ಮುಂಬಯಿ: ಮಹಾರಾಷ್ಟ್ರ ಕಾಂಗ್ರೆಸ್ನಲ್ಲಿ ನಾಯಕರ ನಡುವೆ ವೈಮನಸ್ಯ ಶುರುವಾಗಿದೆ. ಅದರ ಭಾಗವಾಗಿ ಈಗ ಹಿರಿಯ ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೋರಟ್ (Balasaheb Thorat) ಅವರು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರೊಂದಿಗೆ ಸೌಹಾರ್ದಯುತವಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ನಿನ್ನೆಯಷ್ಟೇ ಅವರು ಪಕ್ಷದ ವರಿಷ್ಠರಿಗೆ ತಿಳಿಸಿದ್ದರು. ಅದರ ಬೆನ್ನಲ್ಲೇ ರಾಜೀನಾಮೆ ನೀಡಿದ್ದಾರೆ. ಬಾಳಾಸಾಹೇಬ್ ಥೋರಟ್ ರಾಜೀನಾಮೆ ಹಿಂಪಡೆಯಲು ಒಪ್ಪುತ್ತಿಲ್ಲ. ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಫೆ.2ರಂದು ಬಾಳಾಸಾಹೇಬ್ ಥೋರಟ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕಳಿಸಿದ್ದಾರೆ. ಅದರಲ್ಲಿ ನಾನಾ ಪಟೋಲೆ ಒಬ್ಬ ದುರಹಂಕಾರಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ‘ಪಕ್ಷದಲ್ಲಿ ನಾನೊಬ್ಬ ಹಿರಿಯ ನಾಯಕ. ಆದರೆ ಗೌರವ ಸಿಗುತ್ತಿಲ್ಲ. ಪಕ್ಷದವರೇ ಕೆಲವರು ಸೇರಿಕೊಂಡು ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ನನಗೆ ನನ್ನ ಹುದ್ದೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಅವರ ನಿಕಟಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಮಹಾರಾಷ್ಟ್ರ ರಾಜ್ಯಪಾಲ ಕೋಶ್ಯಾರಿ ಭಾಷಣ ವಿವಾದ; ತಿರುಗಿಬಿದ್ದ ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಪಕ್ಷಕ್ಕೆ ಸಂಬಂಧಪಟ್ಟ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗಲೂ ನನ್ನನ್ನು ಕೇಳುವುದಿಲ್ಲ. ಒಮ್ಮೆಯೂ ಸಮಾಲೋಚಿಸುವುದಿಲ್ಲ. ನನ್ನ ಹಿರಿತನಕ್ಕೆ, ಹುದ್ದೆಗೆ ಬೆಲೆಯಿಲ್ಲ ಎಂದೂ ಥೋರಟ್ ಆರೋಪಿಸಿದ್ದಾರೆ. ಆದರೆ ನಾನಾ ಪಟೋಲೆ ಈ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಬಾಳಾಸಾಹೇಬ್ ಥೋರಟ್ಗೆ ಅವಮಾನ ಮಾಡುವಂಥದ್ದು ನಾನೇನೂ ಮಾಡಿಲ್ಲ ಎಂದಿದ್ದಾರೆ.