Site icon Vistara News

Arun Manilal Gandhi: ಮಹಾತ್ಮ ಗಾಂಧಿ ಮೊಮ್ಮಗ ಅರುಣ್ ಮಣಿಲಾಲ್ ಗಾಂಧಿ ನಿಧನ

Mahatma Gandhi Grandson Arun Manilal Gandhi Died In Maharashtra

#image_title

ಕೊಲ್ಹಾಪುರ: ಮಹಾತ್ಮ ಗಾಂಧಿ ಅವರ ಮೊಮ್ಮಗ ಅರುಣ್ ಮಣಿಲಾಲ್​ ಗಾಂಧಿ (Arun Manilal Gandhi) ಇಂದು ಮುಂಜಾನೆ ನಿಧನರಾಗಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ನಗರದ ಸಮೀಪ ಇರುವ ಹಣಬರವಾಡಿಯ ಮಹಿಳಾ ಮತ್ತು ಮಕ್ಕಳ ಅನಾಥಾಶ್ರಮ ಅವನಿ ಸಂಸ್ಥೆಯಲ್ಲಿ ಅವರು ಉಸಿರು ನಿಲ್ಲಿಸಿದ್ದಾರೆ. ಅರುಣ್ ಮಣಿಲಾಲ್​ ಗಾಂಧಿ ಅವರು ಫೆ.28ರಂದು ಅವನಿ ಸಂಸ್ಥೆಗೆ (Avani Sanstha Kolhapur) ಆಗಮಿಸಿದ್ದರು. 10ದಿನಗಳ ಕಾಲ ಇಲ್ಲಿ ನೆಲೆಸುವುದಾಗಿ ಹೇಳಿ ಅವನಿಗೆ ಬಂದಿದ್ದ ಅವರಿಗೆ ಅನಾರೋಗ್ಯ ಕಾಡಿತ್ತು. ಹೀಗಾಗಿ ಅಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು. ಅಂತಿಮವಾಗಿ ಅಲ್ಲೇ ಉಸಿರು ಚೆಲ್ಲಿದ್ದಾರೆ. ಅರುಣ್ ಗಾಂಧಿಗೆ 89ವರ್ಷ ವಯಸ್ಸಾಗಿತ್ತು.

ಸಾಮಾಜಿಕ ಕಾರ್ಯಕರ್ತೆ ಅನುರಾಧಾ ಬೋಸ್ಲೆ ಅವರು ಸಂಸ್ಥಾಪಿಸಿ, ಮುನ್ನಡೆಸುತ್ತಿರುವ ಅವನಿ ಸಂಸ್ಥೆಗೆ ಅರುಣ್ ಮಣಿಲಾಲ್​ ಗಾಂಧಿಯವರು ಕಳೆದ 24ವರ್ಷಗಳಿಂದ ಆಗಾಗ ಭೇಟಿ ಕೊಡುತ್ತಿದ್ದರು. ಅಂತೆಯೇ ಈ ಫೆಬ್ರವರಿ 28ರಂದು ಕೂಡ ಬಂದಿದ್ದರು. ಮುಂದೆ ಏನಾಯಿತು ಎಂಬುದನ್ನು ಅನುರಾಧಾ ಬೋಸ್ಲೆ ಅವರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. ‘10 ದಿನ ಇರುವುದಾಗಿ ಹೇಳಿ ಬಂದಿದ್ದರು. ಆದರೆ ಹೊರಡಬೇಕು ಎಂದಾಗ ಜ್ವರ ಶುರುವಾಯಿತು. ಅದೊಂದು ಸಹಜ ಜ್ವರವಾಗಿತ್ತು. ಆದರೂ ನಾವು ಅವರನ್ನು ಆಸ್ಟರ್ ಆಧಾರ್ ಆಸ್ಪತ್ರೆಗೆ ದಾಖಲು ಮಾಡಿದ್ದೆವು. ಚೇತರಿಸಿಕೊಂಡು ವಾಪಸ್​ ಅವನಿಗೆ ಬಂದಿದ್ದರು. ಪ್ರಯಾಣ ಮಾಡುವಂತಿಲ್ಲ ಎಂದು ಅರುಣ್ ಮಣಿಲಾಲ್​ ಗಾಂಧಿಯವರಿಗೆ ವೈದ್ಯರು ಹೇಳಿದ್ದರು. ಹಾಗಾಗಿ ನಾವವರನ್ನು ಅವನಿ ಸಂಸ್ಥೆಯಲ್ಲಿಯೇ ಉಳಿಸಿಕೊಂಡಿದ್ದೆವು‘.

