Site icon Vistara News

Mahesh Babu | ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಮನೆಯಲ್ಲಿ ಕಳ್ಳತನಕ್ಕೆ ಯತ್ನ

Mahesh Babu

ಹೈದರಾಬಾದ್: ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ. ತಮ್ಮ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿ ನಟ ಮಹೇಶ್ ಬಾಬು (Mahesh Babu) ಇರುವಾಗಲೇ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸೆ. 28ರ ಬೆಳಗ್ಗೆ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ವಿಧಿವಶರಾಗಿದ್ದರು. ಇದಕ್ಕೂ ಮೊದಲು ಈ ಘಟನೆ ನಡೆದಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

ಸೆ. 27 ರಂದು ಮಹೇಶ್ ಬಾಬು ಅವರ ಹೈದರಾಬಾದ್‌ ನಿವಾಸದಲ್ಲಿ ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ. ಹೈದರಾಬಾದ್‌ನ ಜ್ಯೂಬಿಲಿ ಹಿಲ್ಸ್ ರೋಡ್‌ನ ನಂ. 81ರ ನಿವಾಸದಲ್ಲಿ ಮಹೇಶ್ ಬಾಬು ಮತ್ತು ಕುಟುಂಬ ನೆಲೆಸಿದೆ. ಕಳೆದ ಮಂಗಳವಾರ (ಸೆ. 27) ರಾತ್ರಿ 11 ಗಂಟೆ ಆಸುಪಾಸಿಗೆ ಮನೆಯ 30 ಅಡಿ ಎತ್ತರದ ಭದ್ರತಾ ಗೋಡೆಯಿಂದ ಓರ್ವ ಹಾರಿ ಬಿದ್ದಿದ್ದಾನೆ. ತಕ್ಷಣ ಅಲರ್ಟ್ ಆದ ಸೆಕ್ಯೂರಿಟಿ ಗಾರ್ಡ್ಸ್ ಕೂಡಲೇ ಆತನನ್ನ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಕಳ್ಳನಿಗೆ ಗಾಯ!
30 ಅಡಿ ಗೋಡೆ ಎಗರಿ ನಟ ಮಹೇಶ್ ಬಾಬು ಅವರ ಮನೆಗೆ ನುಗ್ಗಲು ಯತ್ನಿಸಿದ್ದ ಕಳ್ಳನ ಗ್ರಹಚಾರ ನೆಟ್ಟಗಿರಲಿಲ್ಲ ಅನಿಸುತ್ತೆ. ಒಂದು ಕಡೆ ಐಡಿಯಾ ಫೆಲ್ಯೂರ್ ಆಗುವ ಜೊತೆಗೆ, ಕಳ್ಳ ಕಾಂಪೌಂಡ್​ನಿಂದ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಮಹೇಶ್ ಬಾಬು ಅವರ ಮನೆಯ ಭದ್ರತಾ ಸಿಬ್ಬಂದಿ ಕಳ್ಳನನ್ನು ಹಿಡಿದುಕೊಂಡಿದ್ದಾರೆ. ಬಳಿಕ ಜ್ಯೂಬಿಲಿ ಹಿಲ್ಸ್ ಠಾಣೆಗೆ ಮಾಹಿತಿ ನೀಡಿ, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕಳ್ಳ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಅಂದಹಾಗೆ ಈ ಘಟನೆ ಬಳಿಕ ಎಚ್ಚೆತ್ತಿರುವ ಮಹೇಶ್ ಬಾಬು ಮನೆ ಭದ್ರತಾ ಸಿಬ್ಬಂದಿ ಮತ್ತಷ್ಟು ಅಲರ್ಟ್ ಆಗಿದ್ದಾರೆ. ಪೊಲೀಸರು ಈ ಕುರಿತು ತನಿಖೆ ಮುಂದುವರಿಸಿದ್ದಾರೆ. ಮತ್ತೊಂದ್ಕಡೆ ಘಟನೆ ನಡೆದ ಸಂದರ್ಭದಲ್ಲಿ ನಟ ಮಹೇಶ್ ಬಾಬು ಅವರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದ್ದು, ಆರೋಪಿಯ ವಿಚಾರಣೆ ಮುಂದುವರಿದಿದೆ.

ಇದನ್ನೂ ಓದಿ: Mahesh Babu | ಟಾಲಿವುಡ್‌ ಸೂಪರ್‌ ಸ್ಟಾರ್‌ ಮಹೇಶ್‌ ಬಾಬುಗೆ ಮಾತೃ ವಿಯೋಗ

Exit mobile version