ಮುಂಬೈ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ (Malegaon Blast Case) ಆರೋಪಿಯಾಗಿರುವ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರು ಇದೀಗ ನ್ಯಾಯಾಲಯದ ಮುಂದೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಪ್ರಕರಣದ ತನಿಖೆಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮುಂಬೈನ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: Supreme Court | ಸಚಿವರ ಹೇಳಿಕೆ ಸರ್ಕಾರದ ಹೇಳಿಕೆಯಲ್ಲ! ಜನಪ್ರತಿನಿಧಿಗಳ ವಾಕ್ ಸ್ವಾತಂತ್ರ್ಯಕ್ಕೆ ಹೆಚ್ಚಿನ ನಿರ್ಬಂಧ ಇಲ್ಲ: ಸುಪ್ರೀಂ ಕೋರ್ಟ್
ಮಾಧ್ಯಮಗಳನ್ನು ಬಳಸಿಕೊಂಡು ಪೂರ್ತಿ ಸ್ಫೋಟ ಪ್ರಕರಣವನ್ನು ತಮ್ಮ ವಿರುದ್ಧ ತಿರುಗುವಂತೆ ಮಾಡಲಾಗಿದೆ. ಇದರ ಬಗ್ಗೆ ಒಂದು ವೆಬ್ ಸೀರಿಸ್ ಕೂಡ ಆಗಿದ್ದು, ಅದು ಪಾಕಿಸ್ತಾನದ ಗಡಿ ಭಾಗದಲ್ಲಿ ಹೆಚ್ಚು ಪ್ರಚಾರವಾಗುತ್ತಿದೆ ಎಂದು ಅವರು ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾರೆ. ಹಾಗೆಯೇ ವೆಬ್ ಸೀರಿಸ್‌ನ ತುಣುಕನ್ನು ನ್ಯಾಯಾಧೀಶರಿಗೆ ತೋರಿಸಿದ್ದಾರೆ.
ಇದುವರೆಗೆ ನಾನಾಗಲೀ ಅಥವಾ ನನ್ನ ವಕೀಲರಾಗಲಿ, ಪ್ರಕರಣದ ವಿಚಾರದಲ್ಲಿ ಮಾಧ್ಯಮದವರೆದುರು ಯಾವುದೇ ಹೇಳಿಕೆ ಕೊಟ್ಟಿಲ್ಲ. ನನ್ನ ಪರವಾಗಿ ಬೇರಾದರೂ ಹೇಳಿಕೆ ಕೊಟ್ಟಿದ್ದರೆ ಅದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ. ಆದರೆ ದೇಶದ ಹಿತದೃಷ್ಟಿಯಿಂದಾಗಿ ವಿಚಾರಣೆಯಲ್ಲಿ ಮಾಧ್ಯಮಗಳಿಗೆ ಪಾಲ್ಗೊಳ್ಳುವುದಕ್ಕೆ ಬಿಡಬಾರದು ಎಂದು ಅವರು ಕೇಳಿಕೊಂಡಿದ್ದಾರೆ.
ಪುರೋಹಿತ್ ಅವರ ಮನವಿಗೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಧಿಕಾರಿಗಳೂ ಬೆಂಬಲಿಸಿದ್ದಾರೆ. “ಪ್ರಕರಣದ ಸೂಕ್ಷ್ಮತೆಯ ದೃಷ್ಟಿಯಲ್ಲಿ ವಿಚಾರಣೆ ವೇಳೆ ಮಾಧ್ಯಮಕ್ಕೆ ಅವಕಾಶ ಕೊಡಬಾರದು ಎಂದು ನಾವು 2019ರಲ್ಲಿಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೆವು. ಆದರೆ ನ್ಯಾಯಾಲಯ ಆಗ ಅರ್ಜಿಯನ್ನು ತಿರಸ್ಕರಿಸಿತ್ತು” ಎಂದು ಎನ್ಐಎ ಪರ ವಕೀಲರಾದ ಅವಿನಾಶ್ ರಸಲ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: NIA Cases | ಪ್ರಸಕ್ತ ಸಾಲಿನಲ್ಲಿ 497 ಕೇಸ್ ದಾಖಲಿಸಿದ ಎನ್ಐಎ, ರಾಜ್ಯಸಭೆಗೆ ಸಚಿವ ಮಾಹಿತಿ
ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ 2008ರ ಸೆಪ್ಟೆಂಬರ್ ತಿಂಗಳಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟು, 100ಕ್ಕೂ ಅಧಿಕ ಮಂದಿ ಗಾಯಾಳುಗಳಾಗಿದ್ದರು. ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್, ಪುರೋಹಿತ್ ಸೇರಿ ಒಟ್ಟು 8 ಮಂದಿ ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಸದ್ಯ ಎಲ್ಲ ಆರೋಪಿಗಳು ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದಾರೆ. ಪ್ರಕರಣದಿಂದ ತಮ್ಮನ್ನು ಮುಕ್ತಗೊಳಿಸಬೇಕೆಂದು ಕೋರಿ ಪುರೋಹಿತ್ ಅವರು ಬಾಂಬೆ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಸೋಮವಾರ ಆ ಅರ್ಜಿಯನ್ನು ತಿರಸ್ಕರಿಸಿದೆ.