ಮುಂಬಯಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ವಿಚಾರವಾಗಿ ಈಗ ಮಹಾರಾಷ್ಟ್ರ ಸರ್ಕಾರದಲ್ಲೇ ಅನಿಶ್ಚಿತತೆ ಉಂಟಾಗಿದೆ. ಏಕನಾಥ್ ಶಿಂಧೆ ಅವರ ಬಾಳಾಸಾಹೇಬಂಚಿ ಶಿವಸೇನಾ (BSS) ಮತ್ತು ಬಿಜೆಪಿ ನಡುವೆಯೇ ಸರಿಯಾದ ಸಮನ್ವಯತೆ ಇಲ್ಲದಂತಾಗಿದೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳುವಲ್ಲಿ, ಇಡೀ ವಿವಾದವನ್ನು ಸರಿಯಾಗಿ ನಿಭಾಯಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ಎಂದು ಮಹಾ ವಿಕಾಸ್ ಅಘಾಡಿ ಶಾಸಕರು, ಕಾರ್ಯಕರ್ತರು ಈಗಾಗಲೇ ಪ್ರತಿಭಟನೆ ನಡೆಸಿದ್ದಾರೆ. ಶಿಂಧೆ ನೇತೃತ್ವದ ಸರ್ಕಾರದ ವಿರುದ್ಧ ತಿರುಗಿಬಿದ್ದು, ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಈ ಮಧ್ಯೆ ಸರ್ಕಾರದಲ್ಲೇ ಹೊಂದಾಣಿಕೆಯಿಲ್ಲದಂತಾಗಿದೆ.
ಗಡಿ ವಿವಾದದ ವಿಷಯದಲ್ಲಿ ಕರ್ನಾಟಕದಲ್ಲಿ ಎಲ್ಲ ಪಕ್ಷಗಳೂ ಒಗ್ಗಟ್ಟು ಪ್ರದರ್ಶಿಸಿವೆ. ಅಷ್ಟಲ್ಲದೆ, ಗಡಿಯಲ್ಲಿ ವೃಥಾ ಜಗಳ ತೆಗೆದು, ಸಾಮರಸ್ಯ ಕದಡುತ್ತಿರುವ ಮಹಾರಾಷ್ಟ್ರ ಸರ್ಕಾರದ ನಡೆ ವಿರುದ್ಧ ಡಿ.22ರಂದು ಕರ್ನಾಟಕ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯವನ್ನೂ ಅಂಗೀಕರಿಸಲಾಗಿದೆ. ‘ಕರ್ನಾಟಕ ಸರ್ಕಾರ ಅಂಗೀಕರಿಸಿದ ನಿರ್ಣಯಕ್ಕೆ ಪ್ರತಿಯಾಗಿ, ಅದಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿಯಾದ, ಪ್ರಬಲವಾದ ಮತ್ತು ಆಕ್ರಮಣಕಾರಿ ನಿರ್ಣಯವನ್ನು ಸೋಮವಾರ (ಡಿ.26)ದಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಂಗೀಕಾರ ಮಾಡುತ್ತೇವೆ’ ಎಂದು ಅಲ್ಲಿನ ಅಬಕಾರಿ ಇಲಾಖೆ ಸಚಿವ ಶಂಭುರಾಜ್ ದೇಸಾಯಿ ಶುಕ್ರವಾರ (ಡಿ.23)ರಂದು ಘೋಷಿಸಿದ್ದರು.
