ಮುಂಬಯಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಅರ್ಜಿಯನ್ನು ಸುಪ್ರೀಂಕೋರ್ಟ್ ನವೆಂಬರ್ 23ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರದ ಉನ್ನತ ನಿಯೋಗವೊಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಬಳಿ ಈ ಗಡಿ ವಿವಾದವನ್ನು ತೆಗೆದುಕೊಂಡು ಹೋಗಲು ನಿರ್ಧಾರ ಮಾಡಿದೆ. ತಾವು ಗಡಿ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ತಿಳಿಸಿದ್ದಾರೆ.
ಬೆಳಗಾವಿ, ಖಾನಾಪುರ, ನಿಪ್ಪಾಣಿ, ಬೀದರ್, ಬಾಲ್ಕಿ, ಕಾರವಾರ ಸೇರಿದಂತೆ ಕರ್ನಾಟಕ ಗಡಿಭಾಗದಲ್ಲಿರುವ 865 ಮರಾಠಿ ಭಾಷಿಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದು ಮಹಾರಾಷ್ಟ್ರ ಏಕೀಕರಣ ಸಮಿತಿಯ ಹಲವು ವರ್ಷಗಳ ವಾದ. ಈ ವಿಚಾರವನ್ನು ಇಟ್ಟುಕೊಂಡು 2004ರಲ್ಲಿ ಆ ರಾಜ್ಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. 19 ವರ್ಷಗಳಿಂದಲೂ ಈ ಬಗ್ಗೆ ಸುಪ್ರೀಂನಲ್ಲಿ ವಿಚಾರಣೆ ನಡೆಯುತ್ತಲೇ ಇದ್ದು, ಇದೀಗ ನವೆಂಬರ್ 23ರಂದು ಅಂತಿಮ ತೀರ್ಪು ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ತೀರ್ಪು ಕರ್ನಾಟಕದ ಪರ ಬಂದರೂ ಮಹಾರಾಷ್ಟ್ರ ಸರ್ಕಾರ ಅದನ್ನು ಅಲ್ಲಿಗೇ ಬಿಡುವಂತೆ ಕಾಣುತ್ತಿಲ್ಲ. ನವೆಂಬರ್ 21ರಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಗಡಿ ವಿವಾದ ಸಂಬಂಧ ಉನ್ನತ ಮಟ್ಟದ ಸಭೆ ನಡೆದಿತ್ತು. ಕರ್ನಾಟಕದೊಂದಿಗೆ ಇರುವ ಗಡಿ ಸಂಬಂಧ ವಿಚಾರಗಳ ಬಗ್ಗೆ ಸಮನ್ವಯತೆ ಸಾಧಿಸುವ ಸಲುವಾಗಿ ಮಹಾ ಸರ್ಕಾರ ಇಬ್ಬರು ಹಿರಿಯ ಸಚಿವರನ್ನು ನೇಮಕ ಮಾಡಿದೆ. ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ್ ಪಾಟೀಲ್ ಮತ್ತು ರಾಜ್ಯ ಅಬಕಾರಿ ಇಲಾಖೆ ಸಚಿವ ಶಂಭುರಾಜ್ ದೇಸಾಯಿ ಹೆಗಲ ಮೇಲೆ ಗಡಿ ವಿವಾದದ ಸಮನ್ವಯತೆಯ ಹೊಣೆ ಹೊರಿಸಲಾಗಿದೆ. ಇನ್ನು ನ.23ರ ಕಾನೂನು ಹೋರಾಟಕ್ಕಾಗಿ ಕಾನೂನು ತಜ್ಞ ವೈದ್ಯನಾಥನ್ ಅವರನ್ನೂ ಸರ್ಕಾರ ನೇಮಕ ಮಾಡಿಕೊಂಡಿದೆ.
ಸಹ್ಯಾದ್ರಿ ಗೆಸ್ಟ್ಹೌಸ್ನಲ್ಲಿ ನಡೆಸಲಾದ ಉನ್ನತ ಮಟ್ಟದ ಸಭೆಯಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪ್ರಥ್ವಿರಾಜ್ ಚೌಹಾಣ್, ಪರಿಷತ್ತಿನ ವಿಪಕ್ಷ ನಾಯಕ ಅಂಬಾದಾಸ್ ದಾನ್ವೆ, ಮಹಾರಾಷ್ಟ್ರ ಏಕೀಕರಣ ಸಮಿತಿ ಅಧ್ಯಕ್ಷ ಕಿರಣ್ ಠಾಕೂರ್ ಇತರರು ಇದ್ದರು. ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂದೆ ಬಣ, ಬಿಜೆಪಿಯೊಟ್ಟಿಗೆ ಸೇರಿ ಸರ್ಕಾರ ರಚನೆ ಮಾಡಿದ ಬಳಿಕ, ಗಡಿ ವಿವಾದ ಸಂಬಂಧಪಟ್ಟು ನಡೆಸಿದ ಮೊದಲ ಸಭೆ ಇದಾಗಿದೆ.
ಇದನ್ನು ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ | ಸುಪ್ರೀಂನಲ್ಲಿ ವಾದ ಮಂಡನೆಗೆ ವಕೀಲರ ತಂಡ ರಚಿಸಿದ ಬೊಮ್ಮಾಯಿ