’ನಾವು ಸೋಮವಾರ ಸಂಜೆ ನಮ್ಮ ಸಂಸ್ಥೆಯಲ್ಲಿ ಮಹಾರಾಷ್ಟ್ರ ದಿನವನ್ನು ಆಚರಿಸಿದ್ದೇವೆ. ಈ ವೇಳೆ ಇಲ್ಲಿರುವ ಬಾಲಕಿಯರು/ಮಹಿಳೆಯರನ್ನೆಲ್ಲ ಉದ್ದೇಶಿಸಿ ಮಾತನಾಡಿದ್ದರು. ‘ಪ್ರತಿಯೊಬ್ಬರಿಗೂ ನಮ್ಮ ದೇಶ/ನಮ್ಮ ರಾಜ್ಯ ಎಂಬುದು ಎಲ್ಲಕ್ಕಿಂತ ಮೊದಲ ಆದ್ಯತೆಯಾಗಬೇಕು’ ಎಂದು ಹೇಳಿದ್ದರು. ಅದೇನೋ ತಡರಾತ್ರಿಯವರೆಗೂ ಬರೆಯುತ್ತ ಕುಳಿತಿದ್ದರು, ಬೆಳಗ್ಗೆ ಹೊತ್ತಿಗೆ ನಿಧನರಾಗಿದ್ದಾರೆ. ಬೆಡ್​ ಮೇಲೆ ಮಲಗಿದ್ದಂತೆ ಇನ್ನಿಲ್ಲವಾಗಿದ್ದಾರೆ’ ಎಂದು ಅನುರಾಧಾ ಬೋಸ್ಲೆ ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ರಾಹುಲ್ ಆಧುನಿಕ ಭಾರತದ ಮಹಾತ್ಮ ಗಾಂಧಿ ಹಾಗೂ ರಾಷ್ಟ್ರ ಪುತ್ರ! ಹೀಗೆ ಹೇಳಿದ್ದು ಯಾರು?

ಅರುಣ್ ಗಾಂಧಿ ಹುಟ್ಟಿದ್ದು ದಕ್ಷಿಣ ಆಫ್ರಿಕಾದಲ್ಲಿ. ನಂತರ ಭಾರತಕ್ಕೆ ಬಂದು ನೆಲೆಸಿದ್ದಾರೆ. ಇವರ ತಂದೆ ಮಣಿಲಾಲ್​ ಗಾಂಧಿ. ತಾಯಿ ಸುಶೀಲಾ ಮಶ್ರುವಾಲಾ. ತುಷಾರ್​ ಗಾಂಧಿ ಸೇರಿ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಸುರ್ನಂದಾ ಅವರು 2007ರಲ್ಲಿಯೇ ಮೃತಪಟ್ಟಿದ್ದಾರೆ. ಅರುಣ್ ಗಾಂಧಿ ಪಾರ್ಥಿವ ಶರೀರವಿದ್ದ ಅವನಿಗೆ ಪುತ್ರ ತುಷಾರ್ ಗಾಂಧಿ ಭೇಟಿ ಕೊಟ್ಟಿದ್ದು, ವಾಶಿ ನಂದ್ವಾಲಾದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.

Exit mobile version