ಮುಂಬೈ: ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಮುಂಬೈನಿಂದ ಕಳಿಸಿದರೆ ಮಹಾರಾಷ್ಟ್ರ ರಾಜ್ಯದಲ್ಲಿ ಹಣವೇ ಇರುವುದಿಲ್ಲ. ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯುವುದಿಲ್ಲ ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಹೇಳಿದ್ದ ಮಾತುಗಳಿಗೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಕೋಶ್ಯಾರಿ ಸ್ಪಷ್ಟೀಕರಣ ನೀಡಿದ್ದಾರೆ. ʼಮರಾಠಿಗರನ್ನು ಅವಮಾನಿಸುವ, ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ. ರಾಜಸ್ಥಾನ ಮತ್ತು ಗುಜರಾತ್‌ಗಳಿಂದ ಇಲ್ಲಿಗೆ ಬಂದು ನೆಲೆಸಿ, ತಮ್ಮ ವ್ಯಾಪಾರ-ಉದ್ಯಮಗಳ ಮೂಲಕ ಅವರು ರಾಜ್ಯಕ್ಕೆ ಕೊಡುತ್ತಿರುವ ಕೊಡುಗೆಯನ್ನು ಹೇಳುವುದಷ್ಟೇ ನನ್ನ ಆಶಯವಾಗಿತ್ತು. ಮಹಾರಾಷ್ಟ್ರದ ಅಭಿವೃದ್ಧಿಯಲ್ಲಿ ಇಲ್ಲಿನ ಮರಾಠಿಗರ ಪರಿಶ್ರಮ, ಪಾತ್ರ ಬಹುದೊಡ್ಡದುʼ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲರ ಮಾತುಗಳಿಗೆ ಶಿವಸೇನೆಯ ಉದ್ಧವ್ ಠಾಕ್ರೆ, ಸಂಜಯ್ ರಾವತ್, ಪ್ರಿಯಾಂಕಾ ಚತುರ್ವೇದಿ, ಕಾಂಗ್ರೆಸ್ ನಾಯಕರು, ಎನ್‌ಸಿಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಾಗೇ, ಮಹಾರಾಷ್ಟ್ರದಲ್ಲಿ ನಿಂತು ಮರಾಠಿಗರನ್ನು ಅವಮಾನಿಸಿದ ಕೋಶ್ಯಾರಿ ಕೂಡಲೇ ರಾಜೀನಾಮೆ ಕೊಡಬೇಕು ಎಂದೂ ಆಗ್ರಹಿಸಿದ್ದಾರೆ. ಉದ್ಧವ್ ಠಾಕ್ರೆ ಮಾತನಾಡಿ, “ಕೋಶ್ಯಾರಿ ಅವರು ತಮ್ಮೆಲ್ಲ ಮಿತಿಯನ್ನೂ ಮೀರುತ್ತಿದ್ದಾರೆ. ಅವರು ತಮ್ಮ ಹುದ್ದೆಗೆ ಗೌರವ ಕೊಡಬೇಕು. ಕೂಡಲೇ ಕ್ಷಮೆ ಕೇಳಬೇಕು” ಎಂದು ಹೇಳಿದ್ದರು.
ಆದಿತ್ಯ ಠಾಕ್ರೆಯವರೂ ಸಹ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಯನ್ನು ಟೀಕಿಸಿದ್ದಾರೆ. ನಮ್ಮ ರಾಜ್ಯಪಾಲರು ಮಹಾರಾಷ್ಟ್ರ ವಿರೋಧಿ, ಮರಾಠಿಗರ ವಿರೋಧಿ. ಕೋಶ್ಯಾರಿ ತಮ್ಮ ಹೇಳಿಕೆ ಮೂಲಕ ಮಹಾರಾಷ್ಟ್ರದ ಪ್ರತಿ ನಾಗರಿಕನಿಗೆ, ಈ ಮಣ್ಣಿನಲ್ಲಿ ಹುಟ್ಟಿ, ನೆಲಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಅನೇಕರಿಗೆ ಅವಮಾನ ಮಾಡಿದ್ದಾರೆ ಎಂದು ಆದಿತ್ಯ ಠಾಕ್ರೆ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಕೂಡ ಟ್ವೀಟ್ ಮಾಡಿ, ಮಹಾರಾಷ್ಟ್ರ ರಾಜ್ಯಪಾಲರ ಹೇಳಿಕೆ ಖಂಡಿಸಿದ್ದಾರೆ. ‘ತಾವೊಬ್ಬ ರಾಜ್ಯಪಾಲರಾಗಿ ಏನು ಮಾತನಾಡಬೇಕು. ಏನು ಮಾಡಬೇಕು ಎಂಬ ಅರಿವು ಅವರಿಗೆ ಇಲ್ಲ. ಕುರ್ಚಿಯಲ್ಲಿ ಕುಳಿತು, ಇನ್ನೊಬ್ಬರು ಹೇಳಿದಂತೆ ಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ತಾನು ಯಾವ ರಾಜ್ಯದ ರಾಜ್ಯಪಾಲರು ಎಂಬುದನ್ನು ಕೋಶ್ಯಾರಿ ಮರೆಯಬಾರದು. ಇಲ್ಲೇ ಇದ್ದುಕೊಂಡು ಅವರು ಇಲ್ಲಿನ ಜನರನ್ನೇ ದೂಷಿಸುತ್ತಿದ್ದಾರೆ. ಕೋಶ್ಯಾರಿ ಆಳ್ವಿಕೆಯಲ್ಲಿ ಮಹಾರಾಷ್ಟ್ರದ ರಾಜಕೀಯ ಸಂಪ್ರದಾಯ ಮತ್ತು ರಾಜ್ಯಪಾಲ ಹುದ್ದೆಯ ಗೌರವ ಕಳೆದು ಹೋಗಿದೆ. ಅದರ ಜತೆಗೆ ಮಹಾರಾಷ್ಟ್ರದ ಘನತೆಯನ್ನೂ ಅವರು ಕುಗ್ಗಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ರಾಜ್ಯಪಾಲ ಕೋಶ್ಯಾರಿ ಭಾಷಣ ವಿವಾದ; ತಿರುಗಿಬಿದ್ದ ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