ಅಯೋಧ್ಯೆ: ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನೆ ನಾಯಕ ಏಕನಾಥ್ ಶಿಂದೆ (Eknath Shinde) ಅವರು ಇಂದು ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಶಿವಸೇನೆಯ ಸಂಸದರು, ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಕೂಡ ಇದ್ದಾರೆ. ಶನಿವಾರವೇ ಲಖನೌಗೆ ಆಗಮಿಸಿದ್ದ ಏಕನಾಥ್ ಶಿಂಧೆ ಇಂದು ಅಯೋಧ್ಯೆಗೆ ತೆರಳುವ ವೇಳೆ ಶಿವಸೇನೆಯ ಸಾವಿರಾರು ಕಾರ್ಯಕರ್ತರು/ಬೆಂಬಲಿಗರು ನೆರೆದಿದ್ದರು. ಥೇಟ್ ಒಂದು ರೋಡ್ ಶೋ ಆದಂತೆ ಆಗಿದೆ.
ಶಿವಸೇನೆ ಇಬ್ಭಾಗವಾಗಿ 2022ರಲ್ಲಿ ಏಕನಾಥ್ ಶಿಂದೆ ಅವರ ಬಣ ಬಿಜೆಪಿಯೊಟ್ಟಿಗೆ ಸೇರಿ ಸರ್ಕಾರ ರಚನೆ ಮಾಡಿದೆ. ಏಕನಾಥ್ ಶಿಂಧೆಯವರು 2018ರಲ್ಲಿ ಒಮ್ಮೆ ಅಯೋಧ್ಯೆ ಶ್ರೀರಾಮಜನ್ಮಭೂಮಿಗೆ ಭೇಟಿಕೊಟ್ಟಿದ್ದರು. ಆಗಿನ್ನೂ ಸುಪ್ರೀಂಕೋರ್ಟ್ ಅಲ್ಲಿ ರಾಮಮಂದಿರ ನಿರ್ಮಾಣದ ತೀರ್ಪು ಕೊಟ್ಟಿರಲಿಲ್ಲ. ಅದಾದ ಮೇಲೆ 2020ರಲ್ಲಿ ಒಮ್ಮೆ ಅಲ್ಲಿಗೆ ಹೋಗಿದ್ದರು. ಹೀಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ಮೇಲೆ ಏಕನಾಥ್ ಶಿಂಧೆಯವರು ಅಯೋಧ್ಯೆಗೆ ಭೇಟಿ ಕೊಡುತ್ತಿರುವುದು ಇದೇ ಮೊದಲಬಾರಿಗೆ.
ಇಂದು ಮುಂಜಾನೆ ಲಖನೌನಿಂದ ಅಯೋಧ್ಯೆಗೆ ಹೊರಡುವ ಮುನ್ನ ಮಾತನಾಡಿದ ಸಿಎಂ ಏಕನಾಥ್ ಶಿಂಧೆ, ‘ನಾನಿಂದು ಅಯೋಧ್ಯೆಗೆ ಭೇಟಿ ನೀಡಿ, ಶ್ರೀರಾಮನ ದರ್ಶನ ಪಡೆಯುತ್ತೇನೆ. ಶಿವಸೇನೆಯ ಚಿಹ್ನೆಯಾದ ಬಿಲ್ಲು-ಬಾಣ ನಮ್ಮ ಬಣಕ್ಕೆ ಸಿಕ್ಕಿದೆ. ಹೀಗಾಗಿ ಶ್ರೀರಾಮನ ಅನುಗ್ರಹ ನಮ್ಮ ಮೇಲಿದೆ ಎಂದೇ ಅರ್ಥ’ ಎಂದು ಹೇಳಿದ್ದಾರೆ.
ಅಯೋಧ್ಯೆಯನ್ನು ತಲುಪಿರುವ ಏಕನಾಥ್ ಶಿಂಧೆ, ಸಂಜೆ ಸರಯೂ ನದಿ ತೀರದಲ್ಲಿ ನಡೆಯಲಿರುವ ಮಹಾ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೇ, ದೇವಸ್ಥಾನ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಲಿದ್ದಾರೆ. ಅಲ್ಲಿನ ಸಾಧು-ಸಂತರನ್ನು ಭೇಟಿ ಮಾಡಲಿದ್ದಾರೆ. ಏಕನಾಥ್ ಶಿಂಧೆಯವರೊಟ್ಟಿಗೆ ಉತ್ತರಪ್ರದೇಶ ಸಚಿವ ಸ್ವತಂತ್ರ ದೇವ್ ಸಿಂಗ್ ಕೂಡ ಇರಲಿದ್ದಾರೆ.
ಇದನ್ನೂ ಓದಿ: Ram Lalla Jalabhishek: ಅಯೋಧ್ಯೆ ರಾಮಲಲ್ಲಾಗೆ ಏ.23ರಂದು ಜಲಾಭಿಷೇಕ, 155 ದೇಶಗಳ ನದಿ ನೀರು ಸಮರ್ಪಣೆ
ಶಿವಸೇನೆಯ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆಯವರಿಗೆ ಶ್ರೀರಾಮ ಮಂದಿರ ನಿರ್ಮಾಣ ಬಹುದೊಡ್ಡ ಕನಸಾಗಿತ್ತು ಎಂದು ಹೇಳಿರುವ ಏಕನಾಥ್ ಶಿಂಧೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನ ಲಖನೌದಲ್ಲಿ ಈಗಾಗಲೇ ಭೇಟಿ ಮಾಡಿದ್ದಾರೆ. ನಾನು ಅಯೋಧ್ಯೆಗೆ ಬಂದಿರುವುದು ಯಾವುದೇ ರಾಜಕೀಯ ಕಾರಣಕ್ಕಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಿಂಧೆ ಅಯೋಧ್ಯೆ ಭೇಟಿ ನಿಮಿತ್ತ, ಅಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.