ಆದರೆ ಕರ್ನಾಟಕ ಸರ್ಕಾರದ ನಡೆ ವಿರುದ್ಧದ ಇಂದು (ಡಿ.26) ಸದನದಲ್ಲಿ ನಿರ್ಣಯ ಅನುಷ್ಠಾನಕ್ಕೆ ಮಹಾರಾಷ್ಟ್ರದ ಶಿಂಧೆ ಬಣ ಉತ್ಸುಕವಾಗಿದ್ದರೂ ಬಿಜೆಪಿ ಈ ಬಗ್ಗೆ ಉತ್ಸಾಹ ತೋರುತ್ತಿಲ್ಲ ಎಂದು ಹೇಳಲಾಗಿದೆ. ವಿಧಾನಸಭೆಯಲ್ಲಿ ಇಂದು ಚರ್ಚೆಯಾಗಬೇಕಾದ ವಿಷಯಗಳ ಪಟ್ಟಿಯಲ್ಲಿ ಗಡಿ ವಿವಾದದ ವಿಚಾರದ ನಿರ್ಣಯದ ಬಗ್ಗೆ ಪ್ರಸ್ತಾಪವೇ ಇಲ್ಲ. ‘ನಾವೆಷ್ಟೇ ಮುನ್ನುಗ್ಗುತ್ತಿದ್ದರೂ ಬಿಜೆಪಿ ಯಾಕೋ ಈ ಬಗ್ಗೆ ಹೆಚ್ಚಿನ ಉತ್ಸಾಹ ತೋರುತ್ತಿಲ್ಲ. ತಕ್ಷಣವೇ ನಿರ್ಣಯ ಅಂಗೀಕಾರ ಬೇಡ ಎಂದು ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಈ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುತ್ತಿದೆ’ ಎಂದು ಬಿಎಸ್ಎಸ್ (ಬಾಳಾಸಾಹೇಬಂಚಿ ಶಿವಸೇನಾ) ನಾಯಕರು ಹೇಳಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
‘ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಪಟ್ಟು ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಸೋಮವಾರವೇ ನಿರ್ಣಯ ಅಂಗೀಕರಿಸಲು ನಾವು ಸಿದ್ಧರಾಗಿದ್ದೆವು. ಆದರೆ ಇಂದು ನಿರ್ಣಯ ಮಂಡನೆ ಆಗುವ ಸಾಧ್ಯತೆ ಇಲ್ಲ. ಕರ್ನಾಟಕದಲ್ಲಿ ಮುಂದಿನ ವರ್ಷ ಪ್ರಾರಂಭದಲ್ಲೇ ವಿಧಾನಸಭೆ ಚುನಾವಣೆ ನಡೆಯುವುದರಿಂದ ಬಿಜೆಪಿ ಈ ನಿರ್ಣಯ ಅಂಗೀಕಾರಕ್ಕೆ ಹಿಂದೇಟು ಹಾಕುತ್ತಿರುವಂತಿದೆ. ಚುನಾವಣೆಯಲ್ಲಿ ಲಾಭ ಪಡೆಯುವ ಪ್ರಯತ್ನ ಮಾಡುತ್ತಿದೆ. ಕರ್ನಾಟಕದ ನಿರ್ಣಯಕ್ಕೆ ವಿರುದ್ಧವಾಗಿ ನಿರ್ಣಯ ಅಂಗೀಕಾರ ಮಾಡುವ ವಿಷಯದಲ್ಲಿ ಮಹಾರಾಷ್ಟ್ರ ಬಿಜೆಪಿ ನಾಯಕರು ಇಬ್ಭಗೆಯ ನೀತಿ ಅಳವಡಿಸಿಕೊಂಡಿದ್ದಾರೆ. ಅವರು ಚುನಾವಣೆ ದೃಷ್ಟಿಯಿಂದ ನೋಡುತ್ತಿದ್ದಾರೆ. ಹೀಗಾಗಿ ನಿರ್ಣಯ ಮಂಡನೆ ವಿಚಾರದಲ್ಲಿ ಇನ್ನೂ ಒಂದು ಅಂತಿಮ ನಿರ್ಧಾರವೇ ಆಗಿಲ್ಲ. ಮುಂದಿನ ವಾರ ಮಂಡನೆಯಾಗಬಹುದು’ ಎಂದು ಶಿಂಧೆ ಬಣದ ನಾಯಕರೊಬ್ಬರು ಮಾಧ್ಯಮಕ್ಕೆ ಹೇಳಿದ್ದಾರೆ.
ಇದನ್ನೂ ಓದಿ: Border Dispute | ಮುಂದುವರಿದ ಮಹಾಕ್ಯಾತೆ; ಬೊಮ್ಮಾಯಿ ವಿರುದ್ಧ ಪ್ರಧಾನಿ ಮೋದಿಗೆ ಮಾನೆ ಸುಳ್ಳು ದೂರು!