Site icon Vistara News

Independence Day 2023 : ಹೀಗಿತ್ತು ಗಾಂಧೀಜಿ ಮತ್ತು ಕರ್ನಾಟಕದ ನಂಟು…

mahatma gandhi

ಗಾಂಧೀಜಿ ಭಾರತದ ಪಿತಾಮಹ. ಶಾಂತಿಯ ಮಾರ್ಗದಲ್ಲೇ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮರವರು. ಸ್ವಾತಂತ್ರ್ಯಕ್ಕಾಗಿ ಗಾಂಧಿಜಿ ಅವರು ಪೂರ್ತಿ ದೇಶವನ್ನೇ ಒಂದು ಮಾಡುವ ಕೆಲಸ ಮಾಡಿದರು. ಅದರಲ್ಲೂ ನಮ್ಮ ಕರ್ನಾಟಕದ ನೆಲಕ್ಕೂ ಹಲವಾರು ಬಾರಿ ಬಂದು, ಇಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದವರು. ಸ್ವಾತಂತ್ರ್ಯ ಮತ್ತು ಸ್ವದೇಶಿ ವಸ್ತುಗಳ ಬಳಕೆ ಎಷ್ಟು ಮುಖ್ಯ ಎನ್ನುವುದನ್ನು ಸಾರಿದವರು. ಅವರ ಮತ್ತು ಕರ್ನಾಟಕದ ನಂಟಿನ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.

ನಿಮಗೆಲ್ಲರಿಗೆ ತಿಳಿದಿರುವ ಹಾಗೆ ಗಾಂಧೀಜಿ ಅವರು ಆಫ್ರಿಕಾದಿಂದ ಭಾರತಕ್ಕೆ ಮರಳಿದ್ದು 1915ರ ಜನವರಿ 9ರಂದು. ಆಫ್ರಿಕಾದಿಂದ ಬಂದೊಡನೆ ಗುರುಗಳಾದ ಗೋಖಲೆ ಅವರನ್ನು ಕಂಡು, ಅವರ ಮಾರ್ಗದರ್ಶನದ ಮೇರೆಗೆ ದೇಶದ ಪರ್ಯಟನೆಯನ್ನು ಆರಂಭಿಸಿದರು. ದೇಶದ ಮೂಲೆಮೂಲೆಗೆ ತೆರಳಿ ಸ್ವಾತಂತ್ರ್ಯದ ಮಹತ್ವವನ್ನು ಸಾರಲಾರಂಭಿಸಿದರು. ಈ ಮಧ್ಯೆ ಗೋಖಲೆ ಅವರು ನಿಧನರಾಗುತ್ತಾರೆ. ಇದೇ ಘಟನೆಯಿಂದಾಗಿ ಗಾಂಧಿ ಅವರು ಕರ್ನಾಟಕಕ್ಕೆ ಬರುವಂತಾಯಿತು. ಅವರು ಮೊದಲನೇ ಬಾರಿಗೆ 1915ರ ಮೇ 8ರಂದು ಕರ್ನಾಟಕಕ್ಕೆ ಬಂದಿಳಿದರು.

