Site icon Vistara News

Maharashtra Politics: ಪ್ರತಿಪಕ್ಷ ಕೂಟಕ್ಕೆ ಬಿಜೆಪಿಯಿಂದ ‘ಮಹಾ’ ಹೊಡೆತ; ಎನ್​ಸಿಪಿಯ 9 ಶಾಸಕರಿಗೆ ಮಂತ್ರಿಗಿರಿ

Ajit pawar Devendra fadnavis Eknath Shinde In Raj Bhavan

ಮಹಾರಾಷ್ಟ್ರ ರಾಜಕಾರಣದಲ್ಲಿ (Maharashtra Politics)ಈಗ ಮತ್ತೊಂದು ‘ಮಹಾ’ ಬದಲಾವಣೆ ಆಗಿದೆ. ಎನ್​ಸಿಪಿ ನಾಯಕ ಅಜಿತ್ ಪವಾರ್ (Ajit Pawar)​ ಇಷ್ಟುದಿನ ಪಕ್ಷದೊಳಗೆ ಮುಸುಕಿನಲ್ಲೇ ಗುದ್ದಾಟ ನಡೆಸಿ, ಇದೀಗ ಬಹಿರಂಗ ಸಮರ ಸಾರಿದ್ದಾರೆ. ಮಹಾರಾಷ್ಟ್ರದ ಶಿವಸೇನೆ (ಏಕನಾಥ ಶಿಂದೆ ಬಣ) -ಬಿಜೆಪಿ ಮೈತ್ರಿ ಪಕ್ಷವನ್ನು ಸೇರಿಕೊಂಡಿದ್ದಾರೆ. ಅವರು ತಾವಷ್ಟೇ ಹೋಗಿಲ್ಲ, ತಮ್ಮೊಂದಿಗೆ ಹಲವು ಶಾಸಕರನ್ನೂ ಕರೆದುಕೊಂಡು ಹೋಗಿದ್ದಾರೆ. ಅದರಲ್ಲಿ ಇಂದು ಅಜಿತ್​ ಪವಾರ್ ಮತ್ತು ಇತರ 8 ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅಂದಹಾಗೇ, ಅಜಿತ್ ಪವಾರ್​ ಜತೆ ಇಂದು ಶಿಂದೆ ಸಂಪುಟ ಸೇರಿದವರು ಧರ್ಮರಾವ್ ಅತ್ರಮ್, ಸುನಿಲ್ ವಲ್ಸಾಡೆ, ಅದಿತಿ ತತ್ಕರೆ, ಹಸನ್ ಮುಶ್ರೀಫ್, ಛಗನ್ ಭುಜಬಲ್, ಧನನಿ ಮುಂಡೆ, ಅನಿಲ್ ಪಾಟೀಲ್, ದಿಲೀಪ್ ವಲ್ಸೆ ಪಾಟೀಲ್.

ಶಿವಸೇನೆ ಎರಡು ಬಣವಾಯಿತು. ಇದೀಗ ಎನ್​ಸಿಪಿ ಕೂಡ ಒಡೆದು ಚೂರಾಯಿತು. ಎನ್​ಸಿಪಿಯ 53 ಶಾಸಕರಲ್ಲಿ ಅಜಿತ್​ ಪವಾರ್​ಗೆ 43 ಶಾಸಕರ ಬೆಂಬಲ ಇದೆ ಎಂದು ಬಿಜೆಪಿ ಹೇಳಿದೆ. ಇತ್ತ ಅಜಿತ್ ಪವಾರ್ ಕೂಡ ಅದನ್ನೇ ಹೇಳಿದ್ದಾರೆ. ತನ್ನೊಂದಿಗೆ 40ಕ್ಕೂ ಹೆಚ್ಚು ಶಾಸಕರು ಇದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಅಜಿತ್ ಪವಾರ್ ಅವರು ನಿನ್ನೆ ಮುಂಬಯಿಯ ತಮ್ಮ ನಿವಾಸದಲ್ಲಿ ಸಭೆಯೊಂದನ್ನು ನಡೆಸಿದ್ದರು. ಈ ಸಭೆ ಬಗ್ಗೆ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ಗೆ ಗೊತ್ತಿರಲಿಲ್ಲ. ಆದರೆ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಪಾಲ್ಗೊಂಡಿದ್ದರು. ತುಂಬ ಹೊತ್ತು ಸಭೆ ನಡೆದು, ವ್ಯಾಪಕವಾಗಿ ಚರ್ಚೆ ನಡೆದಿತ್ತು. ಅದರ ಬೆನ್ನಲ್ಲೇ ಇಂದು ಎನ್​ಸಿಪಿ ಇಬ್ಭಾಗವಾಗಿದೆ.

