ಮುಂಬೈ: ಮಹಾರಾಷ್ಟ್ರ ಶಿವಸೇನೆಯಲ್ಲಿಯೇ ಎರಡು ವಿಭಾಗಗಳಾಗಿವೆ. ಸದ್ಯ ಏಕನಾಥ ಶಿಂಧೆ ತನ್ನ ಬಣ ದೊಡ್ಡದಿದೆ ಎಂದು ಹೇಳಿಕೊಂಡಿದ್ದಾರೆ. ಎರಡೂ ಬಣಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಬಂಡಾಯ ಶಾಸಕರು ಮತ್ತು ಡೆಪ್ಯೂಟಿ ಸ್ಪೀಕರ್ ನಡುವೆ ಕಾನೂನು ಫೈಟ್ ನಡೆಯುತ್ತಿದೆ. ಇದೆಲ್ಲದರ ಜತೆ ಈಗ ಉದ್ಧವ್ ಠಾಕ್ರೆ, ಬಂಡಾಯ ಬಣದಲ್ಲಿರುವ 9 ಸಚಿವರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಈ 9 ಮಂದಿಯ ಕೈಯಲ್ಲಿದ್ದ ಖಾತೆಗಳನ್ನು ತನ್ನ ಬಣದಲ್ಲಿರುವ ಇತರ ಸಚಿವರಿಗೇ ಹಸ್ತಾಂತರ ಮಾಡಿದ್ದಾರೆ. ಶಿವಸೇನೆಯಲ್ಲಿ ಉಂಟಾದ ಆಂತರಿಕ ಭಿನ್ನಮತ, ಸರ್ಕಾರ ಅತಂತ್ರವಾಯಿತು ಎಂಬ ಕಾರಣಕ್ಕೆ ಜನರಿಗೆ ಸಮಸ್ಯೆಯಾಗಬಾರದು. ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗಬಾರದು. ಕೆಲಸಗಳು ನಿಲ್ಲಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಇದೀಗ ಶಿಂಧೆ ಬಣದಲ್ಲಿರುವ ಸಚಿವರು ತಮ್ಮ ಬಳಿ ಖಾತೆಗಳಿಲ್ಲದೆ, ಖಾಲಿ ಕೈಯಲ್ಲಿ ಕೂರುವಂತಾಗಿದೆ.
ಏಕನಾಥ್ ಶಿಂಧೆ ಕೈಯಲ್ಲಿದ್ದ ಪಿಡಬ್ಲೂಡಿ (ಲೋಕೋಪಯೋಗಿ) ಇಲಾಖೆಯನ್ನು ಸುಭಾಷ್ ದೇಸಾಯಿಗೆ ಹಸ್ತಾಂತರಿಸಲಾಗಿದೆ. ಹಾಗೇ, ಬಂಡಾಯ ಬಣದಲ್ಲಿರುವ ಗುಲಾಬ್‌ರಾವ್ ಪಾಟೀಲ್‌ರ ಜಲ ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ ಅನಿಲ್ ಪರಬ್‌ಗೆ, ದಾದಾಜಿ ಭುಸೆಯವರ ಕೃಷಿ ಮತ್ತು ಮಾಜಿ ಸೈನಿಕರ ಕಲ್ಯಾಣ ಇಲಾಖೆ ಮತ್ತು ಸಂದೀಪ್ ಭುಮಾರೆಯವರ ಉದ್ಯೋಗ ಖಾತರಿ ಹಾಗೂ ತೋಟಗಾರಿಕೆ ಖಾತೆ ಶಂಕರ್ ಗಢಕ್ ಅವರಿಗೆ ವರ್ಗಾವಣೆಯಾಗಿದೆ. ಬಂಡಾಯ ನಾಯಕ ಉದಯ್ ಸಾವಂತ್ ಅವರ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆದಿತ್ಯ ಠಾಕ್ರೆ ಪಾಲಾಗಿದೆ.