ಗಾಂಧೀಜಿ ಅವರು ಮೊದಲನೇ ಬಾರಿಗೆ ಕರ್ನಾಟಕಕ್ಕೆ ಬಂದಾಗ ಅವರ ಜತೆ ಅವರ ಪತ್ನಿ ಕಸ್ತೂರಬಾ ಬಾಯಿ ಅವರೂ ಬಂದಿದ್ದರು. ಅವರನ್ನು ಸ್ವಾಗತ ಮಾಡಲೆಂದು ರೈಲು ನಿಲ್ದಾಣದಲ್ಲಿ ದೊಡ್ಡ ಜನಸ್ತೋಮವೇ ಸೇರಿತ್ತು. ಅವರನ್ನು ಕುದುರೆ ಮೇಲೆ ಮೆರವಣಿಗೆ ಮಾಡಿಕೊಂಡು ಹೋಗಲು ಯುವಕರು ಸಿದ್ಧರಾಗಿದ್ದರು. ಆದರೆ ಹಾಗೆ ಮಾಡುವುದರಿಂದ ಪ್ರಾಣಿಹಿಂಸೆ ಮಾಡಿದಂತಾಗುತ್ತದೆ ಎಂದು ಗಾಂಧಿ ಅದನ್ನು ನಿರಾಕರಿಸಿದರು. ನಂತರ ಬೆಂಗಳೂರಿನ ಆನಂದರಾವ್‌ ವೃತ್ತದಲ್ಲಿದ್ದ ಬಿ.ಎಸ್‌.ಕೃಷ್ಣಸ್ವಾಮಿ ಅಯ್ಯಂಗಾರ್‌ ಅವರ ಮನೆಗೆ ಕಾಲ್ನಡಿಗೆಯಲ್ಲೇ ಸಾಗಿದರು. ಅಲ್ಲಿಂದ ಈಗಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಾಗಿ ಅಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಗೋಖಲೆ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದ ಅವರು ನಂತರ ಅಲ್ಲಿಂದ ಲಾಲ್‌ಬಾಗ್‌ಗೆ ತೆರಳಿ ಅಲ್ಲಿ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇದನ್ನೂ ಓದಿ: Independence day 2023 : ಮೈಸೂರು ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ; ಬ್ರಿಟಿಷರ ಬೆವರಿಳಿಸಿದ ದೇಶ ಭಕ್ತರು
ಬೆಳಗಾವಿಗೆ ಆಗಮನ…

ಅದರ ಮಾರನೇ ವರ್ಷ ಅಂದರೆ 1916ರಲ್ಲಿ ಮುಂಬೈನಲ್ಲಿ ಪ್ರಾಂತೀಯ ಪರಿಷತ್ತಿನ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಗಾಂಧಿಯವರು ಕರ್ನಾಟಕದ ಬೆಳಗಾವಿ ಬಂದರು. ಏಪ್ರಿಲ್‌ 29ರಂದು ಅವರು ಪುತ್ರ ರಾಮದಾಸನೊಂದಿಗೆ ಬಂದಿದ್ದರು. ಆಗ ಮೂರು ದಿನಗಳ ಕಾಲ ನಡೆದ ಸಭೆಯಲ್ಲಿ ಎರಡನೇ ದಿನದಂದು ಶೋಷಿತ ವರ್ಗದ ಕುರಿತಾಗಿ ಮಾತನಾಡಿದರು. ಗಾಂಧೀಜಿ ಅವರು ಬಾಲಗಂಗಾಧರ ತಿಲಕರನ್ನು ಭೇಟಿ ಮಾಡಿದ್ದು ಇದೇ ಸಮಾವೇಶದಲ್ಲಾಗಿತ್ತು. ಇದಾದ ನಂತರ ಗಾಂಧಿಯವರು 1920ರ ಆಗಸ್ಟ್‌ 19ರಂದು ಮೌಲಾನಾ ಶೌಕತ್‌ ಅಲಿ ಅವರೊಂದಿಗೆ ಕೇರಳದಿಂದ ಮಂಗಳೂರಿಗೆ ಬಂದರು. ಕೇಂದ್ರ ಮೈದಾನದಲ್ಲಿ ಅಸಹಕಾರ ಚಳವಳಿ ಕುರಿತು ಸಭೆ ನಡೆಸಿದರು. ದೇಶದಲ್ಲಿ ಹಿಂದೂ ಮತ್ತು ಮುಸಲ್ಮಾನರ ಏಕತೆ ಮುಖ್ಯ ಎಂದು ಸಾರಿದರು.

ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಭಾಷಣ
ಅದೇ ವರ್ಷ ಆಗಸ್ಟ್‌ 21ರಂದು ಅವರು ಸೇಲಂ ಮಾರ್ಗವಾಗಿ ಬೆಂಗಳೂರಿಗೆ ಬಂದು ಬೆಂಗಳೂರಿನ ಈದ್ಗಾ ಮೈದಾನ ಮತ್ತು ಬೆನ್ಸನ್‌ ಟೌನ್‌ಗಳಲ್ಲಿ ಅಸಹಕಾರ ಚಳವಳಿ ಕುರಿತಾಗಿ ಭಾಷಣ ಮಾಡಿದರು. ನಂತರ ನವೆಂಬರ್‌ 8ರಂದು ನಿಪ್ಪಾಣಿಯಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಜಾತಿ ಪದ್ಧತಿ ಕುರಿತು ಸಂವಾದ ಮಾಡಿದರು. ಅದೇ ದಿನ ಬೆಳಗಾವಿಯ ಕೋಟೆ ಬಯಲಿನಲ್ಲಿ ಸಭೆ ನಡೆಸಿದರು. ಅಂದು ಗಾಂಧಿ ಅವರೊಂದಿಗೆ ಶೌಕತ್‌ ಅವರೂ ಜತೆಗಿದ್ದರು. ಸಭೆಯಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದರು. ಈ ಸಭೆಯಲ್ಲಿ ಮಾತನಾಡಿದ ಗಾಂಧಿ ಅವರು ನಂತರ ಮಾರುತಿ ಗುಡಿಯಲ್ಲಿ ಮಹಿಳೆಯರೊಂದಿಗೆ ಸಭೆ ನಡೆಸಿ ಅವರಿಂದ ನಿಧಿ ಸಂಗ್ರಹಣೆಯನ್ನೂ ಮಾಡಿದರು.

1921ರಲ್ಲಿ ಬಿಜಾಪುರಕ್ಕೆ ಭೇಟಿ
1921ರ ಮೇ 28ರಂದು ಗಾಂಧಿ ಅವರು ಬಿಜಾಪುರಕ್ಕೆ ಭೇಟಿ ನೀಡಿದರು. ಅಲ್ಲಿ ಮೊದಲನೇ ಮಹಿಳೆಯರ ಸಭೆಯಲ್ಲಿ ಪಾಲ್ಗೊಂಡರು. ತಾಸ್‌ಬಾವಡಿಯ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅದೇ ವರ್ಷ ಅಕ್ಟೋಬರ್‌ 1ರಂದು ತಿರುಪತಿ ಮಾರ್ಗವಾಗಿ ಬಳ್ಳಾರಿಗೆ ಬಂದರು. ಅಲ್ಲಿ ಶಾಂತಿ ಸಾಮರಸ್ಯದ ಕುರಿತ ಮಾತನಾಡಿದರು. ಈ ಸಮಯಕ್ಕಾಗಲೇ ಗಾಂಧೀಜಿ ಅವರು ಧೋತರ ತ್ಯಜಿಸಿ ತುಂಡು ಪಂಚೆ ಉಡುವುದಕ್ಕೆ ಪ್ರಾರಂಭಿಸಿದ್ದರು.

ಇದನ್ನೂ ಓದಿ: Independence Day 2023 : ಯುವಾ ಬ್ರಿಗೇಡ್‌ನಿಂದ ಈ ಸ್ವಾತಂತ್ರ್ಯ ಶ್ರಾವಣಕ್ಕೆ ವಿಶ್ವಗುರು ಭಾರತದ ಸಂಕಲ್ಪ
ಬೆಳಗಾವಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ ಅಧಿವೇಶನ

1924ರ ಡಿಸೆಂಬರ್‌ನಲ್ಲಿ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಏಕೈಕ ರಾಷ್ಟ್ರೀಯ ಕಾಂಗ್ರೆಸ್‌ ಅಧಿವೇಶನ ನಡೆಯಿತು. ಡಿಸೆಂಬರ್‌ 26 ಮತ್ತು 27ರಂದು ನಡೆಯಲಿದ್ದ ಅಧಿವೇಶನಕ್ಕೆ ಗಾಂಧಿ ಅವರು ಆರು ದಿನ ಮೊದಲೇ ಆಗಮಿಸಿದ್ದರು. ಅವರು ಸಭೆಗಳಲ್ಲಿ ಮಹಾರಾಷ್ಟ್ರ, ಮೈಸೂರು ಪ್ರಾಂತ್ಯಗಳಿಂದ ಬಂದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು. ಅಧಿವೇಶನ ನಡೆದ ಸ್ಥಳ ಈಗ ಟಿಳಕವಾಡಿ ಎಂದು ನಾಮಕರಣಗೊಂಡಿದೆ. ಅಧಿವೇಶನಕ್ಕಾಗಿ ತೆಗೆದಿದ್ದ ಬಾವಿ ಈಗ ಕಾಂಗ್ರೆಸ್‌ ವೆಲ್‌ ಎಂದು ಕರೆಸಿಕೊಳ್ಳುತ್ತದೆ.

