ಮುಂಬೈ: ಡೆಪ್ಯೂಟಿ ಸ್ಪೀಕರ್‌ರಿಂದ ಅನರ್ಹತೆ ನೋಟಿಸ್ ಪಡೆದ ಏಕನಾಥ್ ಶಿಂಧೆ ಸೇರಿ 16ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಇಂದು ಬೆಳಗ್ಗೆಯೇ ವಿಚಾರಣೆಯೂ ನಡೆಯಲಿದೆ. ಏಕನಾಥ್ ಶಿಂಧೆ ಬಣ ಎರಡು ಅರ್ಜಿಗಳನ್ನು ಸಲ್ಲಿಸಿದ್ದು, ಅದರಲ್ಲಿ ಒಂದು ತಮಗೆ ಅನರ್ಹತೆ ನೋಟಿಸ್ ನೀಡಿದ್ದನ್ನು ಪ್ರಶ್ನಿಸಿದೆ. ಮತ್ತೊಂದರಲ್ಲಿ, ಶಿವಸೇನೆಯ 42ಕ್ಕೂ ಹೆಚ್ಚು ಶಾಸಕರು ನಮ್ಮ ಬಣದಲ್ಲೇ ಇದ್ದಾಗ ಅದು ಹೇಗೆ ಏಕನಾಥ್ ಶಿಂಧೆಯನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ವಜಾಗೊಳಿಸಿ, ಆ ಹುದ್ದೆಗೆ ಅಜಯ್ ಚೌಧರಿಯನ್ನು ನೇಮಕ ಮಾಡಿದ್ದನ್ನು ಪ್ರಶ್ನಿಸಲಾಗಿದೆ. ಪ್ರಾರಂಭವಾದ ಕಾನೂನು ಹೋರಾಟದಲ್ಲಿ ಉದ್ಧವ್ ಠಾಕ್ರೆ ಬಣದ ಪರ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ದೇವದತ್ತ ಕಾಮತ್ ಪ್ರತಿನಿಧಿಸಲಿದ್ದಾರೆ. ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಲ್ವೆ ಮತ್ತು ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ಶಿಂಧೆ ಬಣದ ವಿರುದ್ಧ ವಾದ ಮಂಡಿಸಲಿದ್ದಾರೆ ಮತ್ತು ಡೆಪ್ಯೂಟಿ ಸ್ಪೀಕರ್ ವಿರುದ್ಧ ನರಹರಿ ಜೈರ್ವಾಲ್ ಕಾಂಗ್ರೆಸ್ ನಾಯಕ, ವಕೀಲ ಕಪಿಲ್ ಸಿಬಲ್ ಪ್ರತಿವಾದಿಸುವರು.
ಬಂಡಾಯ ಶಾಸಕರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಬೆಳಗ್ಗೆ 10.30 ಕ್ಕೆ ವಿಚಾರಣೆ ನಡೆಸಲಿದ್ದು, ಅದಕ್ಕೂ ಮೊದಲು ಏಕನಾಥ್ ಶಿಂಧೆ ಗುವಾಹಟಿಯಲ್ಲಿ ಸಭೆ ನಡೆಸಿದ್ದಾರೆ. ಶಿಂಧೆ ಬಣ ಸುಪ್ರೀಂಕೋರ್ಟ್‌ಗೆ ಹಾಜರಾಗುವುದಿಲ್ಲ. ಅವರಿಗೊಂದು ಲಿಂಕ್ ಕೊಡಲಾಗಿದ್ದು, ಸಂಪೂರ್ಣ ವಿಚಾರಣೆಯನ್ನು ಆನ್‌ಲೈನ್‌ನಲ್ಲಿಯೇ ವೀಕ್ಷಿಸಲಿದೆ. ಬಳಿಕ, ಬಂಡಾಯ ಶಾಸಕರಲ್ಲಿ ಒಬ್ಬರಾದ ಉದಯ್ ಸಾಮಂತ್ ಇಂದು (ಜೂ.೨೭) ಬೆಳಗ್ಗೆ 11 ಗಂಟೆಗೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಲೈವ್ ಬಂದು ಮಾತನಾಡಲಿದ್ದಾರೆ. ಹಾಗೇ, ಗುವಾಹಟಿಯಲ್ಲಿ ಮಧ್ಯಾಹ್ನ 2ಗಂಟೆಗೆ ಮತ್ತೊಂದು ಮಹತ್ವದ ಸಭೆ ನಡೆಯಲಿದೆ.
ಶಿಂಧೆ-ಠಾಕ್ರೆ ಫೋನ್‌ನಲ್ಲಿ ಮಾತುಕತೆ !
ಗುವಾಹಟಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಬೀಡುಬಿಟ್ಟಿರುವ ಏಕನಾಥ್ ಶಿಂಧೆ ಇಷ್ಟು ದಿನಗಳಲ್ಲಿ ಎರಡು ಬಾರಿ ಎಂಎನ್‌ಎಸ್ (ಮಹಾರಾಷ್ಟ್ರ ನವನಿರ್ಮಾಣ ಸೇನಾ)ಮುಖ್ಯಸ್ಥ ರಾಜ್ ಠಾಕ್ರೆಯವರೊಂದಿಗೆ ಫೋನ್‌ನಲ್ಲಿ ಮಾತುಕತೆ ನಡೆಸಿದ್ದಾರೆ. “ಮಹರಾಷ್ಟ್ರದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದೇವೆ. ಹಾಗೇ, ಶಿಂಧೆ ನನ್ನ ಆರೋಗ್ಯವನ್ನೂ ವಿಚಾರಿಸಿದರು” ಎಂದು ರಾಜ್ ಠಾಕ್ರೆ ತಿಳಿಸಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer: ಮತ್ತೆ ಮತ್ತೆ ಆಪರೇಷನ್ ಪಾಲಿಟಿಕ್ಸ್, ರಾಜಕೀಯ ಕೋಲಾಹಲ