ಹಾಗೇ, ಏಕನಾಥ್ ಶಿಂಧೆಯೊಂದಿಗೆ ಅಸ್ಸಾಂನಲ್ಲಿರುವ ಶಂಭುರಾಜ್ ದೇಸಾಯಿ ಬಳಿ ಒಟ್ಟು ಮೂರು ಖಾತೆಗಳಿದ್ದವು. ಅವುಗಳನ್ನೆಲ್ಲ ಸಂಜಯ್ ಬನ್ಸೋಡೆ, ಸತೇಜ್ ಪಾಟಿಲ್ ಮತ್ತು ವಿಶ್ವಜಿತ್ ಕದಮ್‌ಗೆ ಹಂಚಲಾಗಿದೆ. ಹಾಗೇ, ರಾಜೇಂದ್ರ ಪಾಟೀಲ್ ಹೊಂದಿದ್ದ ನಾಲ್ಕು ಖಾತೆಗಳನ್ನು ವಿಶ್ವಿಜಿತ್ ಕದಮ್, ಪ್ರಜಕ್ತ್ ತಾನ್‌ಪುರೆ, ಸತೇಜ್ ಪಾಟಿಲ್ ಮತ್ತು ಅದಿತಿ ಠಾಕ್ರೆಗೆ ಹಂಚಿಕೆ ಮಾಡಲಾಗಿದೆ. ಇನ್ನೊಬ್ಬ ಬಂಡಾಯ ಸಚಿವ ಅಬ್ದುಲ್ ಸತ್ತರ್ ಬಳಿಯಿದ್ದ ಮೂರು ಖಾತೆಗಳು ಪ್ರಜಕ್ತ್ ತಾನ್‌ಪುರೆ, ಸತೇಜ್ ಪಾಟಿಲ್, ಅದಿತಿ ಠಾಕ್ರೆಗೆ ಮತ್ತು ಓಂಪ್ರಕಾಶ್ ಕುಡು ಹೊಂದಿದ್ದ ಇಲಾಖೆಗಳು ಅದಿತಿ ಠಾಕ್ರೆ, ಸತೇಜ್ ಪಾಟಿಲ್, ಸಂಜಯ್ ಬನ್ಸೋಡೆ ಮತ್ತು ದತ್ತಾತ್ರೇಯ ಭರ್ನೆಯವರ ಪಾಲಾಗಿದೆ.
ಇದನ್ನೂ ಓದಿ: ರಾಜ್ಯದ ಪರಿಸ್ಥಿತಿಯೇ ಬೇರೆ, ಮಹಾರಾಷ್ಟ್ರದ್ದೇ ಬೇರೆ : ಎಚ್‌ಡಿಕೆ ಹೇಳಿದ್ದೇನು?
ಹೈಕೋರ್ಟ್‌ಗೆ ಯಾಕೆ ಹೋಗಿಲ್ಲ?
ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ಏಕನಾಥ್ ಶಿಂಧೆ ಸೇರಿ 16 ಶಾಸಕರನ್ನು ಅನರ್ಹಗೊಳಿಸುವುದಾಗಿ ಡೆಪ್ಯೂಟಿ ಸ್ಪೀಕರ್ ನರಹರಿ ಜೈರ್ವಾಲ್ ಕಳಿಸಿದ್ದ ಶೋಕಾಸ್ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಅವರೆಲ್ಲ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇಂದು ಬೆಳಗ್ಗೆಯಿಂದಲೂ ವಿಚಾರಣೆ ನಡೆಯುತ್ತಿದೆ. ಈ ವೇಳೆ ಸುಪ್ರೀಂಕೋರ್ಟ್ ಪೀಠ, ʼನೀವು ನಿಮ್ಮ ಅನರ್ಹತೆ ನೋಟಿಸ್ ವಿರುದ್ಧ ಹೈಕೋರ್ಟ್‌ಗೆ ಹೋಗಬಹುದಿತ್ತು. ನೇರವಾಗಿ ಇಲ್ಲಿಗೇ ಯಾಕೆ ಬಂದಿದ್ದೀರಿʼ ಎಂದು ಪ್ರಶ್ನಿಸಿದೆ. ಅದಕ್ಕೆ ಉತ್ತರಿಸಿದ ರೆಬಲ್ ಶಾಸಕ ಪರ ವಕೀಲ, ‘ಈ ಹಿಂದೆ ಇಂಥ ರಾಜಕೀಯ ಬೆಳವಣಿಗೆಗಳು ನಡೆದಾಗ ಸರ್ವೋಚ್ಛ ನ್ಯಾಯಾಲಯವೇ ತೀರ್ಪು ನೀಡಿದೆ. ಹೀಗಾಗಿ ಅವರೆಲ್ಲ ನೇರವಾಗಿ ಇಲ್ಲಿಗೇ ಬಂದಿದ್ದಾರೆʼ ಎಂದು ತಿಳಿಸಿದ್ದಾರೆ. ʼಅಷ್ಟೇ ಅಲ್ಲ, ಈ ಶಾಸಕರು ತಮಗೆಲ್ಲ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದಾರೆ. ಅಸ್ಸಾಂನ ಗುವಾಹಟಿಯಿಂದ ನಮ್ಮ ಶವವೇ ಮಹಾರಾಷ್ಟ್ರಕ್ಕೆ ಹೋಗಬಹುದುʼ ಎಂಬ ಆತಂಕದಲ್ಲಿದ್ದಾರೆಂದೂ ವಕೀಲರು ಸುಪ್ರೀಂಕೋರ್ಟ್ ಗಮನಕ್ಕೆ ತಂದಿದ್ದಾರೆ.
ಇದನ್ನೂ ಓದಿ: Maha politics: ಎಲ್ಲದಕ್ಕೂ ಡೆಪ್ಯುಟಿ ಸ್ಪೀಕರ್, ಹಾಗಿದ್ರೆ ಮಹಾರಾಷ್ಟ್ರಕ್ಕೆ ಸ್ಪೀಕರ್ ಇಲ್ವಾ?