1927ರಲ್ಲಿ ಸತತ ಭೇಟಿಗಳು

1927ರ ಸಮಯಕ್ಕೆ ಗಾಂಧೀಜಿ ಮತ್ತು ಕರ್ನಾಟಕದ ಬಾಂಧವ್ಯ ಹೆಚ್ಚಿತ್ತು. ಆ ವರ್ಷ ಫೆಬ್ರವರಿ 21ರಂದು ಅವರು ಶೋಲಾಪುರದಿಂದ ಗುಲ್ಬರ್ಗಕ್ಕೆ ರೈಲಿನಲ್ಲಿ ಬಂದರು. ಅದರ ಮಾರನೇ ದಿನ ಅವರು ಶರಣ ಬಸಪ್ಪ ದೇವಸ್ಥಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಅದೇ ವರ್ಷ ಏಪ್ರಿಲ್‌ 19ರಂದು ಕರ್ನಾಟಕಕ್ಕೆ ಪ್ರವಾಸಕ್ಕೆ ಬಂದ ಅವರಿಗೆ ಅನಾರೋಗ್ಯ ಕಾಡಿತು. ಹಾಗಾಗಿ ಅವರನ್ನು ನಂದಿಬೆಟ್ಟದಲ್ಲಿ ವಿಶ್ರಾಂತಿಗೆ ಕಳುಹಿಸಲಾಯಿತು. ಅಲ್ಲಿ ಅವರು ನಿತ್ಯ ಪ್ರಾರ್ಥನೆ, ವಿವಿಧ ಭಾಗಗಳಿಂದ ಬಂದ ಕಾರ್ಯಕರ್ತರು ಮತ್ತು ನಾಯಕರೊಂದಿಗೆ ಮಾತುಕತೆ ನಡೆಸುತ್ತಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ಅಲ್ಲಿಂದ ಹೊರಟ ಗಾಂಧೀಜಿ ಅವರು ಚಿಕ್ಕಬಳ್ಳಾಪುರದ ಪ್ರೌಢಶಾಲಾ ಆವರಣದಲ್ಲಿ ನಡೆದ ನಾಲ್ವಡಿ ಕೃಷ್ಣರಾಜರ ರಜತಮೋಹತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಲ್ಲಿಂದ ಬೆಂಗಳೂರಿಗೆ ತೆರಳಿದರು.

ಆ ವರ್ಷ ಜೂನ್‌ 5ರಿಂದ ಆಗಸ್ಟ್‌ 30ರವರೆಗೆ ಒಟ್ಟು 87 ದಿನಗಳ ಕಾಲ ಅವರು ಬೆಂಗಳೂರಿನ ಕುಮಾರ ಕೃಪಾದಲ್ಲಿ ತಂಗಿದ್ದರು. ಇಲ್ಲಿದ್ದುಕೊಂಡೇ ಅವರು ದಕ್ಷಿಣ ಕರ್ನಾಟಕದ ಪ್ರವಾಸವನ್ನು ಮುಂದುವರಿಸುತ್ತಾರೆ. ಕುಮಾರ ಕೃಪದಲ್ಲಿ ತಂಗಿದ್ದ ವೇಳೆ ಅಲ್ಲಿದ್ದ ಆಲದ ಮರದಡಿ ಪ್ರತಿದಿನ ಸಂಜೆ ಪ್ರಾರ್ಥನಾ ಸಭೆ ನಡೆಸುತ್ತಿದ್ದರು. ಈ ಸ್ಥಳ ಈಗ ಅಶೋಕ ಹೋಟೆಲ್‌ನಲ್ಲಿದ್ದು, ಅಲ್ಲಿ ಗಾಂಧಿ ಅವರ ನೆನಪಿಗಾಗಿ ಸ್ಮಾರಕವನ್ನು ನಿರ್ಮಿಸಲಾಗಿದೆ.