ಶಿವಸೇನೆ ಇಬ್ಭಾಗವಾದ ಮೇಲೆ ಮಹಾರಾಷ್ಟ್ರದಲ್ಲಿ ಎನ್​ಸಿಪಿ ಬಹುದೊಡ್ಡ ಪಕ್ಷವಾಗಿತ್ತು. ಹೀಗಾಗಿ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ಈ ಪಕ್ಷಕ್ಕೆ ಮೀಸಲಿತ್ತು. ಅಜಿತ್ ಪವಾರ್​ ಈ ಸ್ಥಾನದಲ್ಲಿ ಇದ್ದರು. ಆದರೀಗ ಅವರು ಪ್ರತಿಪಕ್ಷ ನಾಯಕನ ಸ್ಥಾನದಿಂದ ಆಡಳಿತ ಸರ್ಕಾರದ ಪ್ರಮುಖ ಹುದ್ದೆಗೆ ಏರಿದ್ದಾರೆ. ಎನ್​ಸಿಪಿಯಿಂದ ಒಟ್ಟು 9 ಮಂತ್ರಿಗಳು ಮಹಾ ಸಂಪುಟ ಸೇರಿದ್ದಾರೆ. ಅಲ್ಲಿಗೆ ಶಿವಸೇನೆ (ಶಿಂದೆ ಬಣ)ಯ 9 ಸಚಿವರು, ಬಿಜೆಪಿಯ 9 ಸಚಿವರು ಮತ್ತು ಎನ್​ಸಿಪಿಯ 9 ಸಚಿವರು ಸಂಪುಟದಲ್ಲಿ ಇದ್ದಂತಾಯಿತು. ಹಾಗೇ, ಇನ್ಮುಂದೆ ಮಹಾರಾಷ್ಟ್ರಕ್ಕೆ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಇಬ್ಬರೂ ಉಪಮುಖ್ಯಮಂತ್ರಿಗಳಾಗಿರುತ್ತಾರೆ.

ತ್ರಿಬ್ಬಲ್ ಎಂಜಿನ್ ಸರ್ಕಾರ!
ಅಜಿತ್ ಪವಾರ್ ಮತ್ತು ಬೆಂಬಲಿಗರು ಸರ್ಕಾರದ ಭಾಗವಾಗುತ್ತಿದ್ದಂತೆ ಸಿಎಂ ಏಕನಾಥ್ ಶಿಂದೆ ಫುಲ್ ಖುಷಿಯಾಗಿದ್ದಾರೆ. ಮಹಾರಾಷ್ಟ್ರಕ್ಕೀಗ ಒಬ್ಬರು ಮುಖ್ಯಮಂತ್ರಿ, ಇಬ್ಬರು ಉಪಮುಖ್ಯಮಂತ್ರಿಗಳು. ಇದು ಡಬಲ್​ ಎಂಜಿನ್​ ಸರ್ಕಾರವಲ್ಲ. ತ್ರಿಬಲ್​ ಎಂಜಿನ್ ಸರ್ಕಾರ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ನಾನು ಅಜಿತ್ ಪವಾರ್ ಮತ್ತು ಎನ್​ಸಿಪಿಯ ಇತರ ನಾಯಕರನ್ನು ಸ್ವಾಗತಿಸುತ್ತಿದ್ದೇನೆ. ಅಜಿತ್ ಪವಾರ್​ ಅವರ ಆಡಳಿತಾನುಭವ ನಮಗೆ ತುಂಬ ಸಹಾಯವಾಗುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: Ajit Pawar: ಒಡೆಯಿತು ಎನ್​ಸಿಪಿ; ಶಿಂದೆ ಸರ್ಕಾರ ಸೇರಿದ ಅಜಿತ್ ಪವಾರ್ ‘ಮಹಾ’ ಉಪಮುಖ್ಯಮಂತ್ರಿ!

ಕಪಿಲ್ ಸಿಬಲ್ ವ್ಯಂಗ್ಯ

ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ಸಂಚಲನವಾಗಿ, ಎನ್​ಸಿಪಿಯೂ ಇಬ್ಭಾಗವಾಗುತ್ತಿದ್ದಂತೆ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಎನ್​ಸಿಪಿಯಲ್ಲಿ ಒಡಕು ಮೂಡಲು ಬಿಜೆಪಿಯೇ ಕಾರಣ ಎನ್ನುತ್ತಿದ್ದಾರೆ. ಕಾಂಗ್ರೆಸ್ ಮಾಜಿ ನಾಯಕ ಕಪಿಲ್ ಸಿಬಲ್ ಟ್ವೀಟ್ ಮಾಡಿ ‘ಇತ್ತೀಚೆಗೆ ಯುಸ್​ ಸಂಸತ್​​ನಲ್ಲಿ ಪ್ರಧಾನಿ ಮೋದಿ ಮಾತನಾಡುತ್ತ ಭಾರತವು ಪ್ರಜಾಪ್ರಭುತ್ವದ ತಾಯಿ ಎಂದು ಹೇಳಿದ್ದರು. ಇದೇ ಇರಬೇಕು ಅವರು ಹೇಳಿದ್ದು ಎಂದು ವ್ಯಂಗ್ಯವಾಡಿದ್ದಾರೆ. ಹಾಗೇ, ಶಿವಸೇನೆ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಪ್ರತಿಕ್ರಿಯೆ ನೀಡಿ ‘ಕೆಲವರು ಮಹಾರಾಷ್ಟ್ರ ರಾಜಕಾರಣವನ್ನು ಸಂಪೂರ್ಣ ನಾಶ ಮಾಡುತ್ತಿದ್ದಾರೆ. ಇದನ್ನು ಇಲ್ಲಿನ ಜನರು ಸಹಿಸಿಕೊಳ್ಳುವುದಿಲ್ಲ. ಶರದ್ ಪವಾರ್ ಯಾವತ್ತಿಗೂ ಶಿವಸೇನೆ ಉದ್ಧವ್ ಠಾಕ್ರೆ ಬಣದೊಂದಿಗೆ ನಿಲ್ಲುವ ಭರವಸೆ ಕೊಟ್ಟಿದ್ದಾರೆ’ ಎಂದು ಹೇಳಿದ್ದಾರೆ.

Exit mobile version