ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು ಹೊಂದುವುದು ನಿಜವಾದ ಸಮಸ್ಯೆ ಮತ್ತು ಅದನ್ನು ಗಂಭೀರ ಅಪರಾಧ ಎಂದು ಸರ್ಕಾರ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ (Supreme Court) ಹೇಳಿದೆ. ಜನರು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿ, ನಡೆಸಿರುವ ಕ್ರೈಂಗಳ ಬಗ್ಗೆ ವಿವಿಧ ರಾಜ್ಯಗಳು ಕೊಟ್ಟ ಅಂಕಿ-ಸಂಖ್ಯೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ‘ಅಕ್ರಮ ಶಸ್ತ್ರಾಸ್ತ್ರಗಳಿಂದ ಅಂದರೆ ಲೈಸೆನ್ಸ್ ಇಲ್ಲದ ಶಸ್ತ್ರಾಸ್ತ್ರಗಳಿಂದ (Unlicensed Weapons)ನಡೆದ ಅಪರಾಧಗಳು ಎಷ್ಟು? ಆ ಬಗ್ಗೆ ನಿಮ್ಮಲ್ಲಿನ ಸಂಬಂಧಪಟ್ಟ ಆಡಳಿತಗಳು, ಪೊಲೀಸ್ ಇಲಾಖೆಗಳು ಏನು ಕ್ರಮ ಕೈಗೊಂಡಿವೆ? ಎಂಬ ಬಗ್ಗೆ ಡಾಟಾ ಸಹಿತ ಮಾಹಿತಿ ಕೊಡುವಂತೆ ಏಪ್ರಿಲ್ 13ರಂದು ಸುಪ್ರೀಂಕೋರ್ಟ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿತ್ತು.
ರಾಜ್ಯಗಳು ಸುಪ್ರೀಂಕೋರ್ಟ್ಗೆ ನೀಡಿದ ಮಾಹಿತಿ ಪ್ರಕಾರ ‘ಉತ್ತರ ಪ್ರದೇಶ, ಬಿಹಾರ, ಪಂಜಾಬ್ ಮತ್ತು ಉತ್ತರ ಭಾಗದ ಇತರ ರಾಜ್ಯಗಳಲ್ಲೇ ಈ ಅಕ್ರಮ ಶಸ್ತ್ರಾಸ್ತ್ರ ಅಪರಾಧ ಪ್ರಕರಣಗಳು ಜಾಸ್ತಿ ಎಂಬುದನ್ನು ಸುಪ್ರೀಂಕೋರ್ಟ್ ಗಮನಿಸಿದೆ. ತಮಿಳುನಾಡು ಹೊರತುಪಡಿಸಿ ಉಳಿದೆಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲೂ ಅಕ್ರಮ ಬಂದೂಕು ಸೇರಿ ಇತರ ಶಸ್ತ್ರಾಸ್ತ್ರಗಳಿಂದ ಕ್ರೈಂ ನಡೆದಿರುವ ಬಗ್ಗೆ ಕೇಸ್ ದಾಖಲಾಗಿದೆ. ತಮಿಳುನಾಡಲ್ಲಿ ಒಂದೂ ಪ್ರಕರಣ ಇಲ್ಲ ಎಂದು ಆ ರಾಜ್ಯ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದೆ.
ಇದನ್ನೂ ಓದಿ: Adani Group : ಅದಾನಿ-ಹಿಂಡೆನ್‌ಬರ್ಗ್ ತನಿಖಾ ವರದಿಯನ್ನು ಆ.14ರೊಳಗೆ ಸಲ್ಲಿಸಲು ಸೆಬಿಗೆ ಸುಪ್ರೀಂಕೋರ್ಟ್ ಸೂಚನೆ
ಈ ಅಂಕಿ-ಅಂಶಗಳ ಬಗ್ಗೆ ಪರಿಶೀಲನೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಮತ್ತು ನ್ಯಾ. ಬಿ.ವಿ.ನಾಗರತ್ನಾ ಅವರನ್ನೊಳಗೊಂಡ ಪೀಠ ‘ಪರವಾನಗಿ ಇಲ್ಲದ ಶಸ್ತ್ರಾಸ್ತ್ರಗಳನ್ನು ಹೊಂದಿ, ಅದರಲ್ಲಿ ಕ್ರೈಂ ನಡೆಸುತ್ತಿರುವುದು ನಿಜವಾದ ಸಮಸ್ಯೆ. ಹೀಗಾಗಿ ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದೆ ಇದ್ದರೆ ಜನರು ಈ ಬಗ್ಗೆ ಭಯಗೊಳ್ಳುವುದಿಲ್ಲ’ ಎಂದು ಕೇಂದ್ರದ ಪರ ಹಾಜರಾದ ವಕೀಲ ರಜತ್ ನಾಯರ್ಗೆ ಹೇಳಿದೆ. ಅಕ್ರಮ ಶಸ್ತ್ರಾಸ್ತ್ರ ಹೊಂದುವವರನ್ನು ಶಸ್ತ್ರ ಕಾಯ್ದೆಯಡಿ ಬಂಧಿಸಲಾಗುತ್ತಿದೆ. ಇದರಡಿಯಲ್ಲಿ 3ರಿಂದ 7ವರ್ಷಗಳವರೆಗೆ ಜೈಲು ಶಿಕ್ಷೆ ನೀಡಬಹುದಾಗಿದೆ. ಆದರೆ ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತ ಮಾಡಿ, ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಅಷ್ಟೇ ಅಲ್ಲ, ಯುಸ್ನ ಉದಾಹರಣೆಯನ್ನೂ ಕೊಟ್ಟಿದೆ. ಅಲ್ಲಿ ಚಿಕ್ಕವಯಸ್ಸಿನವರೆಲ್ಲ ಗನ್ ಇಟ್ಟುಕೊಂಡು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಾರೆ. ಶಾಪಿಂಗ್ ಮಾಲ್, ಜನಸಂದಣಿ ಇರುವ ಸ್ಥಳಗಳು, ಶಾಲಾ-ಕಾಲೇಜುಗಳಿಗೆ ನುಗ್ಗಿ ಹೇಗೆ ಪೈರಿಂಗ್, ಚಾಕು ದಾಳಿ ನಡೆಸುತ್ತಾರೆ ಎಂಬುದನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್ ಪೀಠ ‘ನಮ್ಮ ದೇಶದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳಿಂದ ಅಪರಾಧಗಳ ನಿಯಂತ್ರಣ ಆಗಲೇಬೇಕು’ ಎಂದು ಒತ್ತಿ ಹೇಳಿದೆ.