ಈ 87 ದಿನಗಳಲ್ಲಿ ಅವರು ಜುಲೈ 9ರಂದು ಮೈಸೂರಿನ ಅಮೆಚ್ಯೂರ್‌ ಡ್ರಾಮಾಟಿಕ್‌ ಅಸೋಸಿಯೇಷನ್‌ಗೆ ಭೇಟಿ ನೀಡಿದರು. ಅಲ್ಲಿ ಖಾದಿ ನಿಧಿ ಸಂಗ್ರಹಕ್ಕಾಗಿ ಪಂಡಿತ ತಾರಾನಾಥರು ಪ್ರಮುಖ ಪಾತ್ರದಲ್ಲಿ ನಟಿಸಿ ನಾಟಕವೊಂದನ್ನು ನಡೆಸಿದರು. ಆ ನಾಟಕವನ್ನು ಗಾಂಧಿ ಅವರು ಪ್ರೇಕ್ಷಕರಾಗಿ ವೀಕ್ಷಿಸಿದರು. ಜುಲೈ 10-13ರವರೆಗೆ ಅವರು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ, ಹಿಂದಿ ಸಮಾವೇಶದಲ್ಲಿ ಹಾಗೆಯೇ ಮಹಿಳಾ ಸಮಾಜಗಳಲ್ಲಿ ಭಾಷಣ ಮಾಡಿದರು. ಜುಲೈ 14ರಂದು ತುಮಕೂರಿನಲ್ಲಿ ನಗರಸಭೆ ಉದ್ದೇಶಿಸಿ ಮಾತನಾಡಿದರು. ಅಲ್ಲಿ ಪಂಚಮ ವಸತಿ ಶಾಲೆ, ಪ್ರಾಣಿ ದಯಾಸಂಘಕ್ಕೆ ಭೇಟಿ ನೀಡಿದರು. ಜುಲೈ 15ರಂದು ಮಧುಗಿರಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಜುಲೈ 19ರಿಂದ 23ರವರೆಗೆ ಅವರು ಮೈಸೂರಿನ ಶೇಷಾದ್ರಿ ಅಯ್ಯರ್‌ ಗೃಹದಲ್ಲಿ ವಾಸ್ತವ್ಯ ಹೂಡಿದರು. ಈಗ ಆ ಗೃಹ ವಾಣಿಜ್ಯ ತೆರಿಗೆ ಇಲಾಖೆಯ ಪ್ರಧಾನ ಕಚೇರಿಯಾಗಿದೆ. ಜುಲೈ 20ರಂದು ಮೈಸೂರಿನ ಸ್ವಾಗತ ಸಮಿತಿಯಿಂದ ಪುರಭವನದಲ್ಲಿ ಗಾಂಧಿ ಅವರಿಗೆ ಸ್ವಾಗತ ಕೋರಲಾಯಿತು.

ಜಗನ್ಮೋಹನ ಅರಮನೆಯಲ್ಲಿ ಮಹಿಳೆಯರ ಬೃಹತ್‌ ಸಭೆಯಲ್ಲಿ ಅವರು ಭಾಗವಹಿಸಿದರು. ಆಗಸ್ಟ್‌ 3ರಂದು ಹಾಸನದ ಟೌನ್‌ ಹಾಲ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು. ಆಗಸ್ಟ್‌ 11ರಂದು ದಾವಣಗೆರೆಯಲ್ಲಿ ಮಹಿಳಾ ಸಭೆಯಲ್ಲಿ ಪಾಲ್ಗೊಂಡರು ಹಾಗೆಯೇ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಆಗಸ್ಟ್‌ 14ರಂದು ಹರಿಹರ ಮಾರ್ಗವಾಗಿ ಶಿವಮೊಗ್ಗ ತಲುಪಿ ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು. ಆಗಸ್ಟ್‌ 18ರಂದು ಭದ್ರಾವತಿಯಲ್ಲಿ ಕಬ್ಬಿಣದ ಅದಿರಿನ ಕಾರ್ಖಾನೆಯಲ್ಲಿ ದುಡಿಯುವ ಕಾರ್ಮಿಕರು ಮತ್ತು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಆಗಸ್ಟ್‌ 28ರಂದು ಬೆಂಗಳೂರಿನಲ್ಲಿ ಐದು ಬಹಿರಂಗ ಸಭೆಗಳಲ್ಲಿ ಮಾತನಾಡಿದರು. ಆಗಸ್ಟ್‌ 29ರಂದು ಬೆಂಗಳೂರಿನಲ್ಲಿ ಅಸೋಸಿಯೇಟೆಡ್‌ ಪ್ರೆಸ್‌ಗೆ ಸಂದರ್ಶನ ನೀಡಿದರು.

1934ರಲ್ಲಿ ಕರ್ನಾಟಕ ಭೇಟಿ

1934ರ ಜನವರಿ 4ರಂದು ಗಾಂಧೀಜಿ ಅವರು ಹಿಂದುಪುರದಿಂದ ಗೌರಿಬಿದನೂರಿನ ಮಾರ್ಗವಾಗಿ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಹಾಗೆಯೇ ತುಮಕೂರಿನ ಹರಿಜನ ಕೇರಿಗಳಿಗೆ ಭೇಟಿ ನೀಡಿದರು. ಅಲ್ಲಿಂದ ತ್ಯಾಮಗೊಂಡ್ಲು, ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸಿದರು. ಬೆಂಗಳೂರಿನಲ್ಲಿ ಸಂಜೆ ನೇಕಾರ ಒಕ್ಕೂಟದ ಶಾಖೆ ಉದ್ಘಾಟಿಸಿ, ಮಹಿಳಾ ಸಭೆ ಉದ್ದೇಶಿಸಿ ಮಾತನಾಡಿದ ಅವರು ಹರಿಜನ ಕೇರಿಗಳಿಗೂ ಭೇಟಿ ನೀಡಿ, ಅಲ್ಲಿಂದ ಮೈಸೂರಿಗೆ ಪ್ರಯಾಣಿಸಿದರು. ಜನವರಿ 5ರಂದು ಮೈಸೂರಿನ ತಗಡೂರು ರಾಮಚಂದ್ರ ರಾವ್, ವಿ.ವೆಂಕಟಪ್ಪ, ಅಗರಂ ರಂಗಯ್ಯ ಮತ್ತಿತರರೊಂದಿಗೆ ತಗಡೂರಿನ ಆಶ್ರಮಕ್ಕೆ ಭೇಟಿ ನೀಡಿದರು. ಅಲ್ಲಿಂದ ಬದನವಾಳು ಗ್ರಾಮಕ್ಕೆ ಭೇಟಿ ನೀಡಿದರು. ಅಲ್ಲಿ ಅಖಿಲ ಭಾರತ ಚರಕ ಸಂಘ ಸ್ಥಾಪಿಸಿದ್ದ ಖಾದಿ ಕೇಂದ್ರ ಮತ್ತು ರಾಮಮಂದಿರಕ್ಕೆ ಭೇಟಿ ನೀಡಿದರು.

ನಂತರ ನಂಜನಗೂಡಿನಲ್ಲಿ ಹರಿಜನರ ಕಲ್ಯಾಣ ಕುರಿತಾಗಿ ಭಾಷಣ ಮಾಡಿದರು. ಅದೇ ದಿನ ಸಂಜೆ ಮೈಸೂರಿನ ಹರಿಜನ ಕೇರಿಗಳಿಗೆ ಭೇಟಿ ನೀಡಿದರು. ಜನವರಿ 6ರಂದು ಮಂಡ್ಯ, ಮದ್ದೂರು, ಬಿಡದಿ, ಕೆಂಗೇರಿ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ಬಂದರು. ಅಲ್ಲಿ ವಿದ್ಯಾರ್ಥಿ ಸಭೆ ಉದ್ದೇಶಿಸಿ ಭಾಷಣ ಮಾಡಿದರು. ಹೀಗೆ ಬೆಂಗಳೂರಿಗೆ ಬರುವ ಮುನ್ನ ಅವರು ಚೆನ್ನಪಟ್ಟಣದ ಅಭಯ ಕುಟೀರಕ್ಕೆ ಭೇಟಿ ನೀಡಿದರು. ಅಲ್ಲೂ ಅವರು ಹರಿಜನ ಬೀದಿಗಳಿಗೆ ಭೇಟಿ ನೀಡಿದರು. ಬೆಂಗಳೂರಿನಲ್ಲಿ ಮೂರು ದಿನ ತಂಗಿದ್ದ ಅವರು ಹಲವಾರು ಸಂಘಗಳು, ಮಹಿಳಾ ಸಭೆಗಳನ್ನು ನಡೆಸಿದರು. ನಂತರ ಫೆಬ್ರವರಿ 22ರಂದು ಮೈಸೂರಿನಿಂದ ಮಡಿಕೇರಿಗೆ ಗಾಂಧೀಜಿ ಅವರು ಆಗಮಿಸುತ್ತಾರೆ. ಅಲ್ಲಿ ಅವರು ಸಭೆ ನಡೆಸಿ ನಂತರ ಹುದೆಕೇರಿ, ಪನ್ನಾಮ್‌ಪೇಟೆಗೆ ಭೇಟಿ ನೀಡಿದರು. ಫೆಬ್ರವರಿ 24ರಂದು ಪುತ್ತೂರಿಗೆ ಭೇಟಿ ನೀಡಿ ಅಲ್ಲಿ ಸಾರ್ವಜನಿಕ ಸಭೆ, ಮಹಿಳಾ ಸಭೆಗಳನ್ನು ನಡೆಸಿದರು. ಮಂಗಳೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಫೆಬ್ರವರಿ 25-27ರವರೆಗೆ ಮಂಗಳೂರಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿದ ಅವರು ಮುಲ್ಕಿ, ಉಡುಪಿ, ಕುಂದಾಪುರಕ್ಕೆ ಭೇಟಿ ನೀಡಿದರು. 28ರಿಂದ ಮಾರ್ಚ್‌ 8ರವರೆಗೆ ಹುಬ್ಬಳ್ಳಿ, ಹಾವೇರಿ, ಗದಗ, ಬಿಜಾಪುರ, ಗೋಕಾಕಗಳಲ್ಲಿ ಸಭೆ ನಡೆಸಿದರು.

ಇದನ್ನೂ ಓದಿ: How To Become Rich: ಸುಲಭವಾಗಿ ಶ್ರೀಮಂತರಾಗಿ, ಆರ್ಥಿಕ ಸ್ವಾತಂತ್ರ್ಯ ಗಳಿಸುವುದು ಹೇಗೆ?

1936ರಲ್ಲಿ ಮತ್ತೆ ಸುತ್ತಾಟ

1934ರ ನಂತರ ಎರಡು ವರ್ಷ ಬಿಟ್ಟು ಗಾಂಧಿ ಅವರು ಮತ್ತೆ ಕರ್ನಾಟಕಕ್ಕೆ ಬರುತ್ತಾರೆ. ವಾರ್ಧಾದಿಂದ ಹೊರಡುವ ಅವರು 1936ರ ಮೇ 8ರಂದು ಸಂಜೆ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದಿಳಿಯುತ್ತಾರೆ. ಮಾರನೇ ದಿನ ಅಸೋಸಿಯೇಟೆಡ್‌ ಪ್ರೆಸ್‌ಗೆ ಸಂದರ್ಶನ ನೀಡುತ್ತಾರೆ. ಮೇ 10-31ರವರೆಗೆ ನಂದಿಬೆಟ್ಟದಲ್ಲಿ ವಾಸ್ತವ್ಯ ಹೂಡುತ್ತಾರೆ. ಅಲ್ಲಿ ಅವರನ್ನು ವಿಜ್ಞಾನಿ ಸರ್‌ ಸಿ.ವಿ.ರಾಮನ್‌ ಮತ್ತು ಪ್ರೊಫೆಸರ್‌ ರಹಮ್‌ ಅವರು ಭೇಟಿ ಮಾಡುತ್ತಾರೆ. ಮೇ 31ರಂದು ನಂದಿಬೆಟ್ಟದಿಂದ ಹೊರಡುವ ಅವರು ಚಿಕ್ಕಬಳ್ಳಾಪುರ, ಚಿಂತಾಮಣಿ, ಕೋಲಾರ, ಬೌರಿಂಗ್‌ಪೇಟೆ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಆಗಮಿಸಿದರು. ಮೇ 31ರಿಂದ ಜೂನ್‌ 12ರವರೆಗೆ ಕ್ರೆಸೆಂಟ್‌ ಹಾಲ್‌ನಲ್ಲಿ ತಂಗಿದ್ದರು. ಈ ವೇಳೆ ಅವರು ಹರಿಜನ ಮತ್ತು ಆದಿ ಕರ್ನಾಟಕ ಸಂಘಟನೆಗಳೊಂದಿಗೆ ಸಭೆ ನಡೆಸಿದರು. ಜೂನ್‌ 12ರಂದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ಗೆ ಭೇಟಿ ನೀಡಿ ನಂತರ ವಾರ್ಧಾಕ್ಕೆ ತೆರಳಿದರು.

Exit mobile version