ನವ ದೆಹಲಿ: ದೇಶದಲ್ಲಿ ದ್ವೇಷವನ್ನು ಹರಡುತ್ತಿರುವವರ ವಿಷಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಮೌನಿ ಬಾಬಾ’ ಆಗಿದ್ದಾರೆ ಎಂದು ರಾಜ್ಯಸಭೆಯಲ್ಲಿ ವ್ಯಂಗ್ಯವಾಡಿದ ಕಾಂಗ್ರೆಸ್ ಸಂಸದ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆಗೆ ‘ನೀವು ಇಂಥ ಮಾತುಗಳನ್ನಾಡಬೇಡಿ’ ಎಂದು ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ಹೇಳಿದರು. ‘ಖರ್ಗೆಯವರೇ, ನೀವು ಇಲ್ಲಿ ಒಬ್ಬ ಹಿರಿಯ ಸದಸ್ಯ. ಇಂಥ ಅಪ್ರಬುದ್ಧ ಮಾತುಗಳೆಲ್ಲ ನಿಮಗೆ ಶೋಭೆಯಲ್ಲ’ ಎಂದು ಧನಕರ್ ಸಲಹೆ ನೀಡಿದರು. ಮಲ್ಲಿಕಾರ್ಜುನ್ ಖರ್ಗೆಯವರು ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತಿದ್ದಂತೆ ಬಿಜೆಪಿ ನಾಯಕರೂ ತಿರುಗಿಬಿದ್ದರು. ಖರ್ಗೆ ಮಾತಿಗೆ ಪ್ರತಿಭಟಿಸಿದರು.
ಇಂದು ರಾಜ್ಯಸಭೆ ಕಲಾಪದಲ್ಲಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ‘2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘na khaunga na khane dunga (ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ) ಎಂದು ಹೇಳಿದರು. ಆದರೆ ಈಗ್ಯಾಕೆ ಕೆಲವು ಉದ್ಯಮಿಗಳಿಗೆ ತಿನ್ನಲು ಬಿಟ್ಟಿದ್ದೀರಿ (ಭ್ರಷ್ಟಾಚಾರ ಮಾಡಲು) ಎಂದು ನಾನು ಅವರಿಗೆ ಪ್ರಶ್ನಿಸಲು ಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಆತ್ಮೀಯ ಸ್ನೇಹಿತರೊಬ್ಬರ ಸಂಪತ್ತು 2.5 ವರ್ಷದಲ್ಲಿ 13ಪಟ್ಟು ಹೆಚ್ಚಾಗಿದೆ. 2014ರಲ್ಲಿ ಅವರ ಆಸ್ತಿ 50 ಸಾವಿರ ಕೋಟಿ ರೂಪಾಯಿ ಇತ್ತು. 2019ರಲ್ಲಿ ಇದು 1 ಲಕ್ಷ ಕೋಟಿ ರೂಪಾಯಿ ಆಯಿತು. ಆದರೀಗ 12 ಲಕ್ಷ ಕೋಟಿ ರೂ. ಆಗಿದೆ. ಈ ಎರಡೂವರೆ ವರ್ಷಗಳಲ್ಲಿ ಏನು ಮ್ಯಾಜಿಕ್ ಆಯಿತು ಎಂದು ನನಗೆ ಅರ್ಥವಾಗುತ್ತಿಲ್ಲ’ ಎಂದು ಅದಾನಿ ವಿಷಯವನ್ನೇ ಇಟ್ಟುಕೊಂಡು ವ್ಯಂಗ್ಯ ಮಾಡಿದರು.
ಹೀಗೆ ಖರ್ಗೆಯವರು ನಿರಂತರವಾಗಿ ಆರೋಪ ಮಾಡುತ್ತಿದ್ದಾಗ ಮಧ್ಯದಲ್ಲೇ ತಡೆದ ಜಗದೀಪ್ ಧನಕರ್ ಅವರು ‘ಸದನದಲ್ಲಿ ಚರ್ಚೆಗಳು ಆರೋಪಗಳಾಗಿ ಬದಲಾಗುವಂತಿಲ್ಲ. ಅದೂ ಕೂಡ ನೀವು ಆಧಾರಗಳೇ ಇಲ್ಲದೆ ಸುಮ್ಮನೆ ಆರೋಪ ಮಾಡಿ ಕಾಲಹರಣ ಮಾಡುವಂತಿಲ್ಲ. ಇಂಥ ಆರೋಪಗಳ ಮಧ್ಯೆ ಉಪಯುಕ್ತ ವಿಷಯಗಳ ಚರ್ಚೆಗೆ ಬರುವುದಿಲ್ಲ. ಇಂಥದ್ದಕ್ಕೆ ನಾನು ಅವಕಾಶ ಕೊಡುವುದಿಲ್ಲ’ ಎಂದು ಹೇಳಿದರು.
ಇದನ್ನೂ ಓದಿ: Parliament Budget Session: ಸಂಸತ್ತಿನಲ್ಲಿ ಇಂದೂ ‘ಅದಾನಿ’ ಗಲಾಟೆ; ಎರಡೂ ಸದನಗಳ ಕಲಾಪ ಮಧ್ಯಾಹ್ನಕ್ಕೆ ಮುಂದೂಡಿಕೆ
ಬಳಿಕ ಬಿಜೆಪಿ ಸಂಸದ ಪಿಯೂಷ್ ಗೋಯೆಲ್ ಕೂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಗಳಿಗೆ ತಿರುಗೇಟು ನೀಡಿದರು. ‘ಖರ್ಗೆಯವರು ಅದ್ಯಾವುದೋ, ಸರ್ಕಾರಕ್ಕೆ ಸಂಬಂಧ ಪಡದ ಸಂಪತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಷೇರು ಮಾರುಕಟ್ಟೆ ಜತೆ ಥಳುಕು ಹಾಕಿಕೊಂಡಿರುವ ಲೆಕ್ಕಾಚಾರ. ಅದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಇರಲು ಹೇಗೆ ಸಾಧ್ಯ? ಈ ಬಗ್ಗೆ ಅವರು ಮಾಜಿ ಹಣಕಾಸು ಸಚಿವ (ಮನಮೋಹನ್ ಸಿಂಗ್) ಅವರನ್ನು ಕೇಳಿ, ತಿಳಿದುಕೊಳ್ಳುವುದು ಒಳ್ಳೆಯದು’ ಎಂದು ಹೇಳಿದರು.
ಹಾಗೇ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡಿ ‘ಯಾವುದೇ ವಿಷಯದಲ್ಲೂ ಕಾಂಗ್ರೆಸ್ನವರು ಅತ್ಯಂತ ಸುಲಭವಾಗಿ ನಾವು ಡಾಟಾ ಕೊಡುತ್ತೇವೆ ಎಂದು ಹೇಳಿಬಿಡುತ್ತಾರೆ. ಆದರೆ ನಂತರ ಪ್ರಧಾನಿ ನರೇಂದ್ರ ಮೋದಿಯವರನ್ನು ಅವಮಾನಿಸುವ ವಿಷಯಗಳೇ ಇರುತ್ತವೆ ಬಿಟ್ಟರೆ, ಬೇರೇನೂ ಇರುವುದಿಲ್ಲ. ಕಾಂಗ್ರೆಸ್ನವರು ಅತ್ಯಂತ ಸೂಕ್ಷ್ಮ ವಿಷಯಗಳಲ್ಲಿ ಪ್ರಧಾನಿ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಆಕ್ಷೇಪಿಸಿದರು.