಹೆಚ್ಚೆಚ್ಚು ವೈರಲ್ ಮಾಡುವ ಮೂಲಕ, ಯುವಮತದಾರರಲ್ಲಿ ಅರಿವು ಮೂಡಿಸಲು ನಿರ್ಧಾರ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ತಿಳಿಸಿದ್ದಾರೆ.

Exit